ದುರ್ಗಾ ವಿಸರ್ಜನೆ ಮೆರವಣಿಗೆ ವೇಳೆ ಯುವಕನ ಕೊಲೆ ಪ್ರಕರಣ: ಬಹ್ರೈಚ್ ಉದ್ವಿಗ್ನ
PC: PTI
ಲಕ್ನೋ: ಉತ್ತರ ಪ್ರದೇಶದ ಬಹ್ರೈಚ್ ಪಟ್ಟಣದಲ್ಲಿ ದುರ್ಗಾ ವಿಸರ್ಜನೆ ಮೆರವಣಿಗೆ ವೇಳೆ ನಡೆದ ಘರ್ಷಣೆಯಲ್ಲಿ ಯುವಕ ಮೃತಪಟ್ಟ ಬೆನ್ನಲ್ಲೇ ಪಟ್ಟಣದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಮೃತ ಯುವಕನ ಅಂತ್ಯಸಂಸ್ಕಾರ ಮೆರವಣಿಗೆ ವೇಳೆ ಬಡಿಗೆಗಳನ್ನು ಹಿಡಿದಿದ್ದ ಬಹಳಷ್ಟು ಮಂದಿ ಸೇರಿದಂತೆ ಹಲವು ಮಂದಿ ಅಂಗಡಿಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಭಾನುವಾರ ರೆಹುವಾ ಮನ್ಸೂರ್ ಗ್ರಾಮದ ಬಳಿಯ ಮಹರಾಜ್ ಗಂಜ್ ಎಂಬಲ್ಲಿ ಭಾನುವಾರ ನಡೆದ ಕೋಮುಘರ್ಷಣೆಯಲ್ಲಿ 22 ವರ್ಷ ವಯಸ್ಸಿನ ರಾಮ್ ಗೋಪಾಲ್ ಮಿಶ್ರಾ ಎಂಬ ಯುವಕ ಮೃತಪಟ್ಟಿದ್ದ. ಬಳಿಕ ನಡೆದ ಕಲ್ಲುತೂರಾಟದಲ್ಲಿ ಆರು ಮಂದಿ ಗಾಯಗೊಂಡಿದ್ದು, ಪೊಲೀಸರು ಗುಂಪುಗಳನ್ನು ಚದುರಿಸಲು ಗುಂಡು ಹಾರಿಸಬೇಕಾಯಿತು. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಇಂಟರ್ ನೆಟ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಪೊಲೀಸರು ಈ ಪ್ರಕರಣಕ್ಕೆ ಸೇರಿದಂತೆ ಆರು ಮಂದಿಯ ವಿರುದ್ಧ ಮತ್ತು 24 ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ. 30 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಮುಖ್ಯ ಆರೋಪಿ ಸಲ್ಮಾನ್ ಎಂಬಾತನ ಪತ್ತೆಗೆ ಜಾಲ ಬೀಸಿದ್ದಾರೆ.
ಪೊಲೀಸರು ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹಲವು ಮಂದಿ ವಿವಿಧ ಕಡೆಗಳಲ್ಲಿ ಪ್ರತಿಭಟನೆ ನಡೆಸಿದರು. ಅಂಗಡಿ, ಮನೆಗಳು ಮತ್ತು ವಾಹನಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದ್ದರಿಂದ ದಟ್ಟವಾದ ಹೊಗೆ ಇಡೀ ಪಟ್ಟಣವನ್ನು ವ್ಯಾಪಿಸಿತ್ತು.
ಮೃತ ಯುವಕನ ಪಾರ್ಥಿವ ಶರೀರದ ಜತೆ ರಸ್ತೆಯಲ್ಲಿ ಕುಳಿತು ರಸ್ತೆ ತಡೆ ನಡೆಸಿದ ಉದ್ರಿಕ್ತರ ಗುಂಪು, ಮೃತನ ಕುಟುಂಬಕ್ಕೆ ನ್ಯಾಯ ದೊರಕುವವರೆಗೂ ಅಂತ್ಯಸಂಸ್ಕಾರ ನೆರವೇರಿಸುವುದಿಲ್ಲ ಎಂದು ಪಟ್ಟು ಹಿಡಿಯಿತು. ಗೃಹ ಕಾರ್ಯದರ್ಶಿ ಸಂಜೀವ್ ಗುಪ್ತಾ ಮತ್ತು ಎಡಿಜಿಪಿ ಅಮಿತಾಬ್ ಯಶ್ ಅವರನ್ನು ಸರ್ಕಾರ ಘಟನಾ ಸ್ಥಳಕ್ಕೆ ಕಳುಹಿಸಿಕೊಟ್ಟರೂ ಪರಿಸ್ಥಿತಿ ತಿಳಿಯಾಗಿಲ್ಲ.