ಜಿ20 ಶೃಂಗಸಭೆ: ಪ್ರಧಾನಿ ನರೇಂದ್ರ ಮೋದಿ ಭಾಷಣದ ವೇಳೆ ನೇಮ್ ಕಾರ್ಡ್ ನಲ್ಲಿ ‘ಭಾರತ್’ ಪ್ರದರ್ಶನ
Photo: ANI
ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ನಡೆದ ಜಿ20 ಶೃಂಗಸಭೆ: ಯನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾಗ ಅವರ ಮುಂದೆ ದೇಶದ ಹೆಸರನ್ನು ನೇಮ್ ಕಾರ್ಡ್ ನಲ್ಲಿ 'ಭಾರತ್' ಎಂದು ಬರೆಯಲಾಗಿದೆ.. ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯನ್ನು 'ಭಾರತ್' ಅನ್ನು ಪ್ರತಿನಿಧಿಸುವ ನಾಯಕ ಎಂದು ಗುರುತಿಸಲಾಯಿತು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶೃಂಗಸಭೆಯಲ್ಲಿ ಉದ್ಘಾಟನಾ ಭಾಷಣ ಮಾಡುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವೀಡಿಯೊಗಳು ಹಾಗೂ ಫೋಟೋಗಳು 'ಭಾರತ್' ಎಂಬ ಫಲಕವನ್ನು ಪ್ರದರ್ಶಿಸಿದವು.
"ಭಾರತದ G20 ಅಧ್ಯಕ್ಷತೆಯು ದೇಶದ ಒಳಗೆ ಮತ್ತು ಹೊರಗೆ 'ಸಬ್ ಕಾ ಸಾಥ್' ನ ಸಂಕೇತವಾಗಿದೆ. ಇದು ಭಾರತದಲ್ಲಿ ಜನರ G20 ಆಗಿ ಮಾರ್ಪಟ್ಟಿದೆ ಮತ್ತು ದೇಶಾದ್ಯಂತ 200 ಕ್ಕೂ ಹೆಚ್ಚು ಸಭೆಗಳನ್ನು ನಡೆಸಲಾಗಿದೆ" ಎಂದು ಪ್ರಧಾನಿ ಮೋದಿ ಹೇಳಿದರು.
ತಮ್ಮ ಉದ್ಘಾಟನಾ ಭಾಷಣದ ಮೊದಲು ಪ್ರಧಾನಿ ಮೋದಿ ಅವರು ಜಿ 20 ಶೃಂಗಸಭೆಯ ಸ್ಥಳವಾದ ಭಾರತ್ ಮಂಟಪದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಮತ್ತು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವಾರು ವಿಶ್ವ ನಾಯಕರನ್ನು ಸ್ವಾಗತಿಸಿದರು.
ವಿಶ್ವಸಂಸ್ಥೆಯ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್, ಇಂಟರ್ನ್ಯಾಷನಲ್ ಮಾನಿಟರಿ ಫಂಡ್ (ಐಎಂಎಫ್) ವ್ಯವಸ್ಥಾಪಕ ನಿರ್ದೇಶಕಿ ಮತ್ತು ಅಧ್ಯಕ್ಷೆ ಕ್ರಿಸ್ಟಲಿನಾ ಜಾರ್ಜಿವಾ ಮತ್ತು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ) ಮಹಾನಿರ್ದೇಶಕ ಎನ್ಗೋಝಿ ಒಕೊಂಜೊ-ಇವಾಲಾ ಪ್ರಗತಿ ಮೈದಾನದಲ್ಲಿ ಹೊಸದಾಗಿ ನಿರ್ಮಿಸಲಾದ ಸ್ಥಳಕ್ಕೆ ಆಗಮಿಸಿದವರಲ್ಲಿ ಮೊದಲಿಗರು.