ಸದ್ಯಕ್ಕೆ ‘ಸರಿ-ಬೆಸ ಕಾರು ಹಂಚಿಕೆ ಯೋಜನೆ’ ಜಾರಿ ಇಲ್ಲ
ದಿಲ್ಲಿ ಪರಿಸರ ಸಚಿವ ಗೋಪಾಲ್ ರೈ ಪ್ರಕಟನೆ
ದಿಲ್ಲಿ ಪರಿಸರ ಸಚಿವ ಗೋಪಾಲ್ ರೈ(PTI)
ಹೊಸದಿಲ್ಲಿ: ಮಳೆಯಿಂದಾಗಿ ವಾಯು ಗುಣಮಟ್ಟ ಸುಧಾರಿಸಿರುವುದರಿಂದ ದಿಲ್ಲಿಯಲ್ಲಿ ನ .13ರಿಂದ 20ರವರೆಗೆ ‘ಸರಿ-ಬೆಸ ಕಾರು ಹಂಚಿಕೆ ಯೋಜನೆ’ಯನ್ನು ಜಾರಿಗೊಳಿಸುವುದಿಲ್ಲ ಎಂದು ರಾಜ್ಯದ ಪರಿಸರ ಸಚಿವ ಗೋಪಾಲ್ ರೈ ಶುಕ್ರವಾರ ಪ್ರಕಟಿಸಿದ್ದಾರೆ.
‘‘ದೀಪಾವಳಿಯ ಬಳಿಕ ಇನ್ನೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸಲಾಗುವುದು’’ ಎಂದು ಸಚಿವರು ತಿಳಿಸಿದರು.
‘ಸರಿ-ಬೆಸ ಕಾರು ಹಂಚಿಕೆ ಯೋಜನೆ’ಯ ಪ್ರಕಾರ, ವಾರವೊಂದರ ನಿರ್ದಿಷ್ಟ ದಿನಗಳಂದು ಸರಿ ಸಂಖ್ಯೆಯ ನಂಬರ್ ಪ್ಲೇಟ್ಗಳನ್ನು ಹೊಂದಿರುವ ಮತ್ತು ಉಳಿದ ದಿನಗಳಂದು ಬೆಸ ಸಂಖ್ಯೆ ನಂಬರ್ ಪ್ಲೇಟ್ಗಳನ್ನು ಹೊಂದಿರುವ ಕಾರುಗಳು ರಸ್ತೆಗಿಳಿಯಬಹುದಾಗಿದೆ.
ದಿಲ್ಲಿಯ ಚಳಿಗಾಲದ ತಿಂಗಳುಗಳಲ್ಲಿ ವಾಯು ಗುಣಮಟ್ಟ ಕುಸಿದಾಗ ದಿಲ್ಲಿ ಸರಕಾರವು ಈ ಯೋಜನೆಯನ್ನು ಜಾರಿಗೊಳಿಸುತ್ತದೆ.
ದೀಪಾವಳಿಯ ಬಳಿಕ, ವಾಯು ಮಾಲಿನ್ಯವನ್ನು ನಿಭಾಯಿಸಲು ಸರಿ-ಬೆಸ ಕಾರು ಹಂಚಿಕೆ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಸೋಮವಾರ ದಿಲ್ಲಿಯ ಆಮ್ ಆದ್ಮಿ ಪಕ್ಷದ ಸರಕಾರ ಘೋಷಿಸಿತ್ತು.
ಆದರೆ, ಒಂದು ದಿನದ ಬಳಿಕ, ಈ ಯೋಜನೆಯ ಪ್ರಾಯೋಗಿಕ ಪರಿಣಾಮವನ್ನು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ನ ವಿಭಾಗ ಪೀಠವೊಂದು ಪ್ರಶ್ನಿಸಿತ್ತು ಹಾಗೂ ಅದು ‘‘ತೋರಿಕೆಗಾಗಿ ಮಾತ್ರ’’ ಎಂದು ಹೇಳಿತ್ತು.
ಈ ಹಿನ್ನೆಲೆಯಲ್ಲಿ, ನ್ಯಾಯಾಲಯದ ಪರಿಶೀಲನೆಯ ಬಳಿಕವಷ್ಟೇ, ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ದಿಲ್ಲಿ ಸರಕಾರ ಪ್ರಕಟಿಸಿತ್ತು.