13 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, ಹಿಮಾಚಲದಲ್ಲಿ ಕಾಂಗ್ರೆಸ್ ಮುನ್ನಡೆ
Photo: PTI
ಹೊಸದಿಲ್ಲಿ: ಏಳು ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಮತಗಳ ಎಣಿಕೆ ಆರಂಭವಾಗಿದೆ. ಲೋಕಸಭಾ ಚುನಾವಣೆ ನಡೆದ ಬಳಿಕ ನಡೆಯುತ್ತಿರುವ ಮೊದಲ ಉಪಚುನಾವಣೆ ಇದಾಗಿದ್ದು, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿವೆ.
ಪಶ್ಚಿಮ ಬಂಗಾಳದ ಎಲ್ಲ ನಾಲ್ಕು ಸ್ಥಾನಗಳಲ್ಲಿ ಟಿಎಂಸಿ ಮುಂದಿದೆ. 2021ರ ಚುನಾವಣೆಯಲ್ಲಿ ಮಣಿಕಂಟ್ಲಾ ಕ್ಷೇತ್ರದಲ್ಲಿ ಆಡಳಿತಾರೂಢ ಪಕ್ಷ ಗೆಲುವು ಸಾಧಿಸಿದ್ದರೆ, ರಾಯಗಂಜ್, ರಾಣಾಘಾಟ್ ದಕ್ಷಿಣ ಮತ್ತು ಬಗ್ದಾ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು. ಆದರೆ ಬಿಜೆಪಿ ಶಾಸಕರು ತೃಣಮೂಲಕ್ಕೆ ವಲಸೆ ಹೋಗಿದ್ದರು.
ಕಾಂಗ್ರೆಸ್ ಮುಖಂಡ ಹಾಗೂ ಮುಖ್ಯಮಂತ್ರಿ ಸುಖ್ವೀಂದರ್ ಸಿಂಗ್ ಅವರ ಪತ್ನಿ ಕಮಲೇಶ್ ಠಾಕೂರ್ ಅವರು ಡೆಹ್ರಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅವರು ತಮ್ಮ ಬಿಜೆಪಿ ಸ್ಪರ್ಧಿ ಹೋಶಿಯಾರ್ ಸಿಂಗ್ ಅವರಿಗಿಂತ ಮುಂದಿದ್ದಾರೆ. ನಲಗಢ್ನಲ್ಲಿ ಕೂಡಾ ಕಾಂಗ್ರೆಸ್ ಮುಂದಿದ್ದರೆ, ಹಮೀರ್ಪುರದಲ್ಲಿ ಬಿಜೆಪಿ ಮುಂದಿದೆ.
ಉತ್ತರಾಖಂಡದ ಮಂಗಳೌರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಈ ಮೊದಲು ಬಿಎಸ್ಪಿ ಜಯ ಗಳಿಸಿದ್ದ ಈ ಕ್ಷೇತ್ರ ಸರ್ವತ್ ಕರೀಮ್ ಅನ್ಸಾರಿ ನಿಧನದಿಂದ ತೆರವಾಗಿತ್ತು. ಮುಸ್ಲಿಮರು ಮತ್ತು ದಲಿತರ ಪ್ರಾಬಲ್ಯ ಹೊಂದಿದ ಈ ಕ್ಷೇತ್ರದಲ್ಲಿ ಬಿಜೆಪಿ ಹಿನ್ನಡೆಯಲ್ಲಿದೆ. ಬದರೀನಾಥ್ನಲ್ಲಿ ಕೂಡಾ ಆಡಳಿತ ಪಕ್ಷ ಹಿಂದಿದೆ.
ಆಮ್ ಆದ್ಮಿ ಪಕ್ಷಕ್ಕೆ ಅಗ್ನಿಪರೀಕ್ಷೆ ಎನ್ನಲಾದ ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ ಆಡಳಿತ ಪಕ್ಷ ಮುಂದಿದೆ. ಭೀಮಭಾರತಿ ರಾಜೀನಾಮೆಯಿಂದ ತೆರವಾಗಿದ್ದ ಬಿಹಾರದ ಉಪಚುನಾವಣೆಯಲ್ಲಿ ಜೆಡಿಯು ಮುಂದಿದೆ.
ಡಿಎಂಕೆ ಶಾಸಕ ಎನ್.ಪುಗಳೇಧಿ ನಿಧನದಿಮದ ತೆರವಾಗಿದ್ದ ತಮಿಳುನಾಡಿನ ವಿಕ್ರವಂಡಿ ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿ ಅನ್ನಿಯೂರು ಶಿವ ಮುನ್ನಡೆಯಲ್ಲಿದ್ದಾರೆ.