ಯುಎಇಯಲ್ಲಿ 200 ಕೋ. ರೂ. ವಿವಾಹ: ಬೆಟ್ಟಿಂಗ್ ಆ್ಯಪ್ ಪ್ರವರ್ತಕನ ವಿರುದ್ಧ ಇ.ಡಿ. ಕೆಂಗಣ್ಣು
Photo: PTI
ಹೊಸದಿಲ್ಲಿ: ಭಿಲೈನ ಬೆಟ್ಟಿಂಗ್ ಆ್ಯಪ್ ಪ್ರವರ್ತಕ ಸೌರಭ್ ಚಂದ್ರಶೇಖರ್, ವಿವಾಹಕ್ಕೆ 200 ಕೋಟಿ ರೂಪಾಯಿ ವೆಚ್ಚ ಮಾಡುವ ಮೂಲಕ ಉಕ್ಕಿನ ಮನುಷ್ಯ ಲಕ್ಷ್ಮಿ ಮಿತ್ತಲ್ ಮತ್ತು ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರ ಸಾಲಿಗೆ ಸೇರಿದ್ದಾರೆ. ಆದರೆ ವಿವಾಹಕ್ಕೆ ವೆಚ್ಚ ಮಾಡಿದ ಎಲ್ಲ 200 ಕೋಟಿ ರೂಪಾಯಿ ಮೊತ್ತವನ್ನು ನಗದು ರೂಪದಲ್ಲಿ ನೀಡಿರುವುದು ಕಾನೂನು ಜಾರಿ ನಿರ್ದೇಶನಾಲಯದ ಕೆಂಗಣ್ಣಿಗೆ ಕಾರಣವಾಗಿದೆ. ಹಣ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ನಿರ್ದೇಶನಾಲಯ ಶುಕ್ರವಾರ ತನಿಖಾ ವರದಿ ಬಹಿರಂಗಪಡಿಸಿದೆ.
ಬೆಟ್ಟಿಂಗ್ ಸಿಂಡಿಕೇಟ್ ಮೂಲಕ ಅಪರಾಧದಿಂದ ಬಂದ ಹಣವನ್ನು ಎಫ್ಪಿಐ ಮಾರ್ಗದ ಮೂಲಕ ಭಾರತದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿರುವುದು ಪತ್ತೆಯಾಗಿದ್ದು, ಏಜೆನ್ಸಿ 417 ಕೋಟಿ ರೂಪಾಯಿ ಮೌಲ್ಯದ ಷೇರು ಮತ್ತು ಇತರ ಆಸ್ತಿಗಳನ್ನು ವಶಪಡಿಸಿಕೊಂಡಿದೆ ಎಂದು ಸ್ಪಷ್ಟಪಡಿಸಿದೆ.
ಸೌರಭ್ ಚಂದ್ರಶೇಖರ್ ಹಾಗೂ ಅವರ ಪಾಲುದಾರ ರವಿ ಉಪ್ಪಳ್, ಛತ್ತೀಸ್ಗಢದ ಭಿಲಾಯ್ ಮೂಲದವರಾಗಿದ್ದು, ಇವರು ಮಹದೇವ್ ಆ್ಯಪ್ನ ಪ್ರವರ್ತಕರು ಮತ್ತು ದುಬೈಯನ್ನು ಕೇಂದ್ರವಾಗಿಟ್ಟುಕೊಂಡು ಬೆಟ್ಟಿಂಗ್ ಸಿಂಡಿಕೇಟ್ ನಡೆಸುತ್ತಿದ್ದರು ಎನ್ನಲಾಗಿದೆ.
ಕಳೆದ ಫೆಬ್ರುವರಿಯಲ್ಲಿ ಯುಎಇಯ ಆರನೇ ಅತಿದೊಡ್ಡ ನಗರವಾದ ರಾಸ್ ಅಲ್ ಖೈಮಾದಲ್ಲಿ ಚಂದ್ರಶೇಖರ್ ಅವರ ಅದ್ದೂರಿ ವಿವಾಹ ನಡೆದಿದ್ದು, ಅವರು ವಿವಾಹ ಯೋಜಕರಿಗೆ 120 ಕೋಟಿ ರೂಪಾಯಿ ಪಾವತಿಸಿದ್ದಾರೆ ಹಾಗೂ ನಾಗ್ಪುರದಿಂದ ಕುಟುಂಬ ಸದಸ್ಯರನ್ನು ಮತ್ತು ವಿವಾಹದಲ್ಲಿ ಕಾರ್ಯಕ್ರಮ ನೀಡಲು ಸೆಲೆಬ್ರಿಟಿಗಳನ್ನು ಕರೆತರಲು ಹಾಗೂ ಬಾಲಿವುಡ್ ಸೆಟ್ ಮತ್ತು ಅಲಂಕಾರ ಸಾಮಗ್ರಿಗಳನ್ನು ತರಲು ಖಾಸಗಿ ವಿಮಾನ ಬಾಡಿಗೆಗೆ ಪಡೆದಿದ್ದರು. ಈ ಎಲ್ಲ ಪಾವತಿಗಳನ್ನು ಹವಾಲಾ ಚಾನಲ್ ಬಳಸಿಕೊಂಡು ನಗದು ರೂಪದಲ್ಲಿ ಪಾವತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.
ವಶಪಡಿಸಿಕೊಂಡ ಡಿಜಿಟಲ್ ದಾಖಲೆಗಳ ಪ್ರಕಾರ 112 ಕೋಟಿ ರೂಪಾಯಿಗಳನ್ನು ಹವಾಲಾ ಮೂಲಕ ಈವೆಂಟ್ ಮ್ಯಾಜೇನ್ಮೆಂಟ್ ಕಂಪನಿ ಆರ್-1 ಈವೆಂಟ್ಸ್ ಪ್ರೈವೇಟ್ ಲಿಮಿಟೆಡ್ನ ಯೋಗೇಶ್ ಪೋಪಟ್ ಅವರಿಗೆ ನೀಡಲಾಗಿದೆ. ಹೋಟೆಲ್ ಕಾಯ್ದಿರಿಸಲು 42 ಕೋಟಿ ರೂಪಾಯಿಗಳನ್ನು ಕೂಡಾ ನಗದು ರೂಪದಲ್ಲಿ ನೀಡಲಾಗಿದೆ ಎಂದು ಇ.ಡಿ.ಸ್ಪಷ್ಟಪಡಿಸಿದೆ.