56 ಕೋಟಿ ರೂ. ಸಾಲ ವಸೂಲಿ ಮಾಡಲು ನಟ ಸನ್ನಿ ಡಿಯೋಲ್ ಮನೆ ಹರಾಜಿಗೆ ಮುಂದಾದ ಬ್ಯಾಂಕ್
ಮುಂಬೈ: ನಟ ಸನ್ನಿ ಡಿಯೋಲ್ ಅವರಿಗೆ ಮಂಜೂರು ಮಾಡಿದ್ದ ಸಾಲವನ್ನು ವಸೂಲಿ ಮಾಡಲು ಪೂರ್ವ ಮುಂಬೈನ ಜುಹುವಿನಲ್ಲಿರುವ ಪ್ರತಿಷ್ಠಿತ ಪ್ರದೇಶದಲ್ಲಿನ ಅವರ ಐಷಾರಾಮಿ ವಿಲ್ಲಾವನ್ನು ಹರಾಜು ಹಾಕಲು ಬ್ಯಾಂಕ್ ಆಫ್ ಬರೋಡಾ ಮುಂದಾಗಿದೆ. ಇದರೊಂದಿಗೆ ಸಾಲದ ಮೇಲೆ ವಿಧಿಸಲಾಗಿದ್ದ ಬಡ್ಡಿ ಮೊತ್ತವನ್ನೂ ವಸೂಲಿ ಮಾಡಲು ಬ್ಯಾಂಕ್ ಪ್ರಯತ್ನಿಸುತ್ತಿದೆ ಎಂದು deccanherald.com ವರದಿ ಮಾಡಿದೆ.
ಬ್ಯಾಂಕ್ ಆಫ್ ಬರೋಡಾವು ಈ ಹರಾಜಿನ ನೋಟಿಸ್ ಜಾಹೀರಾತನ್ನು ರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ರವಿವಾರ ಪ್ರಕಟಿಸಿದೆ. ಈ ನೋಟಿಸ್ ನಲ್ಲಿ `ಗದ್ದರ್-2’ ಚಿತ್ರದ ನಾಯಕ ನಟನ ನಿಜ ನಾಮಧೇಯವಾದ ಅಜಯ್ ಸಿಂಗ್ ಡಿಯೋಲ್ ಅನ್ನು ಉಲ್ಲೇಖಿಸಲಾಗಿದ್ದು, ಸನ್ನಿ ವಿಲ್ಲಾ ಎಂದು ಹೆಸರಿಸಲಾಗಿರುವ ಅವರ ಮಾಲಕತ್ವದ ಜುಹು ವಿಲ್ಲಾ ಹಾಗೂ ಸಾಲದ ವಿವರಗಳನ್ನೂ ಪ್ರಕಟಿಸಲಾಗಿದೆ. ಇದರೊಂದಿಗೆ ಸನ್ನಿ ಡಿಯೋಲ್ ಅವರ ತಂದೆ ಧರ್ಮೇಂದ್ರ ಸಿಂಗ್ ಡಿಯೋಲ್ ಹಾಗೂ ಸನ್ನಿ ಡಿಯೋಲ್ ಮಾಲಕತ್ವದ ಸನ್ನಿ ಸೌಂಡ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಬ್ಯಾಂಕ್ ಆಫ್ ಬರೋಡಾದಿಂದ ಪಡೆಯಲಾಗಿರುವ ಸಾಲದ ಜಾಮೀನುದಾರರು ಹಾಗೂ ಕಾರ್ಪೊರೇಟರ್ ಜಾಮೀನುದಾರರು ಎಂದು ಹೆಸರಿಸಲಾಗಿದೆ.
ಹರಾಜಾಗಲಿರುವ ವಿಲ್ಲಾವನ್ನು ಜುಹುವಿನ ಗಾಂಧಿಗ್ರಾಮ ರಸ್ತೆಯಲ್ಲಿರುವ ಸನ್ನಿ ವಿಲ್ಲಾ ಎಂದು ನಮೂದಿಸಲಾಗಿದೆ. ಬಾಕಿ ಮೊತ್ತವನ್ನು ವಸೂಲಿ ಮಾಡಲು ವಿಲ್ಲಾದ ಆಸುಪಾಸಿರುವ ಜಮೀನನ್ನೂ ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಈ ಜಮೀನು ಮುಂಬೈ ಉಪನಗರ ಜಿಲ್ಲೆಯ ಅಂಧೇರಿ ತಾಲ್ಲೂಕಿನ ಜುಹು ಗ್ರಾಮದಲ್ಲಿನ ಸರ್ವೆ ನಂ. 41, ಹಿಸ್ಸಾ ನಂ. 5 (Pt), CTS ನಂ. 173 ಅನ್ನು ಹೊಂದಿರುವ ತುಂಡು ಭೂಮಿ ಹಾಗೂ ಚರಾಸ್ತಿಯಾಗಿದೆ.
ಹರಾಜಿಗೆ ರೂ. 51.43 ಕೋಟಿ ಮೀಸಲು ಬೆಲೆಯನ್ನು ಬ್ಯಾಂಕ್ ನಿಗದಿಗೊಳಿಸಿದ್ದು, ಹರಾಜಿನಲ್ಲಿ ಭಾಗವಹಿಸಲು ಸುಮಾರು ರೂ. 5.14 ಕೋಟಿ ಮೊತ್ತವನ್ನು ಠೇವಣಿ ಇಡಬೇಕಿದೆ. ಪ್ರತಿ ಹರಾಜಿನ ಕೂಗು ರೂ. 10 ಲಕ್ಷ ಹೆಚ್ಚಳವನ್ನು ಒಳಗೊಂಡಿರುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸನ್ನಿ ಡಿಯೋಲ್ ಅವರ ಪ್ರತಿನಿಧಿಯು, “ನಾವು ಸಮಸ್ಯೆಯನ್ನು ಪರಿಹರಿಸುವ ಪ್ರಕ್ರಿಯೆಯಲ್ಲಿದ್ದೇವೆ ಮತ್ತು ಸಮಸ್ಯೆಯು ಪರಿಹಾರವಾಗಲಿದೆ. ಈ ಕುರಿತು ಯಾವುದೇ ವದಂತಿಗಳನ್ನು ಹರಡಬಾರದು ಎಂದು ನಾವು ಮನವಿ ಮಾಡುತ್ತೇವೆ” ಎಂದು ಸ್ಪಷ್ಟನೆ ನೀಡಿದ್ದಾರೆ.