ಬಾಬಾ ಸಿದ್ದಿಕ್ ಹತ್ಯೆಗೆ ಬೆಚ್ಚಿದ ʼಮಹಾʼ ಸರಕಾರ
"ಹೀಗಾದರೆ ಹೇಗೆ" ಎಂದು ಸರಕಾರಕ್ಕೆ ವಿಪಕ್ಷ, ಜನರ ಸವಾಲು
ಬಾಬಾ ಸಿದ್ದಿಕಿ | PC : NDTV
ಒಬ್ಬ ಸೆಲೆಬ್ರಿಟಿ ರಾಜಕಾರಣಿಯ ಹತ್ಯೆ ಮುಂಬೈಯನ್ನು ಬೆಚ್ಚಿ ಬೀಳಿಸಿದೆ. ಅದಕ್ಕಿಂತಲೂ ಹೆಚ್ಚಾಗಿ ಈ ಹತ್ಯೆ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿ ಮೈತ್ರಿಕೂಟವನ್ನು ಬೆಚ್ಚಿ ಬೀಳಿಸಿದೆ.
ಚುನಾವಣೆಗೆ ಅಣಿಯಾಗುವ ಹೊತ್ತಿಗೇ ಆಡಳಿತ ಪಕ್ಷದ ನಾಯಕರೊಬ್ಬರೇ ಹೀಗೆ ಕೊಲೆಯಾಗಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ. ಮಹಾರಾಷ್ಟ್ರ ಸರಕಾರ ಹಾಗೂ ಅದರ ಗೃಹ ಇಲಾಖೆಯ ಕಾರ್ಯವೈಖರಿ ಹಾಗು ಕ್ಷಮತೆಯ ಬಗ್ಗೆಯೇ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಒಬ್ಬ ಉನ್ನತ ಮಟ್ಟದ ಸುರಕ್ಷತೆ ಇರುವ ರಾಜಕಾರಣಿಯೇ ಹೀಗೆ ಹಾದಿಬೀದಿಯಲ್ಲಿ ಕೊಲೆಯಾದರೆ ನಮ್ಮ ಕತೆಯೇನು ಏನು ಎಂದು ಬಾಲಿವುಡ್ ಸೆಲೆಬ್ರಿಟಿಗಳು ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ.
ಶನಿವಾರ ರಾತ್ರಿ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಮೂವರು ಅಪರಿಚಿತ ದುಷ್ಕರ್ಮಿಗಳು ಮಾಜಿ ಸಚಿವ, ಆಡಳಿತ ಪಕ್ಷ ಅಜಿತ್ ಪವಾರ್ ಅವರ ಪಕ್ಷದ ಪ್ರಭಾವೀ ರಾಜಕಾರಣಿ ಬಾಬಾ ಸಿದ್ದಿಕ್ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ. ಇದರ ಬೆನ್ನಿಗೇ ಅಲ್ಲಿ ರಾಜಕೀಯ ಯುದ್ಧವೇ ಶುರುವಾಗಿದೆ.
ಎನ್ಸಿಪಿ ನಾಯಕ ಹಾಗೂ ಮಾಜಿ ಸಚಿವ ಬಾಬಾ ಸಿದ್ದೀಕಿ ಅವರ ಹತ್ಯೆ ರಾಜ್ಯಕ್ಕೆ ಆಘಾತಕಾರಿ ಹಾಗೂ ಅವಮಾನಕರ ಎಂದು ಮಹಾರಾಷ್ಟ್ರದ ಪ್ರತಿಪಕ್ಷಗಳು ರವಿವಾರ ಹೇಳಿವೆ.
ಹತ್ಯೆಗೆ ಆಘಾತ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿತಗೊಂಡಿದೆ ಎಂದು ಆರೋಪಿಸಿದ್ದಾರೆ. ಬಾಬಾ ಸಿದ್ದಿಕ್ ಅವರ ಹತ್ಯೆಯ ಕುರಿತಂತೆ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಉಪ ಮುಖ್ಯಮಂತ್ರಿಗಳಾದ ದೇವೇಂದ್ರ ಫಡ್ನವಿಸ್ ಹಾಗೂ ಅಜಿತ್ ಪವಾರ್ ರಾಜೀನಾಮೆ ನೀಡುವಂತೆ ವಿಪಕ್ಷಗಳು ಆಗ್ರಹಿಸಿವೆ.
‘ಮಹಾರಾಷ್ಟ್ರದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯದ ನೈತಿಕ ಹೊಣೆ ಹೊತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವಿಸ್ ಅವರು ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಮಹಾರಾಷ್ಟ್ರದ ಮಹಾಯುತಿ ಸರ್ಕಾರ ತಮ್ಮದೇ ನಾಯಕರಿಗೆ ಮತ್ತು ಭಯಭೀತರಾಗಿರುವ ಮುಂಬೈನ ಜನರಿಗೆ ರಕ್ಷಣೆ ಒದಗಿಸುವಲ್ಲಿ ವಿಫಲವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
‘ಇಂತಹ ಕೃತ್ಯಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದನ್ನು ತೋರಿಸುತ್ತವೆ. ಈ ಘಟನೆಯ ಮೂಲಕ ಹೇಗಾದರೂ ಚುನಾವಣೆ ದಿನಾಂಕವನ್ನು ಮುಂದೂಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ’ ಎಂದು ಕಾಂಗ್ರೆಸ್ ಹೇಳಿದೆ.
‘ಘಟನೆ ಕುರಿತು ಮಹಾರಾಷ್ಟ್ರ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳಬೇಕು ಮತ್ತು ಪಾರದರ್ಶಕ ತನಿಖೆಗೆ ಆದೇಶಿಸಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಬಾಬಾ ಸಿದ್ದಿಕ್ ಅವರ ದುರಂತಮಯ ಸಾವು ಆಘಾತಕಾರಿಯಾಗಿದ್ದು, ನೋವನ್ನುಂಟು ಮಾಡಿದೆ. ಈ ಸಂಕಟದ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ನನ್ನ ಸಂತಾಪಗಳು” ಎಂದು ರಾಹುಲ್ ಗಾಂಧಿ ಬರೆದಿದ್ದಾರೆ. “ಈ ಆಘಾತಕಾರಿ ಘಟನೆಯು ಮಹಾರಾಷ್ಟ್ರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿತಗೊಂಡಿರುವುದನ್ನು ಬಯಲುಗೊಳಿಸಿದೆ” ಎಂದೂ ಹೇಳಿದ್ದಾರೆ.
‘‘ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮುಂದುವರಿದಿದೆ. ಪುಣೆಯಂತಹ ನಗರದಲ್ಲಿ ಗ್ಯಾಂಗ್ವಾರ್ ದಿನಚರಿಯಾಗಿದೆ. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಅತ್ಯಂತ ಕೆಳಮಟ್ಟಕ್ಕೆ ತಲುಪಿರುವುದನ್ನು ಪ್ರತಿಬಿಂಬಿಸಿದೆ. ಆಡಳಿತಾರೂಡ ಮೈತ್ರಿಕೂಟದ ಮಿತ್ರ ಪಕ್ಷದ ನಾಯಕ ಸುರಕ್ಷಿತರಲ್ಲದೆ ಇದ್ದರೆ, ಸಾಮಾನ್ಯ ಜನರಿಗೆ ಸರಕಾರ ರಕ್ಷಣೆ ನೀಡುವುದು ಹೇಗೆ ?’’ ಎಂದು ಶರದ್ ಪವಾರ್ ಬಣದ ಎನ್ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ‘ಎಕ್ಸ್’ನ ಪೋಸ್ಟ್ ನಲ್ಲಿ, ಸಿದ್ದಿಕ್ ಅವರ ದುರಂತ ಸಾವು ಆಘಾತ ಉಂಟು ಮಾಡಿದೆ. ಈ ಸಂದರ್ಭ ನಾನು ಅವರ ಕುಟುಂಬ, ಗೆಳೆಯರು ಹಾಗೂ ಬೆಂಬಲಿಗರಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಈ ಕುರಿತು ರಾಜ್ಯ ಸರಕಾರ ಕೂಲಂಕಷ ಹಾಗೂ ಪಾರದರ್ಶಕ ತನಿಖೆ ನಡೆಸಬೇಕು. ಅಪರಾಧಿಗಳನ್ನು ಆದಷ್ಟು ಬೇಗ ಕಾನೂನಿನ ಮುಂದೆ ತರಬೇಕು ಎಂದಿದ್ದಾರೆ.
ಎಐಸಿಸಿಯ ಮಹಾರಾಷ್ಟ್ರ ಉಸ್ತುವಾರಿ ರಮೇಶ್ ಚೆನ್ನಿತ್ತಲ ‘ಎಕ್ಸ್’ ಪೋಸ್ಟ್ನಲ್ಲಿ ಸಿದ್ದಿಕ್ ಅವರ ಹತ್ಯೆ ಮುಂಬೈಯಲ್ಲಿರುವ ಸಂಪೂರ್ಣ ಅರಾಜಕತೆಯನ್ನು ತೋರಿಸಿದೆ ಎಂದಿದ್ದಾರೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷದ ನಾಯಕರೂ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಮಹಾರಾಷ್ಟ್ರದಲ್ಲಿ ಇಷ್ಟು ದಿನ ಕೆಲಸ ಮಾಡಿದ ಬಾಬಾ ಸಿದ್ದಿಕ್ ಅವರ ಸಾವು ರಾಜ್ಯದ ಮುಖ್ಯಮಂತ್ರಿಯ ವೈಫಲ್ಯವನ್ನು ಸೂಚಿಸುತ್ತದೆ. ಮಹಾರಾಷ್ಟ್ರದಲ್ಲಿ ಯಾವಾಗಲೂ ಉತ್ತಮ ಕಾನೂನು ಸುವ್ಯವಸ್ಥೆ ಇತ್ತು. ಅದಕ್ಕಾಗಿಯೇ ಮುಂಬೈಗೆ ದೊಡ್ಡ ಕೈಗಾರಿಕೆಗಳು ಬಂದಿವೆ ಎಂದು ಉದ್ಧವ್ ಪಕ್ಷದ ಸಂಜಯ್ ರಾವತ್ ಹೇಳಿದ್ದಾರೆ.
ಅವರ ಹತ್ಯೆಯ ಸಮಯದಲ್ಲಿ ಬಾಬಾ ಸಿದ್ದಿಕ್ ಅವರಿಗೆ ಸಂಪೂರ್ಣ ರಾಜ್ಯ ಭದ್ರತೆ ಇತ್ತು ಎಂಬುದನ್ನು ರಾವತ್ ಎತ್ತಿ ತೋರಿಸಿದ್ದಾರೆ.
ಬಾಬಾ ಸಿದ್ದಿಕ್ ಅವರಿಗೆ ಸಂಪೂರ್ಣ ರಾಜ್ಯ ಭದ್ರತೆ ಒದಗಿಸಲಾಗಿದ್ದು, ಅದರ ಹೊರತಾಗಿಯೂ ಅವರನ್ನು ಹತ್ಯೆ ಮಾಡಲಾಗಿದೆ. ಮುಖ್ಯಮಂತ್ರಿಗಳು ಪೊಲೀಸರನ್ನು ಬಳಸಿಕೊಂಡ ರೀತಿಯಿಂದಾಗಿ ಪೊಲೀಸರು ಮತ್ತು ಕಾನೂನಿನ ಭಯವಿಲ್ಲದಂತಾಗಿದೆ ಎಂದು ಅವರು ಹೇಳಿದ್ದಾರೆ.
ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕಿ ಪ್ರಿಯಾಂಕಾ ಚತುರ್ವೇದಿ ಮಾತನಾಡಿ, ಸಿದ್ದಿಕ್ ಹತ್ಯೆಯ ಸುದ್ದಿ ಕೇಳಿ ಆಘಾತವಾಯಿತು. ನಗರದಲ್ಲಿನ ಈ ಆರಾಜಕತೆ ಸ್ವೀಕಾರಾರ್ಹವಲ್ಲ ಮತ್ತು ಸಿಬಿಐ ತನಿಖೆ ನಡೆಸಬೇಕು ಎಂದು ಹೇಳಿದ್ದಾರೆ.
ಇನ್ನು ವಿಪಕ್ಷದಿಂದ ಮಾತ್ರವಲ್ಲದೇ ಆಡಳಿತ ಪಕ್ಷ ಅಜಿತ್ ಪವಾರ್ ಬಣದ ಎನ್ ಸಿ ಪಿ ನಾಯಕರೂ ಪೊಲೀಸ್ ವ್ಯವಸ್ಥೆಯನ್ನು ಟೀಕಿಸುತ್ತಾ ಗೃಹ ಸಚಿವಾಲಯದ ಮೇಲೆ ಹರಿಹಾಯ್ದಿದ್ದಾರೆ. ಈ ಹತ್ಯೆ ಪಕ್ಷಕ್ಕೆ ದೊಡ್ಡ ಹೊಡೆತವಾಗಿದೆ ಎಂದು ಎನ್ಸಿಪಿ ವಕ್ತಾರ ಎಂಎಲ್ಸಿ ಅಮೋಲ್ ಮಿಟ್ಕರಿ ಹೇಳಿದ್ದಾರೆ.
ಈ ಕೊಲೆಯು ಮುಂಬೈನ ಭೀಕರ ಭದ್ರತಾ ಪರಿಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ. ಒಬ್ಬ ಸಾಮಾನ್ಯ ವ್ಯಕ್ತಿಗೆ ಹೀಗಾದರೆ ನಮಗೆ ಅರ್ಥವಾಗುತ್ತದೆ. ಆದರೆ ಮಾಜಿ ಸಚಿವರೊಬ್ಬರು ಮೃತಪಟ್ಟಿರುವುದು ಗೃಹ ಇಲಾಖೆಯ ವೈಫಲ್ಯವನ್ನು ತೋರಿಸುತ್ತದೆ. ಬಾಬಾ ಸಿದ್ದಿಕ್ ಅವರ ಜೀವ ಬೆದರಿಕೆಯನ್ನು ಮುಂಬೈ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದರೆ ಈ ಕೊಲೆ ನಡೆಯುತ್ತಿರಲಿಲ್ಲ. ನಮ್ಮ ರಾಷ್ಟ್ರೀಯ ಅಧ್ಯಕ್ಷ ಅಜಿತ್ ಪವಾರ್ ಅವರು ತಮ್ಮ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದಾರೆ ಎಂದು ಅಮೋಲ್ ಮಿಟ್ಕರಿ ಹೇಳಿದ್ದಾರೆ.
ಪೊಲೀಸರ ಪ್ರಕಾರ, 15 ದಿನಗಳ ಹಿಂದೆ ಬಾಬಾ ಸಿದ್ದಿಕ್ ಗೆ ಜೀವ ಬೆದರಿಕೆ ಬಂದ ನಂತರ ವೈ ಹಂತದ ಭದ್ರತೆ ನೀಡಲಾಗಿತ್ತು.
ಇನ್ನು ಬಾಲಿವುಡ್ ಕಡೆಯಿಂದಲೂ ಸರಕಾರದ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಬಿಗಿ ಭದ್ರತೆಯಲ್ಲಿ ಬಾಬಾ ಸಿದ್ದಿಕ್ ಮನೆಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದಾರೆ. ಆಪ್ತ ಸ್ನೇಹಿತ, ನಟ ಸಲ್ಮಾನ್ ಖಾನ್ ಸೇರಿದಂತೆ ಬಾಲಿವುಡ್ನ ಅನೇಕ ಖ್ಯಾತ ನಟರೊಂದಿಗೆ ಬಾಬಾ ಸಿದ್ದಿಕ್ ಉತ್ತಮ ಒಡನಾಟ ಹೊಂದಿದ್ದರು.
ಶನಿವಾರ ರಾತ್ರಿ ಘಟನೆ ಬಗ್ಗೆ ತಿಳಿದ ಕೂಡಲೇ ಆಸ್ಪತ್ರೆಗೆ ತೆರಳಿ ಸಿದ್ದಿಕ್ ಕುಟುಂಬದವರನ್ನು ಸಲ್ಮಾನ್ ಖಾನ್ ಭೇಟಿಯಾಗಿದ್ದರು.
ಬಾಬಾ ಸಿದ್ದಿಕ್ ಹತ್ಯೆಯ ಹೊಣೆ ಹೊತ್ತಿರುವ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್, "ಸಲ್ಮಾನ್ ಖಾನ್ ಅವರಿಗೆ ನೆರವು ನೀಡುವವರಿಗೆ ತಕ್ಕ ಶಾಸ್ತಿ ಮಾಡಲಾಗುವುದು" ಎಂದು ಈಗಾಗಲೇ ಖಾನ್ ನಿವಾಸದ ಬಳಿ ಎಚ್ಚರಿಕೆಯ ಸಂದೇಶವಾಗಿ ಗುಂಡು ಹಾರಿಸಿ ಸೂಚನೆ ನೀಡಿತ್ತು.
ಶಾರುಖ್ ಖಾನ್ ಸಹಿತ ಬಾಲಿವುಡ್ ನ ಅರ್ಧಕ್ಕೂ ಹೆಚ್ಚು ಖ್ಯಾತನಾಮರು ಸಲ್ಮಾನ್ ಖಾನ್ ಗೆ ಆಪ್ತರು. ಹಾಗಾದರೆ ಅವರೆಲ್ಲ ಏನು ಮಾಡಬೇಕು ? ಅವರೆಲ್ಲ ಮನೆಯಲ್ಲೇ ಇರಬೇಕಾ ಎಂದು ಬಾಲಿವುಡ್ ಸರಕಾರವನ್ನು ಪ್ರಶ್ನಿಸುತ್ತಿದೆ.
ಸಿದ್ದಿಕ್ ಅವರನ್ನು ಪುತ್ರ ಹಾಗೂ ಶಾಸಕ ಝೀಶನ್ ಸಿದ್ದಿಕ್ ಅವರ ಕಚೇರಿ ಬಳಿ ಹತ್ಯೆ ಮಾಡಿದ ಬಳಿಕ ಈ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ರವಿವಾರ ಶುಬ್ಬೂ ಲೋನ್ಕರ್ ಎಂಬಾತನ ಫೇಸ್ ಬುಕ್ ಪೋಸ್ಟ್ ನಿಂದ ಇದು ದೃಢಪಟ್ಟಿತ್ತು.
ಲೋನ್ಕರ್ ಈಗಾಗಲೇ ಜೈಲಿನಲ್ಲಿದ್ದು, ಆತನ ಸಹೋದರ ಪ್ರವೀಣ ಲೋನ್ಕರ್ ಈ ಪೋಸ್ಟ್ ಮಾಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಆತನನ್ನೂ ರವಿವಾರ ಸಂಜೆ ಬಂಧಿಸಲಾಗಿದೆ.
"ನಮಗೆ ಯಾರ ಮೇಲೂ ದ್ವೇಷಭಾವನೆ ಇಲ್ಲ. ಆದರೆ ಸಲ್ಮಾನ್ ಖಾನ್ ಮತ್ತು ದಾವೂದ್ ಗ್ಯಾಂಗ್ ಗೆ ಯಾರು ನೆರವು ನೀಡುತ್ತಾರೋ, ಅಂಥವರು ಎಚ್ಚರಿಕೆಯಿಂದ ಇರಿ (ಹಿಸಾಬ್-ಕಿತಾಬ್ ಕರ್ ಲೇನಾ) ಎಂದು ಹಿಂದಿಯಲ್ಲಿ ಬರೆದ ಫೇಸ್ಬುಕ್ ಪೋಸ್ಟ್ ನಲ್ಲಿ ಹೇಳಿದ್ದಾನೆ. ಈ ಪೋಸ್ಟ್ ನ ಅಧಿಕೃತತೆಯನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ವೈಭವದ ಸಂತೋಷಕೂಟಗಳನ್ನು ಆಯೋಜಿಸುವ ಮೂಲಕ ಹೆಸರು ಮಾಡಿದ್ದ ಸಿದ್ದಿಕೀ , 2013ರಲ್ಲಿ ಸಲ್ಮಾನ್ ಖಾನ್ ಮತ್ತು ಶಾರೂಕ್ ಖಾನ್ ನಡುವೆ ಐದು ವರ್ಷಗಳಿಂದ ಇದ್ದ ಶೀತಲ ಸಮರವನ್ನು ಇಫ್ತಾರ್ ಕೂಟವೊಂದರಲ್ಲಿ ಬಗೆಹರಿಸಿದ್ದರು.
ಮುಂಬೈನ ಪ್ರತಿಷ್ಠಿತ ರಾಜಕಾರಣಿಗಳು, ಉದ್ಯಮಿಗಳು ಹಾಗು ಸೆಲೆಬ್ರಿಟಿಗಳಿಗೆ ಆಪ್ತರಾಗಿದ್ದ ಬಾಬಾ ಸಿದ್ದಿಕ್, ಖ್ಯಾತನಾಮರ ನಡುವೆ ಯಾವುದೇ ಜಟಾಪಟಿ ನಡೆದರೂ ಅದನ್ನು ಮಧ್ಯಸ್ಥಿಕೆ ವಹಿಸಿ ಶಮನ ಮಾಡುತ್ತಿದ್ದವರು. ಕಳೆದ ವರ್ಷದಿಂದೀಚೆಗೆ ಸಲ್ಮಾನ್ ಖಾನ್ ಅವರಿಗೆ ನಿಕಟವಾಗಿದ್ದ ಇಬ್ಬರು ಸೆಲೆಬ್ರಿಟಿಗಳ ಮೇಲೆ ಬಿಷ್ಣೋಯಿ ಗ್ಯಾಂಗ್ ದಾಳಿ ಮಾಡಿದೆ ಎಂದು ಪೊಲೀಸರು ಹೇಳಿದ್ದಾರೆ.ತನ್ನ ಗುರಿಯಾಗಿರುವ ಸಲ್ಮಾನ್ ಖಾನ್ ಜೊತೆಗಿನ ಆತ್ಮೀಯತೆಯೇ ಬಾಬಾ ಸಿದ್ದಿಕ್ ಕೊಲೆಗೆ ಕಾರಣ ಎಂದು ಬಿಷ್ಣೋಯ್ ಗ್ಯಾಂಗ್ ಮೂಲಗಳು ತಿಳಿಸಿವೆ.
ಈ ಹಿಂದೆ ಎಪ್ರಿಲ್ 14 ರಂದು ಸಲ್ಮಾನ್ ಖಾನ್ ಅವರ ಬಾಂದ್ರಾ ನಿವಾಸದ ಹೊರಗೆ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಗುಂಡಿನ ದಾಳಿ ನಡೆಸಿದ ವಿಕ್ಕಿ ಗುಪ್ತಾ ಮತ್ತು ಸಾಗರ್ ಪಾಲ್ ಅವರನ್ನು ನಂತರ ಗುಜರಾತ್ನಲ್ಲಿ ಬಂಧಿಸಲಾಗಿತ್ತು.
ಮುಂಬೈ ಪೊಲೀಸರು ಸಿದ್ದಿಕ್ ಹತ್ಯೆಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯ ವೈದ್ಯರ ಪ್ರಕಾರ, ಎದೆಗೆ ಬಿದ್ದ ಎರಡು ಗುಂಡೇಟಿನಿಂದ ಗಾಯಗೊಂಡಿದ್ದ ಬಾಬಾ ಸಿದ್ದಿಕ್ ಅವರನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ಚಿಕಿತ್ಸೆಗೆ ಕರೆ ತರಲಾಗಿತ್ತು.
ಶನಿವಾರ ರಾತ್ರಿ 9.30ರ ವೇಳೆಗೆ ಬಾಬಾ ಸಿದ್ದಿಕ್ ಅವರನ್ನು ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ, ಅವರು, ಚಿಕಿತ್ಸೆಗೆ ಸ್ಪಂದಿಸದೆ ಕೆಲ ಹೊತ್ತಿನಲ್ಲೇ ಮೃತಪಟ್ಟರು ಎನ್ನಲಾಗಿದೆ.
ಬಾಬಾ ಸಿದ್ದೀಕ್ ಹತ್ಯೆ ಪ್ರಕರಣದಲ್ಲಿ ಬಂಧಿತ ಇಬ್ಬರು ಆರೋಪಿಗಳ ಹೆಸರನ್ನು ಮುಂಬೈ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಇಬ್ಬರು ಬಂಧಿತರಲ್ಲಿ ಓರ್ವ ಹರ್ಯಾಣದ ಗುರ್ಮಾಲಿ ಸಿಂಗ್ ಹಾಗೂ ಇನ್ನೋರ್ವ ಉತ್ತರಪ್ರದೇಶದ ಧರ್ಮರಾಜ್ ಕಶ್ಯಪ್. ಶಿವಂ ಗೌತಮ್ ಎಂಬ ಹೆಸರಿನ ಮೂರನೇ ಆರೋಪಿ ಪ್ರಸಕ್ತ ತಲೆಮರೆಸಿಕೊಂಡಿದ್ದಾನೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ‘‘ಮೂರನೇ ಆರೋಪಿಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಮುಂಬೈ ಕ್ರೈಮ್ ಬ್ರಾಂಚ್ನ ಹಲವು ತಂಡಗಳು ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ’’ ಎಂದು ಪೊಲೀಸರ ಹೇಳಿಕೆ ತಿಳಿಸಿದೆ.