ಬದ್ಲಾಪುರ್ ಅತ್ಯಾಚಾರ ಆರೋಪಿಯ ಎನ್ ಕೌಂಟರ್: ನಕಲಿ ಎಂದು ಸಂಶಯ ವ್ಯಕ್ತಪಡಿಸಿದ ಹೈಕೋರ್ಟ್
ಕೌಶಲ ರಹಿತ ವ್ಯಕ್ತಿ ಪಿಸ್ತೂಲ್ ಬಳಸಬಹುದೇ? ಎಂದು ಪ್ರಶ್ನಿಸಿದ ನ್ಯಾಯಾಲಯ
ಅಕ್ಷಯ್ ಶಿಂದೆ | PC : indiatoday.in
ಮುಂಬೈ: ಬದ್ಲಾಪುರ್ ಅತ್ಯಾಚಾರ ಆರೋಪಿಯ ಎನ್ ಕೌಂಟರ್ ನಕಲಿ ಇರಬಹುದು ಎಂದು ಸಂಶಯ ವ್ಯಕ್ತಪಡಿಸಿರುವ ಬಾಂಬೆ ಹೈಕೋರ್ಟ್, ಈ ಕುರಿತು ಪಕ್ಷಪಾತ ರಹಿತ ತನಿಖೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಅತ್ಯಾಚಾರ ಆರೋಪಿ ಅಕ್ಷಯ್ ಶಿಂದೆಯನ್ನು ಜೈಲಿನಿಂದ ಹೊರ ಕರೆದುಕೊಂಡು ಹೋಗಿ, ಶಿವಾಜಿ ಆಸ್ಪತ್ರೆಯಲ್ಲಿ ಆತ ಮೃತಪಟ್ಟಿದ್ದಾನೆ ಎಂದು ಘೋಷಿಸುವವರೆಗಿನ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಿಡಬೇಕು ಎಂದೂ ನ್ಯಾಯಾಲಯವು ಪೊಲೀಸರಿಗೆ ನಿರ್ದೇಶನ ನೀಡಿದೆ.
ಇದಕ್ಕೂ ಮುನ್ನ, ಬದ್ಲಾಪುರ್ ಶಾಲೆಯೊಂದರ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪಕ್ಕೆ ಗುರಿಯಾಗಿದ್ದ ಅಕ್ಷಯ್ ಶಿಂದೆಯನ್ನು ತಲೋಜ ಜೈಲಿನಿಂದ ಬದ್ಲಾಪುರ್ ಗೆ ಕರೆದೊಯ್ದಾಗ ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ನೀಲೇಶ್ ಮೋರೆಯ ಪಿಸ್ತೂಲ್ ಕಸಿದು, ಬೆಂಗಾವಲು ಪೊಲೀಸ್ ತಂಡದ ಮೇಲೆ ಗುಂಡು ಹಾರಿಸಿದ. ಇದರಿಂದ ಮೂವರು ಪೊಲೀಸರು ಗಾಯಗೊಂಡರು. ಅದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಆತ ಮೃತಪಟ್ಟ ಎಂದು ಪೊಲೀಸರು ಹೇಳಿಕೆ ನೀಡಿದ್ದರು.
ರಾಜ್ಯ ಸರಕಾರವನ್ನು ಪ್ರತಿನಿಧಿಸಿದ್ದ ಮುಖ್ಯ ಸಾರ್ವಜನಿಕ ಅಭಿಯೋಜಕರು ಘಟನೆಯ ಸನ್ನಿವೇಶವನ್ನು ನಿರೂಪಿಸಿದ ನಂತರ, “ಇದು ನಂಬಲಸಾಧ್ಯ. ರಿವಾಲ್ವರ್ ಅನ್ನು ಯಾರು ಬೇಕಾದರೂ ಬಳಸುವಂತೆ ಪಿಸ್ತೂಲ್ ಅನ್ನು ಕೌಶಲ ರಹಿತ ವ್ಯಕ್ತಿಯೊಬ್ಬ ಬಳಸಲು ಸಾಧ್ಯವಿಲ್ಲ. ಪಿಸ್ತೂಲ್ ಬಳಸಲು ಸಾಮರ್ಥ್ಯ ಬೇಕಿರುವುದರಿಂದ, ದುರ್ಬಲ ವ್ಯಕ್ತಿಯೊಬ್ಬ ಪಿಸ್ತೂಲ್ ಗೆ ಗುಂಡು ತುಂಬಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಅವರ ವಾದವನ್ನು ತಿರಸ್ಕರಿಸಿತು.