ವಲಸಿಗರ ಬಗ್ಗೆ ಅಮಿತ್ ಶಾ ಹೇಳಿಕೆಗೆ ಬಾಂಗ್ಲಾ ಖಂಡನೆ
ಕೇಂದ್ರ ಗೃಹ ಸಚಿವ ಅಮಿತ್ ಶಾ (Photo: PTI)
ಢಾಕಾ: ಬಾಂಗ್ಲಾದೇಶೀಯರ ವಿರುದ್ಧ ಆಕ್ಷೇಪಾರ್ಹ ಮತ್ತು ಸ್ವೀಕಾರಾರ್ಹವಲ್ಲದ ಹೇಳಿಕೆಗಳನ್ನು ಭಾರತದ ರಾಜಕಾರಣಿಗಳು ನೀಡದಂತೆ ಬಾಂಗ್ಲಾದೇಶ ಎಚ್ಚರಿಕೆ ನೀಡಿದೆ. ಭಾರತ ಸರ್ಕಾರದ ಅಧಿಕೃತ ಪ್ರತಿನಿಧಿಗಳಿಗೆ ಈ ಸಂಬಂಧ ಬಾಂಗ್ಲಾ ಸರ್ಕಾರ ಸ್ಪಷ್ಟಸೂಚನೆ ನೀಡಿದೆ. ಕೇಂದ್ರ ಗೃಹಸಚಿವ ಅಮಿತ್ ಶಾ ಇತ್ತೀಚೆಗೆ ಜಾರ್ಖಂಡ್ ಗೆ ಭೇಟಿ ನೀಡಿದ ಸಂದರ್ಭ ಬಾಂಗ್ಲಾದೇಶೀಯರ ಬಗ್ಗೆ ನೀಡಿದ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಅಧಿಕೃತವಾಗಿ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ.
ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಈ ಸಂಬಂಧ ಪ್ರತಿಭಟನಾ ಹೇಳಿಕೆಯನ್ನು ಭಾರತದ ಉಪ ಹೈಕಮಿಷನರ್ ಅವರಿಗೆ ಹಸ್ತಾಂತರಿಸಿದೆ. ಈ ಟಿಪ್ಪಣಿಯ ಮೂಲಕ ಬಾಂಗ್ಲಾದೇಶ ಗಂಭೀರ ವಿರೋಧವನ್ನು, ತೀವ್ರ ವಿಷಾದವನ್ನು ಮತ್ತು ಭಾರೀ ಅಸಮಾಧಾಣವನ್ನು ವ್ಯಕ್ತಡಿಸಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಜವಾಬ್ದಾರಿಯುತ ಸ್ಥಾಣದಲ್ಲಿರುವವರು ಪಕ್ಕದ ದೇಶದ ಜನತೆಯ ವಿರುದ್ಧ ಇಂಥ ಹೇಳಿಕೆ ನೀಡುವುದು ಮತ್ತು ಎರಡು ಸ್ನೇಹಪರ ದೇಶಗಳ ತಿಳಿವಳಿಕೆ ಮತ್ತು ಪರಸ್ಪರ ಗೌರವದ ಭಾವನೆಗೆ ಧಕ್ಕೆ ತರುವುದು ಖಂಡನೀಯ ಎಂದು ಆಕ್ಷೇಪಿಸಿದೆ.
ಜಾರ್ಖಂಡ್ ನಲ್ಲಿ ಜೆಎಂಎಂ ನೇತೃತ್ವದ ಸಮ್ಮಿಶ್ರ ಸರ್ಕಾರ, ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ನುಸುಳುಕೋರರನ್ನು ಪ್ರೋತ್ಸಾಹಿಸುತ್ತಿದೆ. ಇದನ್ನು ತಡೆಯದಿದ್ದರೆ ಮುಂದಿನ 25-30 ವರ್ಷಗಳಲ್ಲಿ ರಾಜ್ಯದಲ್ಲಿ ಅವರೇ ಬಹುಸಂಖ್ಯಾತರಾಗುತ್ತಾರೆ ಎಂದು ಅಮಿತ್ ಶಾ ಶುಕ್ರವಾರ ಹೇಳಿಕೆ ನೀಡಿದ್ದರು.