ಪ್ರತಿಕೂಲ ಹವಾಮಾನ: ಬಂಗಾಳ ಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರ ರಕ್ಷಣೆ
ಹೊಸದಿಲ್ಲಿ: ಬಂಗಾಳ ಕೊಲ್ಲಿಯಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಭಾರತೀಯ ನೌಕಾಪಡೆ ರಕ್ಷಿಸಿದೆ. ಬಂಗಾಳ ಕೊಲ್ಲಿಯಲ್ಲಿ ನಿಯೋಜಿಸಲಾದ ಭಾರತೀಯ ನೌಕಾ ಪಡೆಯ ಹಡಗು ಖಂಜಾರ್ ತಮಿಳುನಾಡು ಕರಾವಳಿಯಿಂದ 130 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಿಲುಕಿದ್ದ 36 ಭಾರತೀಯ ಮೀನುಗಾರರನ್ನು ಸುರಕ್ಷಿತವಾಗಿ ವಾಪಸ್ ಕರೆ ತಂದಿದೆ ಎಂದು ಭಾರತೀಯ ನೌಕಾ ಪಡೆಯ ಕಮಾಂಡರ್ ವಿವೇಕ್ ಮಧ್ವಾಲ್ ತಿಳಿಸಿದ್ದಾರೆ.
ಸವಾಲಿನ ಪರಿಸ್ಥಿತಿಯ ನಡುವೆಯೂ ಐಎನ್ಎಸ್ ಖಂಜಾರ್ ಮೀನುಗಾರರಿದ್ದ ಮೂರು ಮೀನುಗಾರಿಕಾ ದೋಣಿಗಳನ್ನು 30 ಗಂಟೆಗೂ ಅಧಿಕ ಕಾಲ ಎಳೆದುಕೊಂಡು ಬಂದು ದಡ ಸೇರಿಸಿತು ಎಂದು ಅವರು ಹೇಳಿದ್ದಾರೆ.
ಖಂಜಾರ್ ಅನ್ನು ಬಂಗಾಳ ಕೊಲ್ಲಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ಅದು ತಮಿಳುನಾಡು ಕರಾವಳಿಯಿಂದ ಸುಮಾರು 130 ನಾಟಿಕಲ್ ಮೈಲು ದೂರದಲ್ಲಿ ಮೀನುಗಾರಿಕಾ ತೆರಳಿದ ದೋಣಿಗಳಾದ ಶಬರೈನಾಥನ್, ಕಲೈವಾಣಿ ಹಾಗೂ ವಿ ಸಾಮಿ ಸಿಲುಕಿಕೊಂಡಿರುವುದನ್ನು ಪತ್ತೆ ಹಚ್ಚಿತ್ತು.
‘‘ದೋಣಿಯಲ್ಲಿ ನಾಗಪಟ್ಟಿಣಂ ಹಾಗೂ ತಮಿಳುನಾಡಿನ 36 ಮೀನುಗಾರರು ಇದ್ದರು. ಸಮುದ್ರ ಪ್ರಕ್ಷುಬ್ಬಗೊಂಡ ಹಿನ್ನೆಲೆಯಲ್ಲಿ ಅವರು ಎರಡು ದಿನಗಳ ಕಾಲ ಬಂಗಾಳಕೊಳ್ಳಿಯಲ್ಲಿ ಸಿಲುಕಿದ್ದರು’’ ಎಂದು ಕಮಾಂಡರ್ ಮಧ್ವಲ್ ತಿಳಿಸಿದ್ದಾರೆ.