ಬಿಹಾರ: ಪರೀಕ್ಷೆ ನಡೆಯುತ್ತಿದ್ದ ಹಾಲ್ಗೆ ನುಗ್ಗಿ ಅಭ್ಯರ್ಥಿಗಳಿಂದ ಉತ್ತರ ಪತ್ರಿಕೆಗಳನ್ನು ಕಸಿದುಕೊಂಡ ಗುಂಪು
ಪ್ರಶ್ನೆಪತ್ರಿಕೆ ಸೋರಿಕೆ ಆರೋಪ
ಪಾಟ್ನಾ: ಬಿಹಾರ ಲೋಕಸೇವಾ ಆಯೋಗ (ಪಿಬಿಎಸ್ಸಿ) ಪರೀಕ್ಷೆ ನಡೆಯುತ್ತಿದ್ದ ಹಾಲ್ಗೆ ನುಗ್ಗಿದ ಗುಂಪೊಂದು ಶುಕ್ರವಾರ ಪರೀಕ್ಷಾ ಮೇಲ್ವಿಚಾರಕರ ಸಮ್ಮುಖದಲ್ಲೇ ಪರೀಕ್ಷೆ ಬರೆಯುತ್ತಿದ್ದ ಅಭ್ಯರ್ಥಿಗಳಿಂದ ಉತ್ತರ ಪತ್ರಿಕೆಗಳನ್ನು ಕಸಿದುಕೊಂಡು ದಾಂಧಲೆ ನಡೆಸಿದ ಘಟನೆ, ಇಂಡಿಯಾ ಟುಡೇ ಟಿವಿ ಪ್ರಸಾರ ಮಾಡಿದ ಸಿಸಿಟಿವಿ ದೃಶ್ಯಾವಳಿಯಿಂದ ಬೆಳಕಿಗೆ ಬಂದಿದೆ.
ಪಾಟ್ನಾದ ಬಾಪು ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದ್ದು, ಬಿಪಿಎಸ್ಸಿ ಪ್ರಶ್ನೆಪತ್ರಿಕೆಗಳು ಮತ್ತು ಓಎಂಆರ್ ಶೀಟ್ಗಳು ಸೋರಿಕೆಯಾಗಿವೆ ಎಂದು ಹಲವು ಮಂದಿ ಆಕಾಂಕ್ಷಿಗಳು ಆಪಾದಿಸಿದರು. ಅಸಮರ್ಪಕ ಆಸನ ವ್ಯವಸ್ಥೆಯಿಂದಾಗಿ ಪ್ರಶ್ನೆಪತ್ರಿಕೆ ವಿತರಣೆಯಲ್ಲಿ 40-45 ನಿಮಿಷ ವಿಳಂಬವಾಗಿದೆ ಎಂದೂ ಆಕಾಂಕ್ಷಿಗಳು ದೂರಿದರು.
ಬಿಪಿಎಸ್ಸಿಯ 70ನೇ ಸಮಗ್ರ ಕ್ರೋಢೀಕೃತ ಸ್ಪರ್ಧಾತ್ಮಕ ಪರೀಕ್ಷೆ-2024ನ್ನು ಸುಮಾರು 400 ಮಂದಿ ಆಕಾಂಕ್ಷಿಗಳು ಬಹಿಷ್ಕರಿಸಿದರು. ಇದು ಪರೀಕ್ಷಾ ಕೇಂದ್ರದಲ್ಲಿ ಗೊಂದಲಕ್ಕೆ ಕಾರಣವಾಯಿತು.
ಪರೀಕ್ಷಾ ಕೇಂದ್ರಕ್ಕೆ ನುಗ್ಗಿದ ಕೆಲ ಮಂದಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಂದ ಉತ್ತರ ಪತ್ರಿಕೆಗಳನ್ನು ಕಸಿದುಕೊಂಡು ದಾಂಧಲೆ ನಡೆಸಿರುವುದು ಸಿಸಿಟಿವಿ ದೃಶ್ಯಾವಳಿಯಿಂದ ಕಂಡುಬಂದಿದೆ. ದಿಢೀರನೇ ಪರೀಕ್ಷಾ ಕೊಠಡಿಗೆ ನುಗ್ಗಿ ಪರೀಕ್ಷಕರನ್ನು ತಳ್ಳಿ ಪರೀಕ್ಷಾಕಾಂಕ್ಷಿಗಳ ಡೆಸ್ಕ್ ಮೇಲೆ ದಾಳಿ ನಡೆಸಿದರು. ಗುಂಪಿನಲ್ಲಿದ್ದ ಕೆಲವರು ಪ್ರಶ್ನೆಪತ್ರಿಕೆಗಳನ್ನು ಹರಿದು ಹಾಕಿದರೆ, ಇತರರು ಹೊರಗೆ ಓಡಿ ಅದನ್ನು ಇತರರಿಗೆ ಪ್ರದರ್ಶಿಸುತ್ತಿರುವುದು ಕಾಣಿಸುತ್ತಿದೆ.
ಹತಾಶರಾದ ಅಭ್ಯರ್ಥಿಗಳು ಸೇರಿದಂತೆ ಪರೀಕ್ಷಾ ಕೇಂದ್ರದ ಹೊರಗೆ ಗುಂಪು ಸೇರಿದ್ದ ಹಲವು ಮಂದಿ, ದಾಂಧಲೆ ನಡೆಸಿ ವಿಳಂಬದ ಕಾರಣಕ್ಕೆ ಪರೀಕ್ಷೆಗೆ ಹೆಚ್ಚುವರಿ ಸಮಯಾವಕಾಶ ನೀಡಬೇಕು ಎಂದು ಪರೀಕ್ಷಾ ಅಧೀಕ್ಷಕರು ಮತ್ತು ಮೇಲ್ವಿಚಾರಕನ್ನು ಆಗ್ರಹಿಸಿದರು.