ಅಯೋಧ್ಯೆ ವಿವಾದ ಕುರಿತು ತನ್ನ ಕೆಟ್ಟ ತೀರ್ಪಿಗಾಗಿ ನ್ಯಾ.ಚಂದ್ರಚೂಡ್ ದೇವರನ್ನು ದೂಷಿಸಬಾರದು
ನ್ಯಾ.ಚಂದ್ರಚೂಡ್ | PC : PTI
ಕಳೆದ ವಾರಾಂತ್ಯದಲ್ಲಿ ಪುಣೆಯಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಂದರ್ಭ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಡಿ.ವೈ.ಚಂದ್ರಚೂಡ್ ಅವರು ತಾನು ಸರ್ವೋಚ್ಚ ನ್ಯಾಯಾಲಯದ ಪೀಠದ ಸದಸ್ಯನಾಗಿದ್ದ ನೀಡಿದ್ದ ಅತ್ಯಂತ ವಿವಾದಾತ್ಮಕ ತೀರ್ಪೊಂದರ ಕುರಿತು ಅಚ್ಚರಿಯ ಅಂಶವೊಂದನ್ನು ಬಹಿರಂಗೊಳಿಸಿದ್ದಾರೆ.
‘ನಾವು ತೀರ್ಪು ನೀಡಬೇಕಾದ, ಆದರೆ ಪರಿಹಾರವನ್ನು ತಲುಪಲು ಸಾಧ್ಯವಾಗದ ಪ್ರಕರಣಗಳು ಆಗಾಗ್ಗೆ ನಮ್ಮ ಮುಂದಿರುತ್ತವೆ. ಮೂರು ತಿಂಗಳ ಕಾಲ ನನ್ನ ಮುಂದಿದ್ದ ಅಯೋಧ್ಯೆ (ರಾಮ ಜನ್ಮಭೂಮಿ-ಬಾಬ್ರಿ ಮಸೀದಿ) ವಿವಾದದ ಸಂದರ್ಭದಲ್ಲಿಯೂ ಹೀಗೆಯೇ ಆಗಿತ್ತು. ನಾನು ದೇವರೆದುರು ಕುಳಿತು ಪರಿಹಾರವನ್ನು ಒದಗಿಸುವಂತೆ ಪ್ರಾರ್ಥಿಸಿದ್ದೆ’ ಎಂದು ನ್ಯಾ.ಚಂದ್ರಚೂಡ್ ಹೇಳಿದ್ದರು.
ದೇವರೇ ಸಾಕ್ಷಾತ್ಕಾರಗೊಂಡು ‘ಪರಿಹಾರವನ್ನು’ ಒದಗಿಸಿದ್ದ ಎಂದು ನಾವು ಕಲ್ಪಿಸಬಹುದಾದ ಎದ್ದುಕಾಣುವ ಚಿತ್ರಣವನ್ನು ಭಾರತದ ಉನ್ನತ ನ್ಯಾಯಾಧೀಶರು ನೀಡಿದ್ದಾರೆ. ನ್ಯಾ.ಚಂದ್ರಚೂಡ್ ಮತ್ತು ಅವರ ಸಹೋದ್ಯೋಗಿಗಳು ಅಂತಿಮವಾಗಿ ನೀಡಿದ ತೀರ್ಪನ್ನು ನೋಡಿದರೆ ’‘ನಾನು ಇನ್ನೊಂದು ದೇವಸ್ಥಾನವನ್ನು ಹೊಂದಿರಲು ನನಗೆ ಭೂಮಿಯನ್ನು ನೀಡು" ಎಂದು ದೇವರು ಹೇಳಿರುವಂತೆ ಕಾಣುತ್ತದೆ.
ದೇವರು ಹೇಳಿದ ಬಳಿಕ ತಮ್ಮ ಸಂಪೂರ್ಣ ಸಾಮರ್ಥ್ಯದೊಂದಿಗೆ ಈ ‘ಪರಿಹಾರ’ಕ್ಕೆ ನ್ಯಾಯಾಂಗದ ತಾರ್ಕಿಕತೆಯನ್ನು ಲೇಪಿಸಿ ತೀರ್ಪನ್ನು ಪ್ರಕಟಿಸುವುದು ನ್ಯಾಯಾಧೀಶರಿಗೆ ಉಳಿದಿದ್ದ ಏಕೈಕ ಕೆಲಸವಾಗಿತ್ತು. ತನಗಾಗಿ ದೇವಸ್ಥಾನವು ಭದ್ರಗೊಂಡ ಬಳಿಕ ದೇವರು ತನ್ನ ದೈವಿಕ ತೀರ್ಪಿನಲ್ಲಿ ಐವರು ನ್ಯಾಯಾಧೀಶರು ಹೊಂದಿದ್ದ ನಂಬಿಕೆಗಾಗಿ ಅವರನ್ನು ಗೌರವಿಸಿದ್ದ. ಆ ಸಮಯದಲ್ಲಿ ಸಿಜೆಐ ಆಗಿದ್ದ ರಂಜನ್ ಗೊಗೊಯ್ ಅವರನ್ನು ರಾಜ್ಯಸಭೆಗೆ ಕಳುಹಿಸಿದ್ದ ದೇವರು ಪೀಠದಲ್ಲಿದ್ದ ಇಬ್ಬರು ನ್ಯಾಯಾಧೀಶರನ್ನು ಬಳಿಕ ಸಿಜೆಐ ಹುದ್ದೆಗೇರಿಸಿದ್ದ. ಓರ್ವ ನ್ಯಾಯಾಧೀಶರು ನಿವೃತ್ತಿಯ ಬಳಿಕ ರಾಜ್ಯಪಾಲರಾಗುವಂತೆ ಮತ್ತು ಇನ್ನೋರ್ವ ನ್ಯಾಯಾಧೀಶರು ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಯ ಮುಖ್ಯಸ್ಥರಾಗುವಂತೆ ನೋಡಿಕೊಂಡಿದ್ದ.
ಪರಿಹಾರವನ್ನು ಒದಗಿಸುವಲ್ಲಿ ದೇವರ ಪಾತ್ರವು ಅಯೋಧ್ಯೆ ತೀರ್ಪಿನ ಕುರಿತು ನಿಗೂಢತೆಗಳ ಪೈಕಿ ಒಂದನ್ನು ಮಾತ್ರ ಬೆಳಕಿಗೆ ತರಲು ನಮಗೆ ನೆರವಾಗುತ್ತದೆ; ಸರ್ವೋಚ್ಚ ನ್ಯಾಯಾಲಯವು ಆವರೆಗೆ ಹೊರಡಿಸಿದ ಎಲ್ಲ ತೀರ್ಪುಗಳಲ್ಲಿ ಇದೊಂದೇ ತೀರ್ಪು ಯಾವುದೇ ನ್ಯಾಯಾಧೀಶರ ಸಹಿಯನ್ನು ಹೊಂದಿರಲಿಲ್ಲ. ಎಷ್ಟಾದರೂ ದೇವರ ಕೈವಾಡಕ್ಕೆ ಔಪಚಾರಿಕವಾಗಿ ಎಲ್ಲ ಶ್ರೇಯವನ್ನು ಈಗ ನೀಡಲು ಸಾಧ್ಯವಿಲ್ಲ ಅಲ್ಲವೇ?
ತಮಾಷೆಯನ್ನು ಬದಿಗಿಡೋಣ, ನ್ಯಾ. ಚಂದ್ರಚೂಡ್ ಅವರ ಹೇಳಿಕೆಯು ಕನಿಷ್ಠ ಐದು ಕಾರಣಗಳಿಗಾಗಿ ಆತಂಕಕಾರಿಯಾಗಿದೆ.
ಮೊದಲನೆಯದಾಗಿ ಅವರು ಮತ್ತು ಅಯೋಧ್ಯೆ ಪೀಠ ಖಂಡಿತವಾಗಿಯೂ ವಿವಾದಕ್ಕೆ ‘ಪರಿಹಾರವನ್ನು ಕಂಡುಕೊಂಡಿರಲಿಲ್ಲ’ ಮತ್ತು ಪರಿಹಾರವನ್ನು ತಾವೇ ಕಂಡುಕೊಂಡಿದ್ದು ಎಂದು ಅವರು ತೋರಿಸಿಕೊಳ್ಳುವುದು ಅಪ್ರಾಮಾಣಿಕವಾಗುತ್ತದೆ. ಅವರು ಮಾಡಿದ್ದೇನೆಂದರೆ ಮಸೀದಿಯ ಅಕ್ರಮ ಧ್ವಂಸದಲ್ಲಿ ಭಾಗಿಯಾಗಿದ್ದ ಪ್ರಬಲ ಗುಂಪಿನ ಪರವಾಗಿ ಒಲವನ್ನು ಕಂಡುಕೊಂಡಿದ್ದು.
ಮಸೀದಿಯನ್ನು ಕೆಡವಿದ್ದು ಘೋರ ಅಪರಾಧವಾಗಿತ್ತು ಎಂದು ನ್ಯಾಯಾಧೀಶರು ಒಪ್ಪಿಕೊಂಡಿದ್ದರು, ಆದರೆ ವಿಧ್ವಂಸಕರು ಅಕ್ರಮವಾಗಿ ತೆರವುಗೊಳಿಸಿದ್ದ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಅವರಿಗೆ ಅವಕಾಶ ನೀಡುವುದರಲ್ಲಿ ಯಾವುದೇ ತಪ್ಪು ನ್ಯಾಯಾಧೀಶರಿಗೆ ಕಂಡು ಬಂದಿರಲಿಲ್ಲ. ‘ಬಲವುಳ್ಳವನು ಮಾಡಿದ್ದೇ ಸರಿ’ ಎನ್ನುವುದನ್ನು ಪರಿಹಾರವೆಂದು ಕರೆಯಲಾಗುವುದಿಲ್ಲ ಮತ್ತು ಹೊಸ ಮಸೀದಿ ನಿರ್ಮಾಣಕ್ಕಾಗಿ ಅಯೋಧ್ಯೆಯ ಹೊರಗೆ ಐದು ಎಕರೆ ಭೂಮಿ ಒದಗಿಸುವಂತೆ ಸರಕಾರಕ್ಕೆ ಪೀಠದ ನಿರ್ದೇಶನವು ಒಂದು ರೀತಿಯ ದೈವಿಕ ನ್ಯಾಯವನ್ನು ಪ್ರತಿನಿಧಿಸುತ್ತದೆ ಎಂದು ನಾವು ನಂಬಬೇಕು ಎಂದು ನ್ಯಾ.ಚಂದ್ರಚೂಡ್ ಬಯಸಿದ್ದರೆ ಅದಕ್ಕಿಂತ ಹಾಸ್ಯಾಸ್ಪದವಾದುದು ಇನ್ನೊಂದಿಲ್ಲ. ಮುಸ್ಲಿಮರು ಪ್ರಾರ್ಥನೆಗಳನ್ನು ಸಲ್ಲಿಸಲು ಮಸೀದಿಯು ಇದೆಯೇ ಎನ್ನುವುದು ಪೀಠದ ಮುಂದಿದ್ದ ವಿಷಯವಾಗಿರಲಿಲ್ಲ, ಆದರೆ ವಿಧ್ವಂಸಕರಿಗೆ ಓರ್ವ ವ್ಯಕ್ತಿ ಅಥವಾ ಸಮುದಾಯವನ್ನು ಹಿಂಸಾತ್ಮಕವಾಗಿ ಹೊರಹಾಕಲು ಕಾನೂನಿನಲ್ಲಿ ಅನುಮತಿ ಇದೆಯೇ ಎನ್ನುವುದು ವಿಷಯವಾಗಿತ್ತು. ಭಾರತೀಯ ನ್ಯಾಯಾಂಗಕ್ಕೆ ಶಾಶ್ವತ ಅವಮಾನವಾಗಿ ಅಯೋಧ್ಯೆ ಪೀಠವು ಈ ಪ್ರಶ್ನೆಗೆ ಸಕಾರಾತ್ಮಕವಾಗಿ ಉತ್ತರಿಸಿತ್ತು.
ಎರಡನೆಯದಾಗಿ ವಿವಾದಕ್ಕೆ ದೈವಿಕವಾಗಿ ನೀಡಲಾಗಿದ್ದ ಪರಿಹಾರವನ್ನು ತಾನು ಒದಗಿಸಿದ್ದೆ ಎಂದು ಸಿಜೆಐ ನಿಜಕ್ಕೂ ಭಾವಿಸಿದ್ದಾರೆ ಎನ್ನುವ ಅಂಶವು 1991ರ ಪೂಜಾಸ್ಥಳಗಳ ಕಾಯ್ದೆಯು 1947,ಆ.15ರಂದು ಇದ್ದ ಪೂಜಾಸ್ಥಳದ ಸ್ವರೂಪವನ್ನು ಬದಲಿಸುವುದನ್ನು ನಿಷೇಧಿಸಿರುವ ಹೊರತಾಗಿಯೂ ಜ್ಞಾನವಾಪಿ ವಿವಾದ (ಪರಿಣಾಮವಾಗಿ ಇತರ ಹಲವು ವಿವಾದ)ಕ್ಕೆ ಮರುಜೀವ ನೀಡಲು ಅವರೇಕೆ ನೆರವಾಗಿದ್ದರು ಎನ್ನುವುದನ್ನು ವಿವರಿಸಬಹುದು. ಇದು ಹಿಂದುತ್ವ ಗುಂಪುಗಳು ದೇಶಾದ್ಯಂತ ಮುಸ್ಲಿಮರ ಆರಾಧನಾ ಸ್ಥಳಗಳ ಮೇಲೆ ನಿರಂತರವಾಗಿ ಹಕ್ಕುಗಳನ್ನು ಮಂಡಿಸುತ್ತಿರುವುದರಿಂದ ನಮ್ಮ ನ್ಯಾಯಾಲಯಗಳು ನಿಸ್ಸಂದೇಹವಾಗಿ ಅನುಸರಿಸಬಹುದಾದ ದೈವಿಕವಾಗಿ ನಿಯೋಜಿತ ಪರಿಹಾರಗಳಿಗೂ ಸೂಚಕವಾಗಿದೆ. ಈ ತಿಂಗಳ ಆರಂಭದಲ್ಲಿ ಸಿಜೆಐ ತನ್ನ ಪರಂಪರೆ ಏನಾಗಬಹುದು ಎಂದು ಬಲವಾಗಿಯೇ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದರು. ಅದನ್ನು ಕಂಡುಕೊಳ್ಳಲು ಅವರು ಆಶ್ಚರ್ಯ ಪಡಬೇಕಿಲ್ಲ ಅಥವಾ ದೀರ್ಘಕಾಲ ಕಾಯಬೇಕಿಲ್ಲ. ಹಿಂದುತ್ವ ಸಂಘಟನೆಗಳ ನೂರಾರು ವಿಧ್ವಂಸಕ ಹಕ್ಕು ಪ್ರತಿಪಾದನೆಗಳಿಗೆ ಅವರು ಅವಕಾಶಗಳ ಬಾಗಿಲನ್ನು ತೆರೆದಿದ್ದಾರೆ. ಆ ಪ್ರಕರಣಗಳಲ್ಲಿಯ ತೀರ್ಪುಗಳನ್ನು ನ್ಯಾ.ಚಂದ್ರಚೂಡ್ ಅವರು ಅನಾವರಣಗೊಳಿಸಿರುವ, ಹೊಸದಾಗಿ ನಿರ್ಮಿಸಲಾಗಿರುವ ‘ನ್ಯಾಯದೇವತೆ’ಯ ಪಾದಗಳಲ್ಲಿ ಗೌರವಪೂರ್ವಕವಾಗಿ ಇರಿಸಬಹುದು.
ಮೂರನೆಯದಾಗಿ ಮೂಲವಿವಾದದಲ್ಲಿ ದೇವರು ತನ್ನ ಪ್ರತಿನಿಧಿಯ ಮೂಲಕ ಮೂಲದಾವೆಯಲ್ಲಿ ಕಕ್ಷಿಯಾಗಿರುವಾಗ ನ್ಯಾ.ಚಂದ್ರಚೂಡ್ ಅರು ವಿವಾದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ನೆರವಾಗುವಂತೆ ದೇವರನ್ನು ಹೇಗೆ ಕೇಳಿಕೊಂಡಿರಬಹುದು? ಇದು ಹಿತಾಸಕ್ತಿ ಸಂಘರ್ಷವಲ್ಲವೇ? ಒಂದು ಕ್ಷಣ ಈ ವಿಲಕ್ಷಣ ಸಂದರ್ಭದ ಬಗ್ಗೆ ಯೋಚಿಸಿ. ಸಿಜೆಐ ಅವರ ಸರಳತೆಯಿಂದ ಪುಳಕಗೊಂಡಿರುವ ಹಿಂದುತ್ವ ರಾಜಕಾರಣಿಗಳು ಮುಸ್ಲಿಮ್ ಮತ್ತು ಹಿಂದು ಕಕ್ಷಿದಾರರನ ನಡುವಿನ ವ್ಯಾಜ್ಯದಲ್ಲಿ ಮುಸ್ಲಿಮ್ ನ್ಯಾಯಾಧೀಶರೋರ್ವರು ಮುಸ್ಲಿಮ್ ಪರವಾಗಿ ತೀರ್ಪನ್ನು ನೀಡಿ ತನಗೆ ಪರಿಹಾರ ಅಲ್ಲಾಹ್ನಿಂದ ಬಂದಿತ್ತು ಎಂದು ಹೇಳಿದರೆ ‘ಪಕ್ಷಪಾತ’ ಎಂದು ಕೂಗುವವರಲ್ಲಿ ಮೊದಲಿಗರಾಗುತ್ತಾರೆ.
ನಾಲ್ಕನೆಯದಾಗಿ, ನಿಜವೆಂದರೆ ಅಯೋಧ್ಯೆ ವಿಷಯದಲ್ಲಿ ತನ್ನ ನೆರವಿನಿಂದಾಗಿ ಹೊರಬಿದ್ದಿರುವ ತೀರ್ಪು ಕಾನೂನುಬದ್ಧವಾಗಿ ಸಮರ್ಥನೀಯವಲ್ಲ ಎನ್ನುವುದು ನ್ಯಾ.ಚಂದ್ರಚೂಡ್ ಅವರಿಗೆ ತಿಳಿದಿರುವುದರಿಂದ ಈ ರೀತಿಯ ದೈವಿಕ ತರ್ಕಬದ್ಧತೆಯ ಆಶ್ರಯ ಪಡೆಯುತ್ತಿದ್ದಾರೆ. ಹೀಗೆ ಮಾಡುವ ಮೂಲಕ ಅವರು ದೇವರಿಗೂ ಭಾರೀ ಅನ್ಯಾಯವನ್ನು ಮಾಡುತ್ತಿದ್ದಾರೆ, ಇದು ತಮ್ಮದೇ ಆದ ದೋಷಪೂರಿತ ತಾರ್ಕಿಕತೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಬಯಸದ ಸಣ್ಣ ಮನುಷ್ಯರ ಕೈಚಳಕವಾಗಿದ್ದು ದೋಷಪೂರಿತ ತೀರ್ಪನ್ನು ದೇವರ ಮೇಲೆ ಹೊರಿಸಲಾಗುತ್ತಿದೆ. ಇದು ತನ್ನ ಸ್ವಂತ ನಿರ್ಧಾರಗಳ ಜವಾಬ್ದಾರಿಗಳನ್ನು ವಹಿಸಿಕೊಳ್ಳುವುದನ್ನು ಕಲಿಯಲು ನ್ಯಾ.ಚಂದ್ರಚೂಡ್ ಅವರಿಗೆ ಸುಸಮಯವಾಗಿದೆ.
ಐದನೆಯದಾಗಿ, ನ್ಯಾಯಾಧೀಶರು ಸಂವಿಧಾನ ಮತ್ತು ಶಾಸನ ಪುಸ್ತಕದಲ್ಲಿಯ ನಿಗದಿತ ಕಾನೂನುಗಳ ಮೇರೆಗೆ ನ್ಯಾಯದಾನವನ್ನು ಮಾಡುವುದಾಗಿ ಪ್ರಮಾಣ ವಚನವನ್ನು ಸ್ವೀಕರಿಸಿರುತ್ತಾರೆ. ತಮ್ಮ ವೈಯಕ್ತಿಕ ಬದುಕುಗಳಲ್ಲಿ ದೇವತೆಗಳು ಅಥವಾ ಪವಿತ್ರ ಗ್ರಂಥಗಳನ್ನು ನಂಬಲು ಮತ್ತು ಅವರ ಆದೇಶಗಳು ಮತ್ತು ಮೌಖಿಕ ವಿವೇಚನೆಯನ್ನು ಅನುಸರಿಸಲು ಸ್ವತಂತ್ರರಾಗಿರುತ್ತಾರೆ. ಆದರೆ ನ್ಯಾಯದಾನದ ಸಂದರ್ಭದಲ್ಲಿ ಯಾವುದೇ ದೇವರು ಸಂವಿಧಾನಕ್ಕಿಂತ ಮೇಲಿರಲು ಅಥವಾ ನಿರ್ಧಾರದ ‘ಮೂಲ’ವಾಗಿರಲು ಸಾಧ್ಯವಿಲ್ಲ.
ಹೌದು, ದೇವರಲ್ಲಿ ನಂಬಿಕೆಯು ಕೆಲವೊಮ್ಮೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನರಿಗೆ ಧೈರ್ಯವನ್ನು ನೀಡುತ್ತದೆ. ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಭೂಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಎಂದಿಗೂ ಅವಕಾಶವನ್ನು ನೀಡುವುದಿಲ್ಲ ಎಂದು ತೀರ್ಪು ಹೊರಡಿಸಲು ಅಪಾರ ಧೈರ್ಯದ ಅಗತ್ಯವಿತ್ತು ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಕೇಂದ್ರದಲ್ಲಿ ಆಡಳಿತಾರೂಢ ಪಕ್ಷವು ಚುನಾವಣಾ ಅಸ್ತ್ರವಾಗಿ ರಾಮ ಮಂದಿರಕ್ಕಾಗಿ ರಾಜಕೀಯವಾಗಿ ಹತಾಶಗೊಂಡಿದ್ದ ಸಮಯದಲ್ಲಿ, ಮಂದಿರವನ್ನು ನಿರ್ಮಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದ ಸಂದರ್ಭದಲ್ಲಿ ಅಯೋಧ್ಯೆ ಪೀಠದ ತೀರ್ಪು ಯಾವುದೇ ಧೈರ್ಯವನ್ನು ಒಳಗೊಂಡಿರಲಿಲ್ಲ.
ದೇವರೊಂದಿಗೆ ನೇರವಾಗಿ ಸಂವಹನ ನಡೆಸುವ ಮತ್ತು ತಾನು ದೇವರ ಇಚ್ಛೆ ಮತ್ತು ಸೂಚನೆಗಳನ್ನು ಅನುಸರಿಸುತ್ತೇನೆ ಎಂದು ಹೇಳಿಕೊಳ್ಳುವ ಪ್ರಧಾನಿಯನ್ನು ಭಾರತವು ಈಗಾಗಲೇ ಹೊಂದಿದೆ. ದೇಶವು ಈಗ ತಾನು ಅಜೈವಿಕ ಎಂದು ಹೇಳಿಕೊಂಡಿರುವ ಮೋದಿಯವರಿಗೆ ಸರಿಯಾದ ಮುಖ್ಯ ನ್ಯಾಯಾಧೀಶರನ್ನೂ ಹೊಂದಿದೆ.
ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ್ದ ಕಪ್ಪುಪಟ್ಟಿಯನ್ನು ಮಾತ್ರವಲ್ಲ, ನಮ್ಮೆಲ್ಲರ ಕಣ್ಣುಗಳಿಗೂ ಇದ್ದ ಕಪ್ಪುಪಟ್ಟಿಯನ್ನೂ ತೆಗೆದಿದ್ದಕ್ಕೆ ನಾವು ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಅವರಿಗೆ ಧನ್ಯವಾದಗಳನ್ನು ಹೇಳಲೇಬೇಕು.
ಸಿದ್ಧಾರ್ಥ್ ವರದರಾಜನ್ - thewire.in