ಶತ್ರುಗಳು ಸುತ್ತುವರಿದಿರುವಾಗ ಹೇಗೆ ಬದುಕುಳಿಯಬೇಕು ಎಂಬುದನ್ನು ಇಸ್ರೇಲ್ ನಿಂದ ಅಸ್ಸಾಂ ಕಲಿಯಬೇಕಿದೆ : ಹಿಮಂತ ಬಿಸ್ವ ಶರ್ಮ
Photo : Indiatoday
ಗುವಾಹಟಿ : ಶತ್ರುಗಳು ಸುತ್ತುವರಿದಿರುವಾಗಲೂ ಹೇಗೆ ಬದುಕುಳಿಯಬೇಕು ಎಂಬ ಪಾಠವನ್ನು ಇಸ್ರೇಲ್ ನಿಂದ ಕಲಿಯಬೇಕಿದೆ ಎಂದು ಮಂಗಳವಾರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅಸ್ಸಾಂ ಜನತೆಗೆ ಕಿವಿಮಾತು ಹೇಳಿದ್ದಾರೆ.
ಸೋನಿತ್ ಪುರ್ ಜಿಲ್ಲೆಯ ಜಾಮುಗುರಿಹಾಟ್ ನಲ್ಲಿ ‘ಸ್ವಾಹಿದ್ ದಿವಸ್’ ಪ್ರಯುಕ್ತ ಏರ್ಪಡಿಲಾಗಿದ್ದ ಕಾರ್ಯಕ್ರಮದ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶರ್ಮ, ಅಸ್ಸಾಂ ಗಡಿಗಳು ಎಂದಿಗೂ ಸುರಕ್ಷಿತವಾಗಿರಲಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
“ನಾವು ಚಾರಿತ್ರಿಕವಾಗಿ ಬಾಂಗ್ಲಾದೇಶ, ಮಯನ್ಮಾರ್ ಹಾಗೂ ಪಶ್ಚಿಮ ಬಂಗಾಳದೊಂದಿಗೆ ಗಡಿ ಹಂಚಿಕೊಂಡಿದ್ದೇವೆ. ಅಸ್ಸಾಮಿಗಳು 12 ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ” ಎಂದು ಅವರು ಹೇಳಿದ್ದಾರೆ.
ನಮ್ಮನ್ನು ಶತ್ರುಗಳು ಸುತ್ತುವರಿದಿದ್ದರೂ, ಜ್ಞಾನ, ತಂತ್ರಜ್ಞಾನದೊಂದಿಗೆ ವಿಜ್ಞಾನ ಹಾಗೂ ಅಪ್ರತಿಮ ಶೌರ್ಯದೊಂದಿಗೆ ಹೇಗೆ ಬಲಿಷ್ಠ ದೇಶವಾಗಬಹುದು ಎಂಬ ಪಾಠವನ್ನು ಇಸ್ರೇಲ್ ನಂಥ ದೇಶಗಳ ಇತಿಹಾಸಗಳಿಂದ ಕಲಿಯಬೇಕಿದೆ. ಆಗ ಮಾತ್ರ ನಾವು ಒಂದು ಸಮುದಾಯವಾಗಿ ಬದುಕುಳಿಯಲು ಸಾಧ್ಯ” ಎಂದೂ ಅವರು ಪ್ರತಿಪಾದಿಸಿದ್ದಾರೆ.
ಸುದೀರ್ಘ ಆರು ವರ್ಷಗಳ ಕಾಲ ನಡೆದ ಅಸ್ಸಾಂ ಚಳವಳಿಯಲ್ಲಿನ ಪ್ರಪ್ರಥಮ ಹುತಾತ್ಮ ಎಂದು ಪರಿಗಣಿಸಲಾಗಿರುವ ಖರ್ಗೇಶ್ವರ್ ತಾಲೂಕ್ ದಾರ್ ಪುಣ್ಯ ಸ್ಮರಣೆಯ ಅಂಗವಾಗಿ ‘ಸ್ವಾಹಿದ್ ದಿವಸ್’ ಅನ್ನು ಆಚರಿಸಲಾಗುತ್ತದೆ. ಆಗಸ್ಟ್ 15, 1985ರಂದು ಅಸ್ಸಾಂ ಒಪ್ಪಂದ ಏರ್ಪಡುವುದರೊಂದಿಗೆ ಅಸ್ಸಾಂ ಚಳವಳಿ ಅಂತ್ಯಗೊಂಡಿತ್ತು.