ಹರ್ಯಾಣದ 50 ಪಂಚಾಯ್ತಿಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ
ಸಾಂದರ್ಭಿಕ ಚಿತ್ರ Photo: TOI
ಗುರುಗಾಂವ್: ನುಹ್ ಮತ್ತು ದಕ್ಷಿಣ ಹರ್ಯಾಣದಲ್ಲಿ ಜುಲೈ 31ರಂದು ಸಂಭವಿಸಿದ ಕೋಮು ಸಂಘರ್ಷದ ಬಳಿಕ ರೇವರಿ, ಮಹೇಂದ್ರಗಢ ಮತ್ತು ಝಜ್ಜಾರ್ ಜಿಲ್ಲೆಗಳ 50ಕ್ಕೂ ಹೆಚ್ಚು ಪಂಚಾಯ್ತಿಗಳು ಮುಸ್ಲಿಂ ವ್ಯಾಪಾರಿಗಳು ಪ್ರವೇಶಿಸುವುದನ್ನು ನಿಷೇಧಿಸಿವೆ. ಕೆಲ ದಿನಗಳ ಹಿಂದೆ ಈ ನಿಷೇಧ ಪತ್ರವನ್ನು ಪಂಚಾಯ್ತಿಗಳು ಬಿಡುಗಡೆ ಮಾಡಿದ್ದು, ಎಲ್ಲವೂ ಒಂದೇ ಬಗೆಯ ಒಕ್ಕಣೆ ಹೊಂದಿವೆ.
ಪಂಚಾಯ್ತಿಗಳ ಸರಪಂಚರು ಈ ಪತ್ರಗಳಿಗೆ ಸಹಿ ಮಾಡಿದ್ದು, ಈ ಗ್ರಾಮಗಳಲ್ಲಿ ವಾಸಿಸುವ ಮುಸ್ಲಿಮರು ತಮ್ಮ ಗುರುತಿನ ಪತ್ರದ ದಾಖಲೆಗಳನ್ನು ಪೊಲೀಸರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಬಹುತೇಕ ಗ್ರಾಮಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಯಾರೂ ಇಲ್ಲವಾದರೂ, ಕೆಲ ಗ್ರಾಮಗಳಲ್ಲಿ ಮೂರು-ನಾಲ್ಕು ತಲೆಮಾರುಗಳಿಂದ ಕೆಲವರು ವಾಸವಿದ್ದಾರೆ. "ನಾವು ಯಾವುದೇ ಸಮುದಾಯದ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡುವ ಉದ್ದೇಶ ಹೊಂದಿಲ್ಲ" ಎಂದು ಪತ್ರದಲ್ಲಿ ವಿವರಿಸಲಾಗಿದೆ.
ಈ ಪತ್ರಗಳ ಭೌತಿಕ ಪ್ರತಿಗಳು ಇದುವರೆಗೆ ನಮಗೆ ಲಭ್ಯವಾಗಿಲ್ಲ ಎಂದು ಮಹೇಂದ್ರಗಢ ಉಪವಿಭಾಗಾಧಿಕಾರಿ ಮನೋಜ್ ಕುಮಾರ್ ಹೇಳಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಪತ್ರಗಳು ಹರಿದಾಡುತ್ತಿದ್ದು, ಈ ಎಲ್ಲ ಪಂಚಾಯ್ತಿಗಳಿಗೆ ಶೋಕಾಸ್ ನೋಟಿಸ್ ನೀಡುವಂತೆ ತಾಲೂಕು ಅಧಿಕಾರಿಗಳಿಗೆ ಸೂಚಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.
"ಇಂತಹ ಪತ್ರಗಳನ್ನು ಹೊರಡಿಸುವುದು ಕಾನೂನುಬಾಹಿರ. ಇಂಥ ಪತ್ರಗಳು ನಮ್ಮ ಕೈಗೆ ತಲುಪಿಲ್ಲವಾದರೂ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ನಮ್ಮ ಗಮನಕ್ಕೆ ಬಂದಿದೆ. ಈ ಗ್ರಾಮಗಳಲ್ಲಿ ಶೇಕಡ 2ರಷ್ಟು ಕೂಡಾ ಅಲ್ಪಸಂಖ್ಯಾತ ಜನರಿಲ್ಲ. ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕುತ್ತಿದ್ದು, ಇಂಥ ನೋಟಿಸ್ಗಳು ಅದನ್ನು ಹಾಳು ಮಾಡುತ್ತವೆ" ಎಂದು ಅವರು ವಿವರಿಸಿದ್ದಾರೆ.