ಪ್ರಧಾನಿ ಮೋದಿ ಭೇಟಿ ಹಿನ್ನೆಲೆ: ಜಮ್ಮು ಕಾಶ್ಮೀರದಲ್ಲಿ 10ನೇ ತರಗತಿ ಬೋರ್ಡ್ ಪರೀಕ್ಷೆ ಮುಂದೂಡಿಕೆ
ನರೇಂದ್ರ ಮೋದಿ | Photo : PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಮಾರ್ಚ್ 7ರಂದು ನಿಗದಿಯಾಗಿದ್ದ ಹತ್ತನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರ ಮುಂದೂಡಿದೆ. ಆಗಸ್ಟ್ 2019ರಲ್ಲಿ ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಐದು ವರ್ಷಗಳ ತರುವಾಯ ಪ್ರಧಾನಿ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ ಎಂದು thewire.in ವರದಿ ಮಾಡಿದೆ.
ಪರೀಕ್ಷೆ ಮುಂದೂಡಲ್ಪಟ್ಟ ಆದೇಶದಲ್ಲಿ ಜಮ್ಮು ಮತ್ತು ಕಾಶ್ಮೀರ ಶಾಲಾ ಶಿಕ್ಷಣ ಮಂಡಳಿಯು ಪ್ರಧಾನಿ ಭೇಟಿ ಕಾರಣ ಎಂದು ಉಲ್ಲೇಖಿಸಿಲ್ಲ.
“ಅನಿವಾರ್ಯ ಸನ್ನಿವೇಶಗಳ ಹಿನ್ನೆಲೆಯಲ್ಲಿ ಕೃಷಿ, ಅಪಾರೆಲ್ಸ್, ಮೇಕಪ್, ಹೋಮ್ ಫರ್ನಿಶಿಂಗ್, ಆಟೊಮೋಟಿವ್, ಬ್ಯೂಟಿ ಎಂಡ್ ವೆಲ್ನೆಸ್, ಹೆಲ್ತ್ ಕೇರ್, ಐಟಿ & ಐಟಿಇಎಸ್, ದೈಹಿಕ ಶಿಕ್ಷಣ ಮತ್ತು ಕ್ರೀಡೆ, ಪ್ಲಂಬಿಂಗ್/ರಿಟೇಲ್, ಸೆಕ್ಯುರಿಟಿ, ಟೆಲಿಕಮ್ಯುನಿಕೇಶನ್, ಟೂರಿಸಂ ಎಂಡ್ ಹಾಸ್ಪಿಟಾಲಿಟಿ, ಇಲೆಕ್ಟ್ರಾನಿಕ್ಸ್ ಮತ್ತು ಹಾರ್ಡ್ವೇರ್ (ಹತ್ತನೇ ತರಗತಿ) ಪರೀಕ್ಷೆಗಳನ್ನು ಮುಂದೂಡಲಾಗಿದೆ (ಎಪ್ರಿಲ್ 4ಕ್ಕೆ),” ಎಂದು ಶಾಲಾ ಶಿಕ್ಷಣ ಮಂಡಳಿ ತಿಳಿಸಿದೆ.
ಹತ್ತನೇ ತರಗತಿ ಬೋರ್ಡ್ ಪರೀಕ್ಷೆ ಮಾರ್ಚ್ 7ರಿಂದ ಎಪ್ರಿಲ್ 4ರವರೆಗೆ ನಿಗದಿಯಾಗಿತ್ತು. ಪ್ರಧಾನಿ ಮೋದಿ ಶ್ರೀನಗರದ ಬಕ್ಷಿ ಸ್ಟೇಡಿಯಂನಲ್ಲಿ ಮಾರ್ಚ್ 7ರಂದು ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ರ್ಯಾಲಿಯಲ್ಲಿ ಆಡಳಿತದ 7000 ಉದ್ಯೋಗಿಗಳು ಹಾಗೂ ಶಿಕ್ಷಕರನ್ನು ಭಾಗವಹಿಸಲು ಸೂಚಿಸಿರುವುದು ವಿವಾದಕ್ಕೀಡಾಗಿದೆ.