ಬ್ರಾಹ್ಮಣ- ಶೂದ್ರರ ಕುರಿತ ಪೋಸ್ಟ್ ಗೆ ಕ್ಷಮೆ ಯಾಚಿಸಿದ ಅಸ್ಸಾಂ ಸಿಎಂ
Photo: twitter.com/NENowNews
ಗುವಾಹತಿ: ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರ ಸೇವೆ ಮಾಡುವುದು ಶೂದ್ರರ ಸಹಜ ಕರ್ತವ್ಯ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.
ಬಿಜೆಪಿಯ ಮನುವಾದಿ ಸಿದ್ಧಾಂತವನ್ನು ಇದು ಬಿಂಬಿಸುತ್ತದೆ ಎಂದು ಈ ಪೋಸ್ಟ್ ವಿರುದ್ಧ ವಿರೋಧ ಪಕ್ಷಗಳ ಮುಖಂಡರು ಕಿಡಿ ಕಾರಿದ್ದರು. ಹಿಂದುತ್ವ ಎನ್ನುವುದು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ನ್ಯಾಯ ವಿರೋಧಿ. ಇದು ಕಳೆದ ಕೆಲ ವರ್ಷಗಳಿಂದ ಅಸ್ಸಾಂನ ಮುಸ್ಲಿಮರು ಎದುರಿಸಿದ ದುರದೃಷ್ಟಕರ ಕ್ರೌರ್ಯದ ಪ್ರತೀಕ ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಹೇಳಿದ್ದರು.
ವಿವಾದ ಭುಗಿಲೆದ್ದ ಬೆನ್ನಲ್ಲೇ ಮುಖ್ಯಮಂತ್ರಿ ಹಿಮಾಂತ ಗುರುವಾರ ಕ್ಷಮೆಯಾಚಿಸಿದ್ದು, ಇದು ಭಗವದ್ಗೀತೆಯ ಶ್ಲೋಕವನ್ನು ತಪ್ಪಾಗಿ ಭಾಷಾಂತರ ಮಾಡಿರುವುದರಿಂದ ಆಗಿರುವ ಪ್ರಮಾದ ಎಂದು ಸ್ಪಷ್ಟಪಡಿಸಿದ್ದಾರೆ.
"ಈ ಪ್ರಮಾದ ನನ್ನ ಗಮನಕ್ಕೆ ಬಂದ ತಕ್ಷಣ ನಾನು ಈ ಪೋಸ್ಟ್ ಕಿತ್ತು ಹಾಕಿದ್ದೇನೆ. ಅಸ್ಸಾಂ ರಾಜ್ಯವು ಜಾತಿರಹಿತ ಸಮಾಜದ ಪರಿಪೂರ್ಣ ಚಿತ್ರಣವನ್ನು ಬಿಂಬಿಸುತ್ತದೆ. ಮಹಾಪುರುಷ ಶ್ರೀಮಂತ ಶಂಕರದೇವ ಮುನ್ನಡೆಸಿದ ಚಳವಳಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.
ಪ್ರತಿದಿನದಂತೆ ನಾನು ಭಗವದ್ಗೀತೆಯ ಒಂದು ಶ್ಲೋಕವನ್ನು ನನ್ನ ಸಾಮಾಜಿಕ ಜಾಲತಾಣ ಹ್ಯಾಂಡಲ್ ಮೂಲಕ ಅಪ್ಲೋಡ್ ಮಾಡಿರುತ್ತೇನೆ. ಇದುವರೆಗೆ ನಾನು 668 ಶ್ಲೋಕಗಳನ್ನು ಅಪ್ಲೋಡ್ ಮಾಡಿದ್ದೇನೆ. ಇತ್ತೀಚೆಗೆ ನನ್ನ ತಂಡದ ಸದಸ್ಯರು 18ನೇ ಅಧ್ಯಾಯದ 44ನೇ ಶ್ಲೋಕವನ್ನು ತಪ್ಪು ಭಾಷಾಂತರದೊಂದಿಗೆ ಪೋಸ್ಟ್ ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.