ಕಾರು, ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರಗಳನ್ನು ಸದ್ದಿಲ್ಲದೆ ಹೆಚ್ಚಿಸುತ್ತಿರುವ ಬ್ಯಾಂಕುಗಳು: ವರದಿ
ಸಾಂದರ್ಭಿಕ ಚಿತ್ರ (PTI)
ಮುಂಬೈ: ಹಲವಾರು ಬ್ಯಾಂಕುಗಳು ಸಾಲಗಳ ಮೇಲಿನ ತಮ್ಮ ಕನಿಷ್ಠ ಬಡ್ಡಿದರ (ಎಂಸಿಎಲ್ಆರ್)ವನ್ನು ಪರಿಷ್ಕರಿಸುತ್ತಿದ್ದು, ಗೃಹಸಾಲಗಳನ್ನು ಹೊರತುಪಡಿಸಿ ಕೆಲವು ಚಿಲ್ಲರೆ ಸಾಲಗಳ ಮೇಲಿನ ಬಡ್ಡಿದರಗಳು ಏರತೊಡಗಿವೆ. ಬ್ಯಾಂಕುಗಳು ತಮ್ಮ ಗೃಹಸಾಲಗಳನ್ನು ರೆಪೊ ದರ (ಆರ್ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರ)ದೊಂದಿಗೆ ತಳುಕು ಹಾಕಿವೆಯಾದರೂ ಅವುಗಳ ಮೇಲಿನ ಬಡ್ಡಿದರ ಫೆಬ್ರವರಿ 2023ರಿಂದ ಸ್ಥಿರವಾಗಿವೆ, ಇತರ ಹಲವು ಸಾಲಗಳನ್ನು ರೆಪೊ ದರದೊಂದಿಗೆ ತಳುಕು ಹಾಕಲಾಗಿಲ್ಲ ಎಂದು timesofindia ವರದಿ ಮಾಡಿದೆ.
ಡಿಸೆಂಬರ್ವರೆಗೂ ಶೇ.8.65ರ ಕನಿಷ್ಠ ಬಡ್ಡಿ ದರಗಳಲ್ಲಿ ವಾಹನ ಸಾಲಗಳನ್ನು ಒದಗಿಸುತ್ತಿದ್ದ ಎಸ್ಬಿಐ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವ ಗ್ರಾಹಕರಿಗೆ ಕನಿಷ್ಠ ಬಡ್ಡಿ ದರವನ್ನು ಶೇ.8.85ಕ್ಕೆ ಹೆಚ್ಚಿಸಿದೆ. ಹಲವು ಇತರ ಬ್ಯಾಂಕುಗಳು ತಮ್ಮ ವೈಯಕ್ತಿಕ ಸಾಲ ದರಗಳನ್ನೂ ಹೆಚ್ಚಿಸಿವೆ. ಕಳೆದ ತಿಂಗಳು ವಾಹನ ಸಾಲಗಳ ಮೇಲೆ ಶೇ.8.7ರಷ್ಟು ಬಡ್ಡಿಯನ್ನು ವಿಧಿಸುತ್ತಿದ್ದ ಬ್ಯಾಂಕ್ ಆಫ್ ಬರೋಡಾ ಈಗ ಅದನ್ನು ಶೇ.8.8ಕ್ಕೆ ಹೆಚ್ಚಿಸಿದೆ ಮತ್ತು ಹಬ್ಬದ ತಿಂಗಳುಗಳಲ್ಲಿ ಮನ್ನಾ ಮಾಡಲಾಗಿದ್ದ ಸಂಸ್ಕರಣಾ ಶುಲ್ಕಗಳನ್ನು ಮರುಜಾರಿಗೊಳಿಸಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ತನ್ನ ವಾಹನ ಮತ್ತು ಕೆಲವು ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ. ಈ ಹಿಂದೆ ಕಾರು ಸಾಲಗಳಿಗೆ ಶೇ.8.75 ಕನಿಷ್ಠ ಬಡ್ಡಿದರವನ್ನು ವಿಧಿಸುತ್ತಿದ್ದ ಅದು ಈಗ ಬಡ್ಡಿದರವನ್ನು ಕನಿಷ್ಠ ಶೇ.9.15ಕ್ಕೆ ಹೆಚ್ಚಿಸಿದೆ. ಐಡಿಎಫ್ಸಿ ಫಸ್ಟ್ ಬ್ಯಾಂಕ್ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರವನ್ನು ನವಂಬರ್ನಲ್ಲಿದ್ದ ಶೇ.10.49ರಿಂದ ಶೇ.10.75ಕ್ಕೇರಿಸಿದ್ದರೆ ಇದೇ ಅವಧಿಯಲ್ಲಿ ಕರ್ಣಾಟಕ ಬ್ಯಾಂಕ್ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರವನ್ನು ಶೇ.14.21ರಿಂದ ಶೇ.14.28ಕ್ಕೆ ಹೆಚ್ಚಿಸಿದೆ.
ಬ್ಯಾಂಕುಗಳು ಬಡ್ಡಿದರಗಳನ್ನು ಪರಿಷ್ಕರಿಸಲು ಹಬ್ಬಗಳ ಋತು ಮುಗಿಯುವುದನ್ನು ಕಾಯುತ್ತಿದ್ದವು. ಹಣಕಾಸು ಮಾರುಕಟ್ಟೆಗಳಲ್ಲಿ ಬಿಗಿ ಸ್ಥಿತಿಯ ಜೊತೆಗೆ ಠೇವಣಿಗಳ ಮೇಲಿನ ಬಡ್ಡಿದರಗಳ ಪರಿಷ್ಕರಣೆಯಿಂದಾಗಿ ನಿಧಿಗಳ ವೆಚ್ಚದಲ್ಲಿ ಹೆಚ್ಚಳವಾಗಿದೆ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಹಿರಿಯ ಬ್ಯಾಂಕ್ ಅಧಿಕಾರಿಯೋರ್ವರು ತಿಳಿಸಿದರು. ಕುತೂಹಲಕಾರಿಯಾಗಿ, ಬ್ಯಾಂಕ್ ಆಫ್ ಮಹಾರಾಷ್ಟ್ರ ಜ.3ರಂದು ತನ್ನ ಗೃಹಸಾಲ ಬಡ್ಡಿದರವನ್ನು ಮೊದಲಿನ ಶೇ.8.5ರಿಂದ ಶೇ.8.35ಕ್ಕೆ ತಗ್ಗಿಸಿದೆ. ಗೃಹಸಾಲಗಳನ್ನು ಬಹುತೇಕ ಅಪಾಯ ಮುಕ್ತ ಎಂದು ಪರಿಗಣಿಸಿರುವುದರಿಂದ ಮತ್ತು ಸಾಲಗಾರನು ಬ್ಯಾಂಕ್ನಲ್ಲಿ ಉಳಿತಾಯ ಖಾತೆಯನ್ನು ಆರಂಭಿಸುವುದರೊಂದಿಗೆ ಬ್ಯಾಂಕಿನ ಠೇವಣಿ ಸಂಗ್ರಹ ಹೆಚ್ಚಲು ಕೊಡುಗೆ ನೀಡುವುದರಿಂದ ಈ ಬಡ್ಡಿ ಇಳಿಕೆಯು ಚಾಣಾಕ್ಷ ಕ್ರಮವಾಗಿದೆ ಎಂದು ಹಿರಿಯ ಬ್ಯಾಂಕರ್ ಓರ್ವರು ತಿಳಿಸಿದರು.
ಎಸ್ಬಿಐ ಡಿ.27ರಂದು ತನ್ನ ಠೇವಣಿಗಳ ಮೇಲಿನ ಬಡ್ಡಿದರವನ್ನು ಶೇ.50 ಮೂಲಾಂಕಗಳಷ್ಟು ಹೆಚ್ಚಿಸಿದ ಬಳಿಕ ಇತರ ಬ್ಯಾಂಕುಗಳೂ ಇದನ್ನು ಅನುಸರಿಸಿದವು. ಇದು ವಾಣಿಜ್ಯ ಸಾಲಗಳಿಗೆ ಮಾನದಂಡವಾಗಿರುವ ಅವುಗಳ ಕನಿಷ್ಠ ಸಾಲದರದ ಏರಿಕೆಗೆ ಕಾರಣವಾಗಿದ್ದು,ಹೀಗಾಗಿ ಈ ವಿಭಾಗದಲ್ಲಿಯೂ ಬಡ್ಡಿದರಗಳು ಹೆಚ್ಚಾಗುತ್ತವೆ.