ನರೇಂದ್ರ ಮೋದಿ ಹೆಸರನ್ನು ಪ್ರಧಾನಿ ಹುದ್ದೆಗೆ ಅನುಮೋದಿಸಿದ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್
ಎನ್ಡಿಎ ಮೈತ್ರಿಕೂಟ ಪಕ್ಷಗಳ ಮಹತ್ವದ ಸಭೆ
Photo: PTI
ಹೊಸದಿಲ್ಲಿ: ಟಿಡಿಪಿ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ವರಿಷ್ಠ ನಿತೀಶ್ ಕುಮಾರ್ ಅವರು ನರೇಂದ್ರ ಮೋದಿಯನ್ನು ಪ್ರಧಾನಿ ಹುದ್ದೆಗೆ ಅನುಮೋದಿಸಿದ್ದಾರೆ.
ಇಂದು ಇಲ್ಲಿ ನಡೆದ ಎನ್ಡಿಎ ಮಿತ್ರಪಕ್ಷಗಳ ಸಭೆಯಲ್ಲಿ ನರೇಂದ್ರ ಮೋದಿಯನ್ನು ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ಪ್ರಧಾನಿ ಅಭ್ಯರ್ಥಿಯನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಜೆಡಿಯು ವರಿಷ್ಠ ನಿತೀಶ್ ಕುಮಾರ್, "ವಿರೋಧ ಪಕ್ಷಗಳ ಮೈತ್ರಿಕೂಟವು ದೇಶಕ್ಕಾಗಿ ಏನನ್ನೂ ಮಾಡಿಲ್ಲ. ನರೇಂದ್ರ ಮೋದಿ ಮಾತ್ರ ದೇಶಕ್ಕಾಗಿ ಕೆಲಸ ಮಾಡಿದ್ದಾರೆ" ಎಂದು ಪ್ರಶಂಸಿಸಿದರು.
ಜೆಡಿ(ಎಸ್) ನಾಯಕ ಎಚ್ ಡಿ ಕುಮಾರಸ್ವಾಮಿ, ಜನ ಸೇನಾ ಪಕ್ಷದ ಸ್ಥಾಪಕ ಪವನ್ ಕಲ್ಯಾಣ್, ಎನ್ಸಿಪಿ ಮುಖ್ಯಸ್ಥ ಅಜಿತ್ ಪವಾರ್, ಲೋಕ ಜನಶಕ್ತಿ ನಾಯಕ ಚಿರಾಗ್ ಪಾಸ್ವಾನ್ ಈ ಮಹತ್ವದ ಸಭೆಯಲ್ಲಿ ಉಪಸ್ಥಿತರಿದ್ದರು.
ಸಭೆಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಂತೆ “ಮೋದಿ-ಮೋದಿ” ಘೋಷಣೆಗಳು ಮೊಳಗಿದವು.
ಮೋದಿ ಅವರನ್ನು ತಮ್ಮ ನಾಯಕನನ್ನಾಗಿಸಲು ಎಲ್ಲಾ ಎನ್ಡಿಎ ಮೈತ್ರಿಕೂಟದ ಪಕ್ಷಗಳು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಪತ್ರಗಳನ್ನು ನೀಡಲಿವೆ.
ರಾಷ್ಟ್ರಪತಿಗಳನ್ನು ಭೇಟಿಯಾಗುವ ವೇಳೆ ಪ್ರಧಾನಿ ಜೊತೆ ನಾಯ್ಡು ಮತ್ತು ನಿತೀಶ್ ಕೂಡ ಇರಲಿದ್ದಾರೆ.