ಬಿಜೆಪಿ ದಿಲ್ಲಿಯನ್ನು ಉತ್ತರ ಪ್ರದೇಶವನ್ನಾಗಿ ಮಾಡಲು ಬಯಸುತ್ತಿದೆ : ಆತಿಶಿ

Photo |NDTV
ಹೊಸದಿಲ್ಲಿ: ದಿಲ್ಲಿಯನ್ನು ಉತ್ತರ ಪ್ರದೇಶವನ್ನಾಗಿ ಮಾಡಲು ಬಿಜೆಪಿ ಬಯಸುತ್ತಿದೆ, ರಾಷ್ಟ್ರ ರಾಜಧಾನಿಯಲ್ಲಿ ಆಪ್ ತನ್ನ ಹಿಡಿತವನ್ನು ಕಳೆದುಕೊಂಡ ಮೂರೇ ದಿನಕ್ಕೆ ನಗರವು ವಿದ್ಯುತ್ ಕಡಿತವನ್ನು ಎದುರಿಸುತ್ತಿದೆ ಎಂದು ದಿಲ್ಲಿಯ ಹಂಗಾಮಿ ಸಿಎಂ ಆತಿಶಿ ಆರೋಪಿಸಿದ್ದಾರೆ.
ದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆತಿಶಿ, ಆಪ್ ಸರಕಾರ ಅಧಿಕಾರದಿಂದ ಕೆಳಗಿಳಿದ ಮೂರು ದಿನಗಳಲ್ಲಿ, ನಗರದ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ವರದಿಯಾಗಿದೆ. ಜನರು ಈಗ ಇನ್ವರ್ಟರ್ ಗಳನ್ನು ಖರೀದಿಸಲು ಪ್ರಾರಂಭಿಸಿದ್ದಾರೆ. ಬಿಜೆಪಿ ದಿಲ್ಲಿಯನ್ನು ಉತ್ತರಪ್ರದೇಶವನ್ನಾಗಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಆಪ್ ಸರ್ಕಾರದಲ್ಲಿ, ವಿದ್ಯುತ್ ವ್ಯವಸ್ಥೆಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗಿದೆ. ಅದರೆ ಈಗ ಬಿಜೆಪಿ ಅಧಿಕಾರಕ್ಕೆ ಬಂದ ಮೂರೇ ದಿನಗಳಲ್ಲಿ ಎಲ್ಲವೂ ಅಧಃಪತನಕ್ಕೆ ತಲುಪಿದೆ. ಬಿಜೆಪಿಗೆ ಆಡಳಿತ ನಡೆಸುವುದು ಹೇಗೆ ಎಂದು ತಿಳಿದಿಲ್ಲ. ಉತ್ತರ ಪ್ರದೇಶದಂತೆಯೇ ದಿಲ್ಲಿಯಲ್ಲಿ ದೀರ್ಘಾವಧಿಯ ವಿದ್ಯುತ್ ಕಡಿತದ ಪರಿಸ್ಥಿತಿಯನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಆತಿಶಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ದಿಲ್ಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ ದೇವ, ದಿಲ್ಲಿಯಲ್ಲಿ ಎಲ್ಲಿಯೂ ವಿದ್ಯುತ್ ಕಡಿತಗೊಳಿಸಲಾಗಿಲ್ಲ. ಆಧಾರ ರಹಿತ ಹೇಳಿಕೆಗಳನ್ನು ನೀಡುವ ಬದಲು ದಿಲ್ಲಿಯ ಯಾವ ಪ್ರದೇಶದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ ಎಂಬ ಬಗ್ಗೆ ಮಾಹಿತಿಯನ್ನು ನೀಡಬೇಕು. ಯಾವುದೇ ವಿದ್ಯುತ್ ಕಡಿತ ಅಥವಾ ಅನಗತ್ಯವಾಗಿ ದುರಸ್ತಿಗೆ ವಿಳಂಬ ಮಾಡುವಲ್ಲಿ ಹಂಗಾಮಿ ಮುಖ್ಯಮಂತ್ರಿಗಳೊಂದಿಗೆ ಸಹಕರಿಸಿದರೆ, ಹೊಸ ಸರ್ಕಾರ ರಚನೆಯಾದ ನಂತರ ತನಿಖೆ ಎದುರಸಬೇಕಾಗಬಹುದು ಎಂದು ಹೇಳಿದ್ದಾರೆ.