ಬಾಬಾ ಸಿದ್ದಿಕ್ ಕೊಲೆ ಪ್ರಕರಣ: ಸಾಬರಮತಿ ಜೈಲಿನಲ್ಲಿ ಮಾತ್ರ ಲಾರೆನ್ಸ್ ಬಿಷ್ಣೋಯಿ ವಿಚಾರಣೆ ಸಾಧ್ಯ; ಕಾರಣವೇನು ಗೊತ್ತೇ?
ಬಾಬಾ ಸಿದ್ದಿಕ್, ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ | PTI
ಹೊಸದಿಲ್ಲಿ: ಅಹ್ಮದಾಬಾದ್ನ ಸಾಬರಮತಿ ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿಯ ಚಲನವಲನಗಳ ಮೇಲೆ ಸಿಆರ್ಪಿಸಿಯ ಕಲಂ 268ರಡಿ ವಿಧಿಸಲಾಗಿದ್ದ ನಿರ್ಬಂಧದ ಅವಧಿಯನ್ನು ಕೇಂದ್ರ ಗೃಹ ಸಚಿವಾಲಯವು ಕಳೆದ ಆಗಸ್ಟ್ನಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ (ಬಿಎನ್ಎಸ್ಎಸ್)ದ ಕಲಂ 303ರಡಿ ಇನ್ನೂ ಒಂದು ವರ್ಷ ವಿಸ್ತರಿಸಿತ್ತು, ಅಂದರೆ ಬಿಷ್ಣೋಯಿಯ ವಿಚಾರಣೆ ನಡೆಸಬೇಕಿದ್ದರೆ ಅದು ಸಾಬರಮತಿ ಜೈಲು ಆವರಣದಲ್ಲಿ ಮಾತ್ರ ಸಾಧ್ಯ.
ಕಳೆದ ವಾರ ನಡೆದ ಎನ್ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆಯೊಂದಿಗೆ ಸಂಬಂಧ ಹೊಂದಿದ್ದಾನೆ ಎನ್ನಲಾಗಿರುವ ಬಿಷ್ಣೋಯಿ ಗುಜರಾತ್ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಮತ್ತು ಎನ್ಐಎ ತನಿಖೆ ನಡೆಸುತ್ತಿರುವ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾನೆ.
ಗೃಹ ಸಚಿವಾಲಯದ ಹೊಸ ಆದೇಶದ ಪ್ರಕಾರ ಬಿಷ್ಣೋಯಿಯ ಚಲನವಲನಗಳ ಮೇಲೆ ಹೇರಲಾಗಿರುವ ನಿರ್ಬಂಧವು ಆಗಸ್ಟ್ 2025ರವರೆಗೆ ಜಾರಿಯಲ್ಲಿರುತ್ತದೆ ಎಂದು ಸಾಬರಮತಿ ಕೇಂದ್ರ ಕಾರಾಗೃಹದ ಅಧೀಕ್ಷಕಿ ಶ್ವೇತಾ ಶ್ರೀಮಾಲಿ ಅವರು ದೃಢಪಡಿಸಿದ್ದಾರೆ.
‘ಪೋಲಿಸರು ಅಥವಾ ಯಾವುದೇ ತನಿಖಾ ಸಂಸ್ಥೆಯು ಬಿಷ್ಣೋಯಿಯನ್ನು ವಿಚಾರಣೆಗೊಳಪಡಿಸಲು ಬಯಸಿದರೆ ಅವರು ನ್ಯಾಯಾಂಗ ಆದೇಶವನ್ನು ಅಗತ್ಯವಾಗಿ ಒದಗಿಸಬೇಕು ಮತ್ತು ಆತನ ತನಿಖೆಯನ್ನು ಜೈಲು ಆವರಣದಲ್ಲಿಯೇ ನಡೆಸಬೇಕು. ನಾವು ಇತ್ತೀಚಿಗೆ ಇಂತಹ ಯಾವುದೇ ಕೋರಿಕೆಗಳನ್ನು ಸ್ವೀಕರಿಸಿಲ್ಲ’ ಎಂದು ಶ್ರೀಮಾಲಿ ವಿವರಿಸಿದರು.
ಗಮನಾರ್ಹವೆಂದರೆ ಗುಜರಾತಿನ ಹಿರಿಯ ಪೋಲಿಸ್ ಅಧಿಕಾರಿಗಳು ಬಿಷ್ಣೋಯಿಯನ್ನು ಜೈಲಿನಲ್ಲಿ ಪ್ರತ್ಯೇಕ ಸೆಲ್ನಲ್ಲಿ ಇರಿಸಲಾಗಿದೆಯೇ ಎನ್ನುವುದನ್ನು ದೃಢಪಡಿಸಿಲ್ಲ ಅಥವಾ ನಿರಾಕರಿಸಿಯೂ ಇಲ್ಲ. ಬಹಿರಂಗಗೊಳಿಸುವುದು ರಾಷ್ಟ್ರೀಯ ಭದ್ರತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. ಜೈಲಿನಲ್ಲಿ ಬಿಷ್ಣೋಯಿ ಇತರ ಯಾವುದೇ ವಿಚಾರಣಾಧೀನ ಕೈದಿಯಂತೆ ಹಕ್ಕುಗಳನ್ನು ಹೊಂದಿದ್ದಾನೆ ಎಂದು ಅಧಿಕಾರಿಗಳು ಖಚಿತಪಡಿಸಿದರು.
‘ಬಾಬಾ ಸಿದ್ದೀಕಿ ಹತ್ಯೆಗೆ ಬಿಷ್ಣೋಯಿ ಹೊಣೆಯಾಗಿದ್ದಾನೆ ’ ಎಂದು ತನ್ನ ‘ಶುಬ್ಬು ಲೋಣಕರ್ ’ ಖಾತೆಯಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದ ಅಕೋಲಾ ನಿವಾಸಿ ಶುಭಂ ಲೋಣಕರ್ ಪ್ರಸ್ತುತ ತಲೆಮರೆಸಿಕೊಂಡಿದ್ದಾನೆ. ಆತನ ಸೋದರ ಪ್ರವೀಣನನ್ನು ಪೋಲಿಸರು ಪುಣೆಯಲ್ಲಿ ಬಂಧಿಸಿದ್ದಾರೆ. ಈತನೂ ಕೊಲೆ ಸಂಚಿನಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.
ಬಿಷ್ಣೋಯಿ ಸ್ವತಃ ಅಥವಾ ಜೈಲಿನ ಹೊರಗಿನ ಯಾವುದೋ ವ್ಯಕ್ತಿಯ ಜೊತೆ ಸಮಾಲೋಚನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಈ ಪೋಸ್ಟ್ ಹಾಕಿರುವ ಸಾಧ್ಯತೆಯ ಕುರಿತು ಪ್ರಶ್ನೆಗೆ ಶ್ರೀಮಾಲಿ,ಅದು ಸಾಧ್ಯವಿಲ್ಲ ಎಂದು ಉತ್ತರಿಸಿದರು.