ಬಾಬಾ ಸಿದ್ದೀಕಿ ಹತ್ಯೆಗೂ ಮುನ್ನ ಲಾರೆನ್ಸ್ ಬಿಷ್ಣೋಯಿ ಸಹೋದರನೊಂದಿಗೆ ಮಾತನಾಡಿದ್ದ ಶೂಟರ್ ಗಳು!
ಬಾಬಾ ಸಿದ್ದೀಕಿ (Photo: PTI)
ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಎನ್ಸಿಪಿ ನಾಯಕ ಬಾಬಾ ಸಿದ್ದೀಕಿಯವರನ್ನು ಹತ್ಯೆಗೈಯ್ಯುವುದಕ್ಕೂ ಮುನ್ನ, ಶೂಟರ್ ಗಳು ಲಾರೆನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಸಂಪರ್ಕದಲ್ಲಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬಾಬಾ ಸಿದ್ದೀಕಿ ಅವರ ಹತ್ಯೆಗೆ ಕಾರಣವೇನೆಂದು ಇನ್ನೂ ಪತ್ತೆಯಾಗದಿದ್ದರೂ, ಆರೋಪಿಗಳು ವಿವಿಧ ಸ್ನಾಪ್ ಚಾಟ್ ಖಾತೆಗಳ ಮೂಲಕ ಅನ್ಮೋಲ್ ಬಿಷ್ಣೋಯಿ ಸಂಪರ್ಕದಲ್ಲಿದ್ದರು ಎಂದು ಹೇಳಲಾಗಿದೆ. ದಸರಾ ಪ್ರಯುಕ್ತ ತಮ್ಮ ಪುತ್ರ ಝೀಶನ್ ಅಲಿ ಕಚೇರಿಯ ಎದುರು ಬಾಬಾ ಸಿದ್ದೀಕಿ ಹಂತಕರ ಗುಂಡೇಟಿಗೆ ಬಲಿಯಾಗಿದ್ದರು.
ನಟ ಸಲ್ಮಾನ್ ಖಾನ್ ರೊಂದಿಗೆ ಬಾಬಾ ಸಿದ್ದೀಕಿ ಹೊಂದಿದ್ದ ಸಂಬಂಧದ ಕಾರಣಕ್ಕೆ ಅವರನ್ನು ಹತ್ಯೆಗೈಯ್ಯಲಾಯಿತು ಹಾಗೂ ಅವರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂರೊಂದಿಗೂ ಸಂಪರ್ಕವಿತ್ತು ಎಂದು ಬಿಷ್ಣೋಯಿ ತಂಡದ ಸದಸ್ಯನೊಬ್ಬ ಫೇಸ್ ಬುಕ್ ಪೋಸ್ಟ್ ನಲ್ಲಿ ಆರೋಪಿಸಿದ್ದ.
ಆರೋಪಿಗಳು ಕೆನಡಾ ಮತ್ತು ಅಮೆರಿಕದಿಂದ ಅನ್ಮೋಲ್ ಸಂಪರ್ಕದಲ್ಲಿದ್ದರು ಹಾಗೂ ಅವರಿಂದ ನಾಲ್ಕು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಮುಂಬೈ ಪೊಲೀಸ್ ಇಲಾಖೆಯ ಅಪರಾಧ ವಿಭಾಗವು, “ಆರೋಪಿಗಳು ಸ್ನ್ಯಾಪ್ ಚಾಟ್ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದರು ಹಾಗೂ ಸೂಚನೆಯ ಸಂದೇಶಗಳು ಬರುತ್ತಿದ್ದಂತೆಯೆ, ಅವನ್ನು ತಕ್ಷಣವೇ ಅಳಿಸಿ ಹಾಕುತ್ತಿದ್ದರು. ಅದೇ ರೀತಿ, ಬಂಧಿತರಾಗಿರುವ ಆರೋಪಿಗಳ ಸ್ನ್ಯಾಪ್ ಚಾಟ್ ಸಂದೇಶಗಳನ್ನು ಆಳವಾಗಿ ಪರಿಶೀಲಿಸಿದಾಗ, ಶೂಟರ್ ಗಳು ಹಾಗೂ ಪ್ರವೀಣ್ ಲೋನ್ಕರ್ ನೇರವಾಗಿ ಅನ್ಮೋಲ್ ಬಿಷ್ಣೋಯಿ ಸಂಪರ್ಕದಲ್ಲಿದ್ದದ್ದು ಪತ್ತೆಯಾಗಿದೆ” ಎಂದು ಹೇಳಿದೆ.
ಸಿದ್ದೀಕಿಯನ್ನು ಹತ್ಯೆಗೈದ ಮೂವರು ಶೂಟರ್ ಗಳಿಗೆ ಲೋನ್ಕರ್ ಸಾಗಾಣಿಕೆ ನೆರವು ಒದಗಿಸಿದ್ದ ಎಂದು ಆರೋಪಿಸಲಾಗಿದೆ. ಮೂವರು ಶೂಟರ್ ಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದ್ದು, ಮತ್ತೊಬ್ಬ ಶೂಟರ್ ಇನ್ನೂ ತಲೆ ಮರೆಸಿಕೊಂಡಿದ್ದಾನೆ.