ಸಣ್ಣ ಮೊತ್ತದ ಸಾಲ ನೀಡಿಕೆಯಲ್ಲಿ ಎಚ್ಚರ ವಹಿಸುತ್ತಿರುವ ಬ್ಯಾಂಕ್ಗಳು
ಕ್ರೆಡಿಟ್ ಮಾರ್ಕೆಟ್ ಇಂಡಿಕೇಟರ್ ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಸಾಲ ಪಡೆದ ಇತಿಹಾಸವಿಲ್ಲದೆ ಗ್ರಾಹಕರಿಗೆ ರೂ 50,000ಕ್ಕಿಂತ ಕಡಿಮೆ ಮೊತ್ತದ ಸಾಲಗಳನ್ನು ನೀಡುವಲ್ಲಿ ಬ್ಯಾಂಕ್ಗಳು ಬಹಳ ಎಚ್ಚರಿಕೆ ವಹಿಸುತ್ತಿವೆ ಎಂದು ಟ್ರಾನ್ಸ್ಯೂನಿಯನ್ ಸಿಐಬಿಐಎಲ್ ವರದಿ ಹೇಳಿದೆ. ಈ ರೀತಿಯ ಗ್ರಾಹಕರಿಗೆ ಅನುಮೋದನೆ ಪ್ರಮಾಣವು ಮಾರ್ಚ್ 2020 ಹಾಗೂ 2021 ರಲ್ಲಿದ್ದ ಶೇ 34, ಮಾರ್ಚ್ 2023ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ ಶೇ 23ಕ್ಕೆ ಇಳಿಕೆಯಾಗಿದೆ ಎಂದು ಸಂಸ್ಥೆಯ ಕ್ರೆಡಿಟ್ ಮಾರ್ಕೆಟ್ ಇಂಡಿಕೇಟರ್ ವರದಿ ಹೇಳಿದೆ.
ರೂ 50,000ಕ್ಕಿಂತ ಕಡಿಮೆ ಮೊತ್ತದ ಸಾಲಗಳು ಎಲ್ಲಾ ವೈಯಕ್ತಿಕ ಸಾಲಗಳ ಪೈಕಿ ಶೇ 2ರಷ್ಟು ಪಾಲು ಹೊಂದಿವೆ ಎಂದು ವರದಿ ಹೇಳಿದೆ.
ವೈಯಕ್ತಿಕ ಸಾಲ ಕ್ಷೇತ್ರದಲ್ಲಿ ಸಾಲ ಮರುಪಾವತಿ ಮಾಡದವರ ಸಂಖ್ಯೆ ಎಪ್ರಿಲ್ 2022ರಲ್ಲಿ ಶೇ 31.4ರಷ್ಟಿದ್ದರೆ ಎಪ್ರಿಲ್ 21, 2023ರಲ್ಲಿದ್ದಂತೆ ಶೇ 32.9ಗೆ ಏರಿಕೆಯಾಗಿದೆ ಎಂದು ವರದಿ ಹೇಳಿದೆ.
ರೂ 50,000ಕ್ಕಿಂತ ಕಡಿಮೆ ಮೊತ್ತದ ಸಾಲದ ವಿಚಾರದಲ್ಲಿ ಸಾಲ ವಾಪಸಾತಿ ಪ್ರಕ್ರಿಯೆಯಲ್ಲಿ ಐಸಿಐಸಿಐ ಬ್ಯಾಂಕ್ ಸಮಸ್ಯೆಯಲ್ಲಿದೆ ಎಂದು ವರದಿ ಹೇಳಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ ಈ ವರ್ಷ ಯೆಸ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಕೂಡ ಸಾಲ ವಸೂಲಾತಿ ಪ್ರಕ್ರಿಯೆಯಲ್ಲಿ ಸಮಸ್ಯೆ ಎದುರಿಸಿದೆ.
ಹೆಚ್ಚುತ್ತಿರುವ ಜೀವನ ವೆಚ್ಚ, ಉದ್ಯೋಗ ನಷ್ಟ, ಆರ್ಥಿಕ ಹಿಂಜರಿತ ಇದಕ್ಕೆ ಕಾರಣ ಎಂದು ವರದಿ ಹೇಳಿದೆ.