ಸಂಸತ್ತಿನ ಮೇಲೆ ದಾಳಿ ಪ್ರಕರಣ; 5ನೇ ಆರೋಪಿಯ ಬಂಧನ
ಯುಎಪಿಎ ಸೆಕ್ಷನ್ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲು
Photo: PTI
ಹೊಸದಿಲ್ಲಿ: ಸಂಸತ್ತಿನ ಮೇಲೆ ದಾಳಿ ಪ್ರಕರಣದ ಐದನೇ ಆರೋಪಿಯನ್ನು ಗುರುಗ್ರಾಮದಿಂದ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ಆರನೇ ಆರೋಪಿ ಲಿತ್ ಎಂಬಾತ ಇನ್ನೂ ತಲೆ ಮರೆಸಿಕೊಂಡಿದ್ದಾನೆ. ಐದನೇ ಆರೋಪಿ ವಿಶಾಲ್ ಶರ್ಮಾ, ಈ ಸಂಚು ರೂಪಿಸಿದ್ದ ನಾಲ್ಕು ಮಂದಿಗೆ ಆಶ್ರಯ ನೀಡಿದ್ದ ಎಂದು ಎಂದು ಪೊಲೀಸರು ಹೇಳಿದ್ದಾರೆ.
ಸಾಗರ್ ಶರ್ಮಾ ಮತ್ತು ಮನೋರಂಜನ್. ಡಿ ಅವರು ಲೋಕಸಭೆ ಅಧಿವೇಶನ ನಡೆಯುತ್ತಿದ್ದ ಸಂದರ್ಭದಲ್ಲಿ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಕಲಾಪ ನಡೆಯುತ್ತಿದ್ದ ಸ್ಥಳಕ್ಕೆ ಹಾರಿ ಹಳದಿ ಅನಿಲವನ್ನು ಸಿಂಪಡಿಸಿದ್ದರು. ಸಂಸತ್ತಿನ ಹೊರಗೆ ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಪ್ರತಿಭಟನೆ ನಡೆಸುತ್ತಿದ್ದರು. ನಾಲ್ಕು ಮಂದಿಯೂ ನಿರುದ್ಯೋಗಿಗಳಾಗಿದ್ದರು ಎಂದು ಹೇಳಲಾಗಿದೆ.
2001ರಲ್ಲಿ ಸಂಸತ್ ದಾಳಿ ನಡೆದ ದಿನವೇ ನಡೆದ ಈ ಭದ್ರತಾ ಲೋಪ ಪ್ರಕರಣ ಸಂಸತ್ ಕಟ್ಟಡಕ್ಕೆ ಇರುವ ಭದ್ರತಾ ವ್ಯವಸ್ಥೆಯ ಮೇಲೆ ನಿಗಾ ವಹಿಸಲು ಕಾರಣವಾಗಿದೆ. ಆರೋಪಿಗಳಾದ ಸಾಗರ್ ಹಾಗೂ ಮಜೋರಂಜನ್. ಡಿ ಹೊಂದಿದ್ದ ಪಾಸ್ ಗಳಿಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಸಹಿ ಇತ್ತು. ಈ ಭದ್ರತಾ ಲೋಪಕ್ಕೆ ಬಿಜೆಪಿ ಮೇಲೆ ವಿರೋಧ ಪಕ್ಷಗಳು ಹರಿಹಾಯ್ದಿವೆ.
ದೆಹಲಿ ಪೊಲೀಸ್ ಇಲಾಖೆಯ ವಿಶೇಷ ಕೋಶ ಯುಎಪಿಎ ಸೆಕ್ಷನ್ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದೆ. ಆರು ಮಂದಿ ಆರೋಪಿಗಳು ಬೇರೆ ಬೇರೆ ರಾಜ್ಯದವರಾಗಿದ್ದು, ಪರಸ್ಪರ ಪರಿಚಿತರು.. ಎಲ್ಲರೂ ನಿರುದ್ಯೋಗಿಗಳಾಗಿದ್ದು. ರೈತರ ಪ್ರತಿಭಟನೆ, ಮಣಿಪುರ ಸಂಘರ್ಷ ಮತ್ತು ನಿರುದ್ಯೋಗದಿಂದ ಹತಾಶರಾಗಿದ್ದಾಗಿ ಅಮೋಲ್ ಶಿಂಧೆ ತನಿಖೆ ವೇಳೆ ಹೇಳಿದ್ದಾನೆ ಎಂದು ಪೊಲೀಸರಸು ವಿವರಿಸಿದ್ದಾರೆ.
ಇವರು ಯಾವುದೇ ಸಂಘಟನೆಯ ಕಾರ್ಯಕರ್ತರಾಗಿದ್ದಾರೆಯೇ ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ನೀಲಂ ಬಿಇಡಿ ಮತ್ತು ಎಂಇಡಿ, ಎಂಫಿಲ್ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಜ್ಜಾಗುತ್ತಿದ್ದ ವಿದ್ಯಾರ್ಥಿನಿಯಾಗಿದ್ದರೆ, ಅಮೋಲ್, ಮಹಾರಾಷ್ಟ್ರದ ಲಾತೂರ್ ಮೂಲದವನು. ಮನೋರಂಜನ್. ಡಿ, ಪ್ರತಾಪ್ ಸಿಂಹ ಪ್ರತಿನಿಧಿಸುವ ಮೈಸೂರು ಕ್ಷೇತ್ರದವನು.
ಭದ್ರತಾ ಲೋಪ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಗೃಹ ವ್ಯವಹಾರಗಳ ಸಚಿವಾಲಯ ಆದೇಶ ನೀಡಿದೆ. ಸಿಆರ್ ಪಿಎಫ್ ಮಹಾನಿರ್ದೇಶಕ ಅನೀಶ್ ದಯಾಳ್ ಸಿಂಗ್ ನೇತೃತ್ವದಲ್ಲಿ ತಂಡ ರಚಿಸಲಾಗಿದೆ ಎಂದು ಗೃಹ ಸಚಿವಾಲಯ ಹೇಳಿದೆ.