ಬಾಬಾ ಸಿದ್ದೀಕ್ರನ್ನು ಹತ್ಯೆಗೈಯಲು 50 ಲಕ್ಷ ರೂ. ಬೇಡಿಕೆ ಇರಿಸಿದ್ದ ಐವರು ಬಂಧಿತ ಆರೋಪಿಗಳು!
PC : PTI
ಮುಂಬೈ : ಎನ್ಸಿಪಿ ನಾಯಕ ಬಾಬಾ ಸಿದ್ದೀಕ್ ಹತ್ಯೆ ಪ್ರಕರಣದಲ್ಲಿ ಇತ್ತೀಚೆಗೆ ಬಂಧಿತರಾದ ಐವರು ಆರೋಪಿಗಳು ಬಾಬಾ ಸಿದ್ದೀಕ್ ಹತ್ಯೆಗೆ 50 ಲಕ್ಷ ರೂ. ಬೇಡಿಕೆ ಇರಿಸಿದ್ದರು. ಆದರೆ, ಬೇಡಿಕೆ ಬಗ್ಗೆ ಒಮ್ಮತ ಮೂಡದ ಹಾಗೂ ಬಾಬಾ ಸಿದ್ದೀಕ್ ಅವರ ಪ್ರಭಾವ ಹಿನ್ನೆಲೆಯಲ್ಲಿ ಹಿಂದೆ ಸರಿದಿದ್ದರು ಎಂಬುದು ಮುಂಬೈ ಪೊಲೀಸರ ತನಿಖೆಯಲ್ಲಿ ಬಹಿರಂಗಗೊಂಡಿದೆ.
ಆದರೆ, ಅವರು ಹತ್ಯೆಯಲ್ಲಿ ಭಾಗಿಯಾದವರಿಗೆ ಬೇಕಾದ ಪಿಸ್ತೂಲ್ ಹಾಗೂ ಇತರ ನೆರವನ್ನು ಒದಗಿಸಿದ್ದಾರೆ ಎಂದು ಅನಾಮಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೂಟರ್ಗಳಿಗೆ ಪಿಸ್ತೂಲ್ ಹಾಗೂ ಇತರ ಸಾಮಾಗ್ರಿಗಳನ್ನು ಪೂರೈಸಿದ ಆರೋಪದಲ್ಲಿ ಈ ಐದು ಮಂದಿಯನ್ನು ಕ್ರೈಮ್ ಬ್ರಾಂಚ್ ಶುಕ್ರವಾರ ಬಂಧಿಸಿತ್ತು. ಇದರೊಂದಿಗೆ ಈ ಪ್ರಕರಣದಲ್ಲಿ ಬಂಧಿತರಾದವರ ಒಟ್ಟು ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ನಿತಿನ್ ಗೌತಮ್ ಸಪ್ರೆ (32), ಸಂಭಾಜಿ ಕಿಸಾನ್ ಪರ್ಧಿ (44), ಪ್ರದೀಪ್ ದತ್ತು ಥೊಂಬ್ರೆ (37), ಚೇತನ್ ದಿಲೀಪ್ ಪರ್ಧಿ (27) ಹಾಗೂ ರಾಮ್ ಫುಲ್ಚಂದ್ ಕನೌಜಿಯಾ (43) ಎಂದು ಗುರುತಿಸಲಾಗಿದೆ. ಸಪ್ರೆ ದೊಂಬಿವಿಲಿ ನಿವಾಸಿಯಾಗಿದ್ದರೆ, ಪರ್ಧಿ, ಥೊಂಬ್ರೆ ಹಾಗೂ ಪರ್ಧಿ ಥಾಣೆ ಜಿಲ್ಲೆಯ ಅಂಬೇರ್ನಾಥ್ನ ನಿವಾಸಿ. ಕನೌಜಿ ರಾಯಗಢದ ಪನ್ವೇಲ್ನ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ.
‘‘ಸಪ್ರೆ ನೇತೃತ್ವದ ತಂಡ ಎನ್ಸಿಪಿ ನಾಯಕ ಬಾಬಾ ಸಿದ್ದೀಕ್ ಅವರನ್ನು ಹತ್ಯೆಗೈಯಲು 50 ಲಕ್ಷ ರೂ. ಬೇಡಿಕೆ ಇರಿಸಿತ್ತು. ಆದರೆ, ಅದಕ್ಕೆ ಒಮ್ಮತ ಮೂಡಲಿಲ್ಲ. ಆದುದರಿಂದ ಅವರು ಇದರಿಂದ ಹಿಂದೆ ಸರಿಯಲು ನಿರ್ಧರಿಸಿದರು ಎಂಬುದು ಪೊಲೀಸ್ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ’’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಲ್ಲದೆ, ಬಾಬಾ ಸಿದ್ದೀಕ್ ಪ್ರಭಾವಿ ರಾಜಕಾರಣಿ. ಅವರನ್ನು ಹತ್ಯೆಗೈಯುವುದರಿಂದ ತನ್ನ ತಂಡಕ್ಕೆ ದೊಡ್ಡ ಸಮಸ್ಯೆ ಸೃಷ್ಟಿಯಾಗಬಹುದು ಎಂಬ ಬಗ್ಗೆ ನಿತಿನ್ ಗೌತಮ್ ಸಪ್ರೆಗೆ ಅರಿವಿತ್ತು. ಆದುದರಿಂದ ಮುಂದುವರಿಯದಿರಲು ಅವರು ನಿರ್ಧರಿಸಿದರು. ಆದರೆ, ಈ ಆರೋಪಿಗಳು ಹೊಸ ಶೂಟರ್ಗಳಿಗೆ ಪಿಸ್ತೂಲ್ಗಳನ್ನು ಪೂರೈಸಲು ಹಾಗೂ ಇತರ ನೆರವು ನೀಡಲು ನಿರ್ಧರಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಬಾಬಾ ಸಿದ್ದೀಕ್ ಅವರಿಗೆ ಗುಂಡು ಹಾರಿಸುವ ವರೆಗೆ ಪಿತೂರಿಗಾರ ಸುಭಂ ಲೋಂಕರ್ ಹಾಗೂ ಮುಹಮ್ಮದ್ ಝೀಶನ್ ಅಖ್ತರ್ನೊಂದಿಗೆ ನಿತಿನ್ ಗೌತಮ್ ಸಪ್ರೆ ನೇತೃತ್ವದ ತಂಡ ಸಂಪರ್ಕದಲ್ಲಿದ್ದುದು ಪೊಲೀಸರ ವಿಚಾರಣೆ ವೇಳೆ ಪತ್ತೆಯಾಗಿದೆ