ಸಂಸತ್ ಮೇಲಿನ ದಾಳಿ: ಆರೋಪಿಗಳು ಸಂಸತ್ತಿನ ಭದ್ರತೆ ಭೇದಿಸಿದ್ದು ಹೇಗೆ?
ಹೊಸದಿಲ್ಲಿ: ಲೋಕಸಭೆಯಲ್ಲಿ ಬುಧವಾರ ಸದನಕ್ಕೆ ನುಗ್ಗಿ ಆತಂಕ ಸೃಷ್ಟಿಸಿದ ಪ್ರಕರಣದ ಆರೋಪಿಗಳು ಸಂಸತ್ ಭವನದೊಳಗೆ ಭದ್ರತೆ ಭೇದಿಸಿ ಹೊಗೆ ಬಾಂಬ್ ತೆಗೆದುಕೊಂಡು ಹೋಗಿದ್ದಾರೆ. ಸಂಸತ್ ಭವನದ ಒಳಗೆ ಹೋಗಬೇಕಾದರೆ ಕನಿಷ್ಠ ಐದು ಹಂತದ ಭದ್ರತಾ ಪರಿಶೀಲನೆ ದಾಟಿಯೇ ಹೋಗಬೇಕು. ಆದರೂ ಆರೋಪಿಗಳು ಸಂಸತ್ತಿನೊಳಗೆ ಹೊಗೆ ಬಾಂಬ್ ಒಯ್ದಿರುವುದು ಸಂಸತ್ತಿನ ಭದ್ರತೆಯ ಕುರಿತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ನೂತನ ಸಂಸತ್ ಭವನದಲ್ಲಿ ಕಡಿಮೆ ಭದ್ರತಾ ಸಿಬ್ಬಂದಿಯ ನಿಯೋಜನೆ ಮಾಡಿರುವುದು ಭದ್ರತಾ ವೈಫಲ್ಯಕ್ಕೆ ಕಾರಣವಾಗಿದೆ. ಅಲ್ಲದೇ ಸದನದ ಮಹಡಿಯಿಂದ ಸಂದರ್ಶಕರ ಗ್ಯಾಲರಿಯ ಎತ್ತರ ಕಡಿಮೆಯಿರುವುದು ಆರೋಪಿಗಳಿಗೆ ಸಹಕಾರಿಯಾಗಿದೆ. ಸಂದರ್ಶಕರ ಸಂಖ್ಯೆ ಹೆಚ್ಚಿದ್ದರಿಂದ ಬೂಟುಗಳನ್ನು ಪರಿಶೀಲಿಸದಿರುವುದು ಕೂಡ ಬುಧವಾರದ ಲೋಕಸಭೆಯ ಭದ್ರತಾ ಉಲ್ಲಂಘನೆಗೆ ಕಾರಣವಾಗಿದೆ ಎಂದು ಸಂಸತ್ತಿನ ಭದ್ರತಾ ಸೇವೆಗಳ ಅಧಿಕಾರಿಗಳು ಮತ್ತು ದಿಲ್ಲಿ ಪೊಲೀಸರು ತಿಳಿಸಿದ್ದಾರೆ ಎಂದು indian express ವರದಿ ಮಾಡಿದೆ.
ಘಟನೆಯ ಬಳಿಕ ದಿಲ್ಲಿ ಪೊಲೀಸ್ ಭದ್ರತಾ ವಿಭಾಗವು ಸಂಸತ್ತಿನಲ್ಲಿ ಮತ್ತು ಸುತ್ತಮುತ್ತಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಸಭೆ ನಡೆಸಿದೆ ಎಂದು ತಿಳಿದುಬಂದಿದೆ. ಡಿಸೆಂಬರ್ 6 ರಂದು ಖಾಲಿಸ್ತಾನ್ ಪ್ರತ್ಯೇಕತಾವಾದಿ ನಾಯಕ ಗುರುಪತ್ವಂತ್ ಸಿಂಗ್ ಪನ್ನುನ್ "ಡಿಸೆಂಬರ್ 13 ರಂದು ಅಥವಾ ಅದಕ್ಕೂ ಮೊದಲು" ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಆದರೆ ಈ ಭದ್ರತಾ ಲೋಪ, ಸಂಸತ್ತಿನೊಳಗಿನ ದಾಳಿಗೆ ಪನ್ನುನ್ ಬೆದರಿಕೆಗೆ ಸಂಬಂಧಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪನ್ನೂನ್ ಬೆದರಿಕೆಯ ನಂತರ ದಿಲ್ಲಿ ಪೊಲೀಸರು ತಮ್ಮ ನಿಯೋಜನೆಯನ್ನು 250 ರಿಂದ 300 ಕ್ಕೆ ಹೆಚ್ಚಿಸಿದ್ದಾರೆ ಎನ್ನಲಾಗಿದೆ. ದಿಲ್ಲಿ ಪೊಲೀಸರ ಮೂಲಗಳ ಪ್ರಕಾರ, ಆರೋಪಿಗಳಾದ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಮಧ್ಯಾಹ್ನ 1 ಗಂಟೆಯ ಮೊದಲು ಸಂದರ್ಶಕರ ಗ್ಯಾಲರಿಗೆ ತಲುಪಿದ್ದಾರೆ. ಸಂಸತ್ತಿನಲ್ಲಿ ಒಟ್ಟು 6 ಗ್ಯಾಲರಿಗಳಿವೆ. ಇವು ಸಂಸದರು ಕುಳಿತುಕೊಳ್ಳುವ ಸ್ಥಳದ ಮೇಲಿದೆ. ಗ್ಯಾಲರಿಯ ಮುಂದಿನ ಸಾಲು ಸಂಸದರು ಕುಳಿತುಕೊಳ್ಳುವ ಸ್ಥಳಕ್ಕಿಂತ ಹತ್ತೂವರೆ ಅಡಿ ಎತ್ತರದಲ್ಲಿದೆ.
ಈ ಎತ್ತರವು ಹಿಂದಿನ ಸಂಸತ್ ಭವನದಲ್ಲಿ ಇದ್ದುದಕ್ಕಿಂತ ಕಡಿಮೆಯಾಗಿದೆ. ಇದು ಆರೋಪಿಗಳಿಗೆ ಜಿಗಿಯಲು ಅನುವು ಮಾಡಿಕೊಟ್ಟಿದೆ ಎನ್ನಲಾಗಿದೆ. "ಇಂತಹ ಘಟನೆಯನ್ನು ತಡೆಯಲು ಯಾವುದೇ ಮಹತ್ವದ ತಡೆಗೋಡೆ ಅಥವಾ ಗೋಡೆ ಇಲ್ಲ" ಎಂದು ಅಧಿಕಾರಿಯೊಬ್ಬರು ಹೇಳಿದರು. ಭದ್ರತಾ ಲೋಪ ವರದಿಯಾದ ಬಳಿಕ ಲೋಕಸಭೆ ಸ್ಪೀಕರ್ ಅವರು ಸಂದರ್ಶಕರ ಗ್ಯಾಲರಿಗಳ ಮುಂದೆ ಗಾಜು ಅಳವಡಿಸುವಂತೆ ಸೂಚಿಸಿದ್ದಾರೆ.
ಸಂಸತ್ತಿನ ಭದ್ರತೆಯನ್ನು CRPF ಮತ್ತು ದೆಹಲಿ ಪೊಲೀಸರನ್ನು ಒಳಗೊಂಡ ತಂಡ ನಿರ್ವಹಿಸುತ್ತಿದೆ. ದಿನಂಪ್ರತೀ ನೂರಾರು ಸಂದರ್ಶಕರು ಸಂಸತ್ತಿನ ಭೇಟಿಗೆ ಬರುತ್ತಿದ್ದಾರೆ. ಹೊಸ ಸಂಸತ್ತು ಉದ್ಘಾಟನೆಯಾದಾಗಿನಿಂದ, ಸಿಬ್ಬಂದಿ ಸಾಮರ್ಥ್ಯ ಸೀಮಿತವಾಗಿರುವುದು ಭದ್ರತಾ ಲೋಪಕ್ಕೆ ಕಾರಣವಾಗಿರಲೂ ಬಹುದು ಎನ್ನಲಾಗಿದೆ.
ಸಂಸತ್ತಿನ ಒಳಗೆ ಸಾಮಾನ್ಯವಾಗಿ 301 ಭದ್ರತಾ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿತ್ತು. ಆದರೆ ಬುಧವಾರ 176 ಮಂದಿ ಹಾಜರಿದ್ದರು ಎಂದು ತಿಳಿದುಬಂದಿದೆ.
"ಸಂಸತ್ ಭೇಟಿಗೆ ವಿದ್ಯಾರ್ಥಿಗಳು ಮತ್ತು ಜನರು ಬಸ್‌ಗಳಲ್ಲಿ ಬರುತ್ತಿದ್ದಾರೆ... ನಾವು ಪ್ರತಿಯೊಬ್ಬರ ಪಾಸ್ ಮತ್ತು ಐಡಿ ಗಳನ್ನು ಪರಿಶೀಲಿಸಬೇಕು" ಎಂದು ಅಧಿಕಾರಿಯೊಬ್ಬರು ಹೇಳಿದರು. ಇಬ್ಬರು ವ್ಯಕ್ತಿಗಳು ತಮ್ಮ ಬೂಟುಗಳೊಳಗೆ ಬಣ್ಣದ ಹೊಗೆ ಡಬ್ಬಿಗಳನ್ನು ಕಣ್ತಪ್ಪಿಸಿ ತಂದಿದ್ದಾರೆ. ಸಾಮಾನ್ಯವಾಗಿ ಬೂಟುಗಳನ್ನು ಪರಿಶೀಲಿಸಲಾಗುವುದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“ನಮ್ಮಲ್ಲಿ ಸ್ಕ್ಯಾನರ್‌ಗಳು ಮತ್ತು ಮೆಟಲ್ ಡಿಟೆಕ್ಟರ್‌ಗಳಿವೆ. ಎಲ್ಲಾ ಹಂತಗಳಲ್ಲಿಯೂ ಪರಿಶೀಲನೆ ಮಾಡಲಾಗುತ್ತದೆ. ನಾವು ಸಾಮಾನ್ಯವಾಗಿ ಬೂಟುಗಳನ್ನು ಪರಿಶೀಲಿಸುವುದಿಲ್ಲ… ಮೇಲ್ನೋಟಕ್ಕೆ, ಹೊಗೆ ಬಾಂಬ್‌ಗಳು ಪ್ಲಾಸ್ಟಿಕ್‌ನಿಂದ ಮಾಡಲ್ಪಟ್ಟಿದೆ ಎಂದು ತೋರುತ್ತದೆ. ಆದ್ದರಿಂದ ಯಂತ್ರಗಳು ಅವುಗಳನ್ನು ಡಿಟೆಕ್ಟ್ ಮಾಡಲಿಲ್ಲ ”ಎಂದು ಅಧಿಕಾರಿಯೊಬ್ಬರು ಹೇಳಿದರು.