ಪಶ್ಚಿಮ ಬಂಗಾಳ: ರಾಜಕೀಯ ಪಕ್ಷಗಳ ಬಾಂಬ್ ಹುಚ್ಚಾಟಕ್ಕೆ ಬಲಿಪಶುಗಳಾದ 565 ಮಕ್ಕಳು!
PC: sreengrab/youtube.com/ BBC World Service
ಲಂಡನ್: ಪಶ್ಚಿಮ ಬಂಗಾಳದಲ್ಲಿ 1996ರಿಂದೀಚೆಗೆ ರಾಜಕೀಯ ಪಕ್ಷಗಳ ಕಾರ್ಯಕರ್ತರು ಚುನಾವಣಾ ಪ್ರಚಾರದ ವೇಳೆ ಬಳಸಿದ ಕಚ್ಚಾ ಬಾಂಬ್ ಗಳಿಂದ ಕನಿಷ್ಠ 565 ಅಮಾಯಕ ಮಕ್ಕಳು ಮೃತಪಟ್ಟಿದ್ದಾರೆ, ಗಾಯಗೊಂಡಿದ್ದಾರೆ ಇಲ್ಲವೇ ಅಂಗವಿಲಕರಾಗಿದ್ದಾರೆ ಎಂಬ ಆತಂಕಕಾರಿ ಅಂಶವನ್ನು ಬಿಬಿಸಿ ಮಂಗಳವಾರ ಪ್ರಸಾರ ಮಾಡಿದ ಸಾಕ್ಷ್ಯಚಿತ್ರವೊಂದು ಬಹಿರಂಗಪಡಿಸಿದೆ.
"ಚಿಲ್ಡ್ರನ್ ಆಫ್ ದ ಬಾಂಬ್ಸ್" ಎಂಬ ಈ ಸಾಕ್ಷ್ಯಚಿತ್ರದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಬಂಗಾಲಿ ಸಂಗೀತಗಾರ ಕಬೀರ್ ಸುಮನ್ 1996ರಲ್ಲಿ "ಹೌಝಾತ್" ಕವನ ಬರೆದಿದ್ದು, ಕೊಲ್ಕತ್ತಾದ ಉದ್ಯಾನವನವೊಂದರಲ್ಲಿ 1996ರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಪುಚಿ ಎಂಬ ಒಂಬತ್ತು ವರ್ಷದ ಮಗು ಗಾಯಗೊಂಡ ಘಟನೆಯಿಂದ ಪ್ರೇರಣೆಗೊಂಡು ಈ ಕವನ ರಚಿಸಲಾಗಿತ್ತು.
ಪುಚಿ ಹಾಗೂ ಇತರ ನಾಲ್ಕು ಸ್ನೇಹಿತರು ಕ್ರಿಕೆಟ್ ಆಡುತ್ತಿದ್ದಾಗ ಒಂದು ಚೀಲದಲ್ಲಿ ಚೆಂಡುಗಳು ಪತ್ತೆಯಾದವು. ಕ್ರಿಕೆಟ್ ಬಾಲ್ ಇರಬೇಕು ಎಂದು ಮಕ್ಕಳು ಭಾವಿಸಿದ್ದರು ಎಂದು ಆತ ವಿವರಿಸಿದ್ದ. "ಆ ಚೆಂಡನ್ನು ನಾನು ಬ್ಯಾಟ್ ನಿಂದ ಹೊಡೆದಾಗ ಸ್ಫೋಟ ಸಂಭವಿಸಿತು". ಪೋಷಕರು ಬಂದು ನೋಡಿದಾಗ ಮಕ್ಕಳ ಪೈಕಿ ಒಬ್ಬನಿಗೆ ಕಣ್ಣುಗಳು ಹೋಗಿ ಆ ಭಾಗ ರಕ್ತಸಿಕ್ತವಾಗಿತ್ತು. ಇಬ್ಬರು ಮೃತಪಟ್ಟಿದ್ದರು. ಮೃತಪಟ್ಟ ಬಾಲಕ ಗೋಪಾಲ್ ನ ತಂದೆ ಬಬ್ಲು ಬಿಸ್ವಾಸ್ ಹೇಳುವಂತೆ ಹೂವಿನ ಆಕಾರದ ಪ್ಯಾಂಟ್ ನ ಬಟನ್ ನಿಂದ ಮಗನ ಮೃತದೇಹದ ಗುರುತು ಪತ್ತೆ ಮಾಡಲಾಗಿತ್ತು.
ಪುಚಿ ಸ್ನೇಹಿತ ಅವಿಜೀತ್ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಹೇಳಿದಂತೆ, "ಚುನಾವಣೆ ಎಂದರೆ ಭೀತಿ ಮತ್ತು ದೊಂಬಿ. ಯಾಕೆ ಇವು ಯಾವಾಗಲೂ ಕೊಳಗೇರಿ ಮಕ್ಕಳಿಗೇ ತೊಂದರೆಯಾಗುತ್ತವೆ ? ಕೆಲ ಮತಗಳಿಗಾಗಿ ಕೆಲವರ ಜೀವನವೇ ವ್ಯರ್ಥವಾಗುತ್ತದೆ"
ಬಿಬಿಸಿ ವರ್ಲ್ಡ್ ಸರ್ವೀಸ್ ನಿರ್ಮಿಸಿದ ಈ ಸಾಕ್ಷ್ಯಚಿತ್ರದಲ್ಲಿ ಪೌಲಮಿ ಎಂಬ ಬಾಲಕಿ ಕಾಣಿಸಿಕೊಂಡಿದ್ದು, 2018ರಲ್ಲಿ 7ನೇ ವಯಸ್ಸಿನಲ್ಲಿದ್ದಾಗ ಈಕೆ ಚೆಂಡು ಎಂದು ಭಾವಿಸಿ ಹೆಕ್ಕಿದ ವಸ್ತು ಬಾಂಬ್ ಆಗಿತ್ತು. ಅದು ಸ್ಫೋಟಗೊಂಡು ಆಕೆಯ ಬೆರಳುಗಳು ಛಿದ್ರವಾಗಿದ್ದವು.
ಈ ಸಾಕ್ಷ್ಯಚಿತ್ರಕ್ಕೆ ಸಂದರ್ಶನ ನೀಡಿದ ಬಳಿಕ ನವೆಂಬರ್ 30ರಂದು ಮೃತಪಟ್ಟ ಪಶ್ಚಿಮ ಬಂಗಾಳದ ಮಾಜಿ ಐಜಿಪಿ ಪಂಕಜ್ ದತ್ತಾ, "ಬಾಲ್ಯ ಹಾಗೂ ಯವ್ವೌನದ ದುರ್ಬಳಕೆ ವ್ಯಾಪಕವಾಗಿ ಆಗುತ್ತಿದೆ. ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದರೆ, ಇದನ್ನು ಕೊನೆಗೊಳಿಸುತ್ತಿದ್ದೆ. ಇಂಥ ಗುಂಪುಗಳ ವಿರುದ್ಧ ಸದಾ ನಾನು ನಿರ್ದಯಿ" ಎಂದು ಹೇಳಿದ್ದರು.