ಬೀಡಿ ಕಾರ್ಮಿಕ ಮಹಿಳೆಯ ಪುತ್ರನಿಗೆ ಯುಪಿಎಸ್ಸಿ ಪರೀಕ್ಷೆಯಲ್ಲಿ 27ನೇ ರ್ಯಾಂಕ್
ನಂದಲಾ ಸಾಯಿಕಿರಣ್ | PC : timesofindia.indiatimes.com
ಹೈದರಾಬಾದ್: ತೆಲಂಗಾಣದ ಬೀಡಿ ಕಾರ್ಮಿಕ ಮಹಿಳೆಯೊಬ್ಬರ ಪುತ್ರ 27 ವರ್ಷದ ಹಾರ್ಡ್ವೇರ್ ಇಂಜಿನಿಯರ್ ನಂದಲಾ ಸಾಯಿಕಿರಣ್ ಅವರು ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 27ನೇ ರ್ಯಾಂಕ್ ಪಡೆದಿದ್ದಾರೆ. ಸಾಯಿಕಿರಣ್ ಚಿಕ್ಕವರಿರುವಾಗಲೇ ವೃತ್ತಿಯಲ್ಲಿ ನೇಕಾರರಾಗಿದ್ದ ಅವರ ತಂದೆ ತೀರಿಕೊಂಡಿದ್ದರು.
ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿರುವಾಗಲೇ ಸಾಯಿಕಿರಣ್ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದ್ದರು.
ಮೊದಲ ಪ್ರಯತ್ನದಲ್ಲಿ ಅವರು ಕೇವಲ 19 ಅಂಕಗಳು ಕಡಿಮೆಯಾಗಿದ್ದರಿಂದ ವಿಫಲರಾಗಿದ್ದರು. ಪರೀಕ್ಷೆ, ಪಠ್ಯಕ್ರಮ, ಕೇಳಲಾಗುವ ಪ್ರಶ್ನೆಗಳು ಕುರಿತಂತೆ ಆಳವಾಗಿ ಅಧ್ಯಯನ ನಡೆಸಿ ಬ್ಲಾಗ್ಗಳು ಮತ್ತು ಹಿಂದಿನ ಟಾಪರ್ಗಳ ಕುರಿತ ವೀಡಿಯೋಗಳನ್ನು ನೋಡಿದ್ದಾಗಿ ಅವರು ಹೇಳುತ್ತಾರೆ.
ಖಾಸಗಿ ಕೋಚಿಂಗ್ ಪಡೆಯುವ ಬದಲು ಅವರು ಆನ್ಲೈನ್ ಪರೀಕ್ಷೆ ಮತ್ತು ಇತರ ಕಲಿಕಾ ಸಾಮಗ್ರಿಗಳನ್ನು ಅವಲಂಬಿಸಿದ್ದರು. ವಾರಾಂತ್ಯಗಳಲ್ಲಿ ಹಾಗೂ ರಜಾ ದಿನಗಳನ್ನು ಕಲಿಕೆಗೆಂದೇ ಮೀಸಲಿರಿಸಿ ಶ್ರದ್ಧೆ ಮತ್ತು ಏಕಾಗ್ರಚಿತ್ತತೆಯಿಂದ ಕಲಿತು ಕಠಿಣ ಪರಿಶ್ರಮದಿಂದ ಈಗ ಸಿವಿಲ್ ಸರ್ವಿಸ್ ಪರೀಕ್ಷೆ ತೇರ್ಗಡೆಗೊಂಡು ಸಾಯಿಕಿರಣ್ ಎಲ್ಲರಿಗೂ ಮಾದರಿಯಾಗಿದ್ದಾರೆ.