ವಿಧಾನಸಭಾ ಚುನಾವಣಾ ಫಲಿತಾಂಶ| ಅರುಣಾಚಲದಲ್ಲಿ ಅಧಿಕಾರ ಉಳಿಸಿಕೊಳ್ಳಲಿರುವ ಬಿಜೆಪಿ
ಸಿಕ್ಕಿಂ ನಲ್ಲಿ ಬಹುಮತದ ಗೆರೆಯನ್ನು ದಾಟಿದ ಆಡಳಿತಾರೂಢ SKM
Photo credit: ANI
ಹೊಸದಿಲ್ಲಿ: ಆರಂಭಿಕ ಮುನ್ನಡೆಯಲ್ಲಿ ಬಹುಮತದ ಸಮೀಪಿಸಿರುವ ಅರುಣಾಚಲ ಪ್ರದೇಶದ ಆಡಳಿತಾರೂಢ ಬಿಜೆಪಿ ಸರಕಾರ, 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆ ಮೂಲಕ ಅಧಿಕಾರವನ್ನು ತನ್ನ ಬಳಿಯೇ ಉಳಿಸಿಕೊಳ್ಳುವತ್ತ ದಾಪುಗಾಲಿಟ್ಟಿದೆ.
ಅರುಣಾಚಲ ಪ್ರದೇಶದಲ್ಲಿ ಈಗಾಗಲೇ ಬಿಜೆಪಿಯು 10 ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗಿದೆ. ಮುಖ್ಯಮಂತ್ರಿ ಪೇಮಾ ಖಂಡು ಹಾಗೂ ಉಪ ಮುಖ್ಯಮಂತ್ರಿ ಚೌನಾ ಮೈನ್ ಈಗಾಗಲೇ ಕ್ರಮವಾಗಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಚುನಾವಣಾ ಆಯೋಗ ದತ್ತಾಂಶದ ಪ್ರಕಾರ, ಲುಮ್ಲಾ, ಕಲಕ್ಟಂಗ್, ಕೊಲೊರಿಯಾಂಗ್, ನಾಚೊ, ಲಿಕಬಾಲಿ, ಬಸರ್, ಅಲಾಂಗ್ (ಪಶ್ಚಿಮ), ಅಲಾಂಗ್ (ಪೂರ್ವ ಹಾಗೂ ಇನ್ನಿತರ ಕ್ಷೇತ್ರಗಳು ಸೇರದಿಂತೆ ಅರುಣಾಚಲ ಪ್ರದೇಶದ 30 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಅರುಣಾಚಲ ಪ್ರದೇಶ ವಿಧಾನಸಭೆಯಲ್ಲಿ ಬಹುಮತಕ್ಕಾಗಿ 31 ಸ್ಥಾನಗಳಲ್ಲಿ ಜಯ ಸಾಧಿಸಬೇಕಿದೆ.
ಲೋಕಸಭಾ ಚುನಾವಣೆಯ ಪ್ರಥಮ ಹಂತದ ಮತದಾನದೊಂದಿಗೇ ಅರುಣಾಚಲ ಪ್ರದೇಶ ವಿಧಾನಸಭೆಯ 60 ಕ್ಷೇತ್ರಗಳಿಗೂ ಎಪ್ರಿಲ್ 19ರಂದು ಮತದಾನ ನಡೆದಿತ್ತು.
ಇನ್ನು, ಸಿಕ್ಕಿ ವಿಧಾನಸಭಾ ಚುನಾವಣೆಯಲ್ಲಿ ಸುಲಭ ಗೆಲುವಿನತ್ತ ದಾಪುಗಾಲಿಟ್ಟಿರುವ ಆಡಳಿತಾರೂಢ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 29 ಸ್ಥಾನಗಳಲ್ಲಿ ಆರಂಭಿಕ ಮುನ್ನಡೆ ಸಾಧಿಸಿದೆ. ವಿರೋಧ ಪಕ್ಷವಾದ ಸಿಕ್ಕಿಂ ಪ್ರಜಾಸತ್ತಾತ್ಮಕ ರಂಗವು ಕೇವಲ ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
32 ಸದಸ್ಯ ಬಲದ ಸಿಕ್ಕಿಂ ವಿಧಾನಸಭೆಗೂ ಎಪ್ರಿಲ್ 19ರಂದು ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯ ಸಂದರ್ಭದಲ್ಲೇ ಮತದಾನ ನಡೆದಿತ್ತು.