ಬಂಗಾಳ ಬಿಜೆಪಿ ಮುಖ್ಯಸ್ಥನ ಆಸ್ತಿ ಐದು ವರ್ಷಗಳಲ್ಲಿ ಶೇ. 114ರಷ್ಟು ಏರಿಕೆ!
ಪ್ರಧಾನಿ ಮೋದಿಯೊಂದಿಗೆ ಬಂಗಾಳ ಬಿಜೆಪಿ ಮುಖ್ಯಸ್ಥ ಸುಖಾಂತ ಮಜೂಂದಾರ್ Photo:X/MyAnandaBazar
ಕೊಲ್ಕತ್ತಾ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ಸುಖಾಂತ ಮಜೂಂದಾರ್ ಅವರ ಆಸ್ತಿಯ ಮೌಲ್ಯ ಕಳೆದ ಐದು ವರ್ಷಗಳಲ್ಲಿ ಶೇಕಡ 114ರಷ್ಟು ಏರಿಕೆಯಾಗಿರುವುದು ಬಹಿರಂಗವಾಗಿದೆ. ಬರೂಲ್ ಘಾಟ್ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಅವರು ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್ ನಲ್ಲಿ ಈ ಅಂಶ ಬೆಳಕಿಗೆ ಬಂದಿದೆ.
ಅದೇ ರೀತಿ ಬಿಜೆಪಿಯ ಡಾರ್ಜಿಲಿಂಗ್ ಸಂಸದ ರಾಜು ಬಿಷ್ಟಾ ಅವರ ಆಸ್ತಿ ಕಳೆದ ಐದು ವರ್ಷಗಳಲ್ಲಿ ಶೇಕಡ 215ರಷ್ಟು ಏರಿಕೆ ಕಂಡಿದೆ.
ವೆಸ್ಟ್ ಬೆಂಗಾಲ್ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್), ರಾಜ್ಯದ ಡಾರ್ಜಿಲಿಂಗ್, ಬರೂಲ್ ಘಾಟ್ ಮತ್ತು ರಾಯ್ ಗಂಜ್ ಕ್ಷೇತ್ರಗಳ ಎಲ್ಲ 47 ಅಭ್ಯರ್ಥಿಗಳ ಆಸ್ತಿಯ ವಿವರಗಳನ್ನು ವಿಶ್ಲೇಷಿಸಿವೆ. ಈ ಕ್ಷೇತ್ರಗಳಲ್ಲಿ ಮತದಾನ ಎರಡನೇ ಹಂತದಲ್ಲಿ ಅಂದರೆ ಏಪ್ರಿಲ್ 26ರಂದು ನಡೆಯಲಿದೆ.
ಡಾರ್ಜಿಲಿಂಗ್ ಸಂಸದ ಬಿಷ್ಟಾ 2019ರ ಚುನಾವಣೆಯಲ್ಲಿ ಘೋಷಿಸಿದಂತೆ ಅವರ ಆಸ್ತಿಯ ಮೌಲ್ಯ 15 ಕೋಟಿ ರೂಪಾಯಿ ಆಗಿತ್ತು. ಈ ಬಾರಿ 47 ಕೋಟಿ ರೂಪಾಯಿ ಆಸ್ತಿಯನ್ನು ಅವರು ಘೋಷಿಸಿದ್ದು, ಕಳೆದ ಐದು ವರ್ಷಗಳ ಅವಧಿಯಲ್ಲಿ ಆಸ್ತಿ ಮೌಲ್ಯ 32 ಕೋಟಿ ರೂಪಾಯಿಯಷ್ಟು ಏರಿಕೆ ಕಂಡಿದೆ.
ಅಂತೆಯೇ ಮಜೂಂದಾರ್ 2019ರ ಚುನಾವಣೆಯಲ್ಲಿ 58.25 ಲಕ್ಷ ರೂಪಾಯಿ ಆಸ್ತಿ ಘೋಷಿಸಿಕೊಂಡಿದ್ದರೆ, ಈ ಬಾರಿ ಸಲ್ಲಿಸಿದ ಅಫಿಡವಿಟ್ ನಲ್ಲಿ ಅವರ ಆಸ್ತಿ ಮೌಲ್ಯ 1.24 ಕೋಟಿ ರೂಪಾಯಿಗೆ ಹೆಚ್ಚಿದೆ.