ಬಂಗಾಳ ಸ್ಥಳೀಯ ಸಂಸ್ಥೆಗಳ ನೇಮಕಾತಿ ಹಗರಣ
ಸಚಿವ ರತಿನ್ ಘೋಷ್ ನಿವಾಸಕ್ಕೆ ಈಡಿ ದಾಳಿ
ರತಿನ್ ಘೋಷ್ | Photo : ANI
ಕೋಲ್ಕತಾ : ಪಶ್ಚಿಮಬಂಗಾಳದ ಆಹಾರ ಹಾಗೂ ಪೂರೈಕೆ ಸಚಿವ ಮತ್ತು ಟಿಎಂಸಿ ನಾಯಕ ರತಿನ್ ಘೋಷ್ ಅವರ ನಿವಾಸ ಹಾಗೂ ಅವರಿಗೆ ಸೇರಿದ ಹಲವು ಸ್ಥಳಕ್ಕೆ ಜಾರಿ ನಿರ್ದೇಶನಾಲಯ (ಈಡಿ) ಗುರುವಾರ ದಾಳಿ ನಡೆಸಿದೆ.
ಸ್ಥಳೀಯ ಸಂಸ್ಥೆಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಈ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಉತ್ತರ 24 ಪರಗಣ ಜಿಲ್ಲೆಯ ಮಾಯಿಕಲ್ ನಗರ್ ನಲ್ಲಿರುವ ಘೋಷ್ ಅವರ ನಿವಾಸದಲ್ಲಿ ಇಂದು ಬೆಳಗ್ಗೆ ಶೋಧ ಕಾರ್ಯಾಚರಣೆ ನಡೆಸಿದರು. ಇದೇ ಸಂದರ್ಭ ಇತರ 12 ಸ್ಥಳಗಳಲ್ಲಿ ಕೂಡ ಶೋಧ ಕಾರ್ಯಾಚರಣೆ ನಡೆಸಿದರು. ಈ ಸಂದರ್ಭ ಘೋಷ್ ಅವರು ಮನೆಯಲ್ಲಿ ಇದ್ದರೇ ಎಂಬುದು ಇದುವರೆಗೆ ತಿಳಿದು ಬಂದಿಲ್ಲ.
ಮಧ್ಯಮ್ ಗ್ರಾಮಂನ ಟಿಎಂಸಿ ಶಾಸಕರಾಗಿರುವ ರತಿನ್ ಘೋಷ್, ಈ ಹಿಂದೆ ಮಧ್ಯಮ್ ಗ್ರಾಮಂ ಪುರಸಭೆ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದರು. ಪಕ್ಷದ ‘ಒಂದು ವ್ಯಕ್ತಿ, ಒಂದು ಹುದ್ದೆ’ ನಿಲುವಿನ ಹಿನ್ನೆಲೆಯಲ್ಲಿ ಅವರು ಈ ಹುದ್ದೆ ತ್ಯಜಿಸಿದ್ದರು.
2014 ಹಾಗೂ 2018ರ ನಡುವೆ ರಾಜ್ಯದ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಕಾನೂನು ಬಾಹಿರವಾಗಿ 1,500 ಮಂದಿಯನ್ನು ನೇಮಕ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
ಬಿಜೆಪಿ ತನ್ನ ರಾಜಕೀಯ ಲಾಭಕ್ಕಾಗಿ ಕೇಂದ್ರ ತನಿಖಾ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಯನ್ನು ನಿರಂತರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಹಾಗೂ ಪ್ರಜಾಪ್ರಭುತ್ವದ ವಿನ್ಯಾಸವನ್ನು ದುರ್ಬಲಗೊಳಿಸುತ್ತಿದೆ ಎಂದು ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಟಿಎಂಸಿ ಈ ಹಿಂದೆ ಹೇಳಿತ್ತು.