ಕರ್ಪೂರಿ ಠಾಕೂರ್ಗೆ ಭಾರತ ರತ್ನ: ಜನನಾಯಕರೊಬ್ಬರ ರಾಜಕೀಯ ನೀತಿಗಳು ಇನ್ನೂ ಏಕೆ ಪ್ರತಿಧ್ವನಿಸುತ್ತಿವೆ?
ʼಬಿಹಾರದ ಸಿಎಂ ನಿತೀಶ್ ಕುಮಾರ್ ಗೆ ಕೆಲಸ ಸಿಕ್ಕಿದ್ದು ಕರ್ಪೂರಿ ಠಾಕೂರ್ ರ ಉದ್ಯೋಗ ನೀತಿಯಿಂದʼ
Photo : x/@narendramodi
ಹೊಸದಿಲ್ಲಿ : ಕರ್ಪೂರಿ ಠಾಕೂರ್ ಅವರು ಎರಡು ಬಾರಿ ಅಲ್ಪಾವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು, ಆದರೆ ಅವರ ಆಮೂಲಾಗ್ರ ನೀತಿ ನಿರ್ಧಾರಗಳು ಹೆಚ್ಚಿನ ಪರಿಣಾಮವನ್ನು ಬೀರಿದವು, ಅದಕ್ಕಾಗಿ ಅವರು ಜಾತಿವಾದಿ ನಿಂದನೆಗಳನ್ನು ಎದುರಿಸಬೇಕಾಯಿತು. ಕರ್ಪೂರಿ ಠಾಕೂರ್ ಅವರ ಜೀವನ ಮತ್ತು ಸಮಯದ ಸಂಕ್ಷಿಪ್ತ ವಿವರಣೆಯನ್ನು indianexpress.com ನೀಡಿದೆ.
ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡುವುದಾಗಿ ಕೇಂದ್ರವು ಮಂಗಳವಾರ ಜನವರಿ 23, 2024 ರಂದು ಘೋಷಿಸಿದೆ. ಬಿಹಾರದ ಪ್ರಮುಖ ರಾಜಕೀಯ ಪಕ್ಷಗಳಾದ ಆರ್ಜೆಡಿ ಮತ್ತು ಜೆಡಿ(ಯು) ಠಾಕೂರ್ಗೆ ಭಾರತ ರತ್ನ ನೀಡಬೇಕೆಂದು ನಿಯಮಿತವಾಗಿ ಬೇಡಿಕೆ ಇಟ್ಟಿತ್ತು. ಸಮಾಜದ ಅತ್ಯಂತ ಹಿಂದುಳಿದ ವರ್ಗಗಳ ಘನತೆ, ಸ್ವಾಭಿಮಾನ ಮತ್ತು ಅಭಿವೃದ್ಧಿಗಾಗಿ ಅವರ ಹೋರಾಟ ಹೆಸರುವಾಸಿಯಾಗಿದೆ.
ಠಾಕೂರ್ ಅವರ (ಜನವರಿ 24, 1924-ಫೆಬ್ರವರಿ 17, 1988) ರಾಜಕೀಯ ಜೀವನವು ವ್ಯತಿರಿಕ್ತವಾಗಿತ್ತು. ಅವರು ಅಲ್ಪಸಂಖ್ಯಾತ ನಾಯ್ (ಕ್ಷೌರಿಕ) ಜಾತಿಗೆ ಸೇರಿದವರಾಗಿದ್ದರೂ ಬಿಹಾರದಲ್ಲಿ ಅತಿ ಎತ್ತರದ ಹಿಂದುಳಿದ ಜಾತಿ ನಾಯಕರಾಗಿ ಹೊರಹೊಮ್ಮಲು ಯಶಸ್ವಿಯಾದರು. ಅವರು ಅಲ್ಪಾವಧಿಗೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು. ಆದರೆ ಅವರ ಆಮೂಲಾಗ್ರ ನೀತಿ ನಿರ್ಧಾರಗಳು ದೊಡ್ಡ ಪರಿಣಾಮವನ್ನು ಬೀರಿದವು. ಅವು ಇಂದಿಗೂ ಪ್ರತಿಧ್ವನಿಸುತ್ತವೆ.
ಠಾಕೂರ್ ಅವರು ಬಿಹಾರದ ಸಮಸ್ತಿಪುರ್ ಜಿಲ್ಲೆಯ ಪಿತೌಂಜಿಯಾ (ಈಗ ಕರ್ಪೂರಿ ಗ್ರಾಮ ಎಂದು ಕರೆಯುತ್ತಾರೆ) ಗ್ರಾಮದಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲು ವಾಸವನ್ನೂ ಅನುಭವಿಸಿದ್ದರು. ಸ್ವತಂತ್ರ ಭಾರತದಲ್ಲಿ 1952ರಲ್ಲಿ ಶಾಸಕರಾಗಿ ಆಯ್ಕೆಯಾದರು. 1988ರಲ್ಲಿ ನಿಧನರಾಗುವವರೆಗೂ ಶಾಸಕರಾಗಿದ್ದರು. 1977ರಲ್ಲಿ ಒಮ್ಮೆ ಮಾತ್ರ ಸಂಸದರಾಗಿದ್ದರು. 1984ರಲ್ಲಿ ಅಸೆಂಬ್ಲಿ ಚುನಾವಣೆಯಲ್ಲಿ ಸೋತಾಗ, ಇಂದಿರಾ ಗಾಂಧಿ ಹತ್ಯಾಯಾದ ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ಸಿನ ಅನುಕಂಪದ ಅಲೆಯಲ್ಲಿ ಮಾತ್ರ ಅವರು ಸೋತಿದ್ದರು.
ಠಾಕೂರ್ ಅವರು ಮಾರ್ಚ್ 5, 1967 ರಿಂದ ಜನವರಿ 28, 1968 ರವರೆಗೆ ಬಿಹಾರದ ಶಿಕ್ಷಣ ಸಚಿವರಾಗಿದ್ದರು. ಅವರು ಡಿಸೆಂಬರ್ 1970 ರಲ್ಲಿ ಸಂಯುಕ್ತ ಸಮಾಜವಾದಿ ಪಕ್ಷದ ಸರಕಾರದಲ್ಲಿ ರಾಜ್ಯದ ಮುಖ್ಯಮಂತ್ರಿಯಾದರು. ಆದರೆ ಅವರ ಸರಕಾರವು ಆರು ತಿಂಗಳ ನಂತರ ಪತನವಾಯಿತು. ಅವರು ಜೂನ್ 1977 ರಲ್ಲಿ ಮತ್ತೆ ಮುಖ್ಯಮಂತ್ರಿ ಹುದ್ದೆಗೆ ಬಂದರು. ಆದರೆ ಪೂರ್ಣ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸುಮಾರು ಎರಡು ವರ್ಷಗಳಲ್ಲಿ ಅಧಿಕಾರವನ್ನು ಕಳೆದುಕೊಂಡರು. ಅವರು ಜಾರಿಗೆ ತಂದ ಮೀಸಲಾತಿ ನೀತಿಯೇ ಅವರಿಗೆ ಅಧಿಕಾರ ಕಳೆದುಕೊಳ್ಳಲು ಕಾರಣವಾಯಿತು.
ಸಾಮಾಜಿಕ ನ್ಯಾಯದ ನಾಯಕರ ತಲೆಮಾರು ಬಿಹಾರದಲ್ಲಿ ಹೆಚ್ಚು ಶಕ್ತಿಶಾಲಿಯಾಗುತ್ತಿದ್ದಂತೆ, ಠಾಕೂರ್ ಅವರು ಅನುಭವಿಸಿದ ಪ್ರಾಧಾನ್ಯತೆಯನ್ನು ನಿಧಾನವಾಗಿ ಕಳೆದುಕೊಂಡರು. ಅವರ ನೀತಿ ನಿರ್ಧಾರಗಳು ಧ್ರುವೀಕರಣಗೊಳ್ಳುತ್ತಿದ್ದರೂ, ಅವರ ಸ್ವಚ್ಛ ವ್ಯಕ್ತಿತ್ವಕ್ಕಾಗಿ ಅವರು ವೈಯಕ್ತಿಕವಾಗಿ ಗೌರವಿಸಲ್ಪಟ್ಟರು.
ಅವರ ಬಗ್ಗೆ ಜನಪ್ರಿಯವಾದ ಒಂದು ಘಟನೆಯಿದೆ. ಅವರು 1952 ರಲ್ಲಿ ಮೊದಲ ಬಾರಿಗೆ ಶಾಸಕರಾದಾಗ, ಅವರು ಆಸ್ಟ್ರಿಯಾಕ್ಕೆ ತೆರಳುವ ಅಧಿಕೃತ ನಿಯೋಗಕ್ಕೆ ಆಯ್ಕೆಯಾದರು. ನಿಯೋಗದ ಜೊತೆ ಪ್ರಯಾಣಿಸಲು ಅವರ ಬಳಿ ಕೋಟ್ ಇರಲಿಲ್ಲ. ತಮ್ಮ ಸ್ನೇಹಿತನಿಂದ ಹರಿದ ಕೋಟ್ ಒಂದನ್ನು ಅವರು ಎರವಲು ಪಡೆಯಬೇಕಾಯಿತು. ಪ್ರವಾಸ ಸಂದರ್ಭದಲ್ಲಿ ಯುಗೊಸ್ಲಾವಿಯಾದ ಅಧ್ಯಕ್ಷ ಜೋಸಿಪ್ ಟಿಟೊ ಹರಿದ ಕೋಟ್ ಅನ್ನು ಗಮನಿಸಿದರು. ಠಾಕೂರ್ ಅವರಿಗೆ ಹೊಸ ಕೋಟ್ ಅನ್ನು ಉಡುಗೊರೆಯಾಗಿ ನೀಡಿದರು. ಮೂರು ದಶಕಗಳ ಸಾರ್ವಜನಿಕ ಜೀವನದಲ್ಲಿದ್ದ ಠಾಕೂರ್ 1988 ರಲ್ಲಿ ನಿಧನರಾದಾಗ, ಅವರ ಮನೆ ಗುಡಿಸಲಿಗಿಂತ ಸ್ವಲ್ಪ ಹೆಚ್ಚಿತ್ತು. ಅಷ್ಟು ಪ್ರಾಮಾಣಿಕ ವ್ಯಕ್ತಿತ್ವ ಅವರದ್ದು!
ಪ್ರಮುಖ ನೀತಿ ನಿರ್ಧಾರಗಳು
ಠಾಕೂರ್ ಅವರ ಅನೇಕ ನಿರ್ಧಾರಗಳಿಗೆ ಹೆಸರುವಾಸಿಯಾಗಿದ್ದಾರೆ. ಮೆಟ್ರಿಕ್ಯುಲೇಷನ್ ಪರೀಕ್ಷೆಗಳಿಗೆ ಇಂಗ್ಲಿಷ್ ಅನ್ನು ಕಡ್ಡಾಯ ವಿಷಯವಾಗಿ ತೆಗೆದುಹಾಕುವುದು; ಮದ್ಯದ ನಿಷೇಧ; ಸರ್ಕಾರಿ ಗುತ್ತಿಗೆಗಳಲ್ಲಿ ನಿರುದ್ಯೋಗಿ ಇಂಜಿನಿಯರ್ಗಳಿಗೆ ಆದ್ಯತೆ. ಅವರ ಈ ನೀತಿಗಳ ಮೂಲಕ ಸುಮಾರು 8,000 ಜನರು ಉದ್ಯೋಗವನ್ನು ಪಡೆದರು. ಬಿಹಾರದ ಇಂದಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ಉದ್ಯೋಗಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದ ನಿರುದ್ಯೋಗಿ ಇಂಜಿನಿಯರ್ ಆಗಿದ್ದರು ಎನ್ನುವುದು ವಿಶೇಷ. ಅದರ ಜೊತೆಗೆ ಅವರು ಜಾರಿಗೆ ತಂದ ಒಳ ಮೀಸಲಾತಿ ವ್ಯವಸ್ತೆಯೂ ಬಿಹಾರ ಮಾತ್ರವಲ್ಲದೇ ದೇಶದ ಮೇಲೆ ಬಹಳಷ್ಟು ಪರಿಣಾಮ ಬೀರಿತು.
ಜೂನ್ 1970 ರಲ್ಲಿ, ಬಿಹಾರ ಸರಕಾರವು ಮುಂಗೇರಿ ಲಾಲ್ ಆಯೋಗವನ್ನು ನೇಮಿಸಿತು. ಇದು ಫೆಬ್ರವರಿ 1976 ರ ತನ್ನ ವರದಿಯಲ್ಲಿ 128 ಹಿಂದುಳಿದ ಸಮುದಾಯಗಳನ್ನು ಹೆಸರಿಸಿತು. ಅದರಲ್ಲಿ 94 ಅತ್ಯಂತ ಹಿಂದುಳಿದ ಜಾತಿಗಳು ಎಂದು ಗುರುತಿಸಲಾಗಿದೆ. ಠಾಕೂರ್ ಅವರ ಜನತಾ ಪಕ್ಷದ ಸರಕಾರವು ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸಿತು. ‘ಕರ್ಪೂರಿ ಠಾಕೂರ್ ನೀತಿ’ 26% ಮೀಸಲಾತಿಯನ್ನು ಒದಗಿಸಿತು. ಅದರಲ್ಲಿ OBC ಗಳು 12% ಪಾಲನ್ನು ಪಡೆದರು, OBC ಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳು 8%, ಮಹಿಳೆಯರಿಗೆ 3% ಮತ್ತು ಮೇಲ್ಜಾತಿಯಿಂದ ಬಡವರು 3% ಮೀಸಲಾತಿ ಪಡೆದರು. ಈ ಮೀಸಲಾತಿ ವ್ಯವಸ್ಥೆಯ ಜಾರಿಗೊಳಿಸಿದ್ದ ಪರಿಣಾಮ ಅವರ ಸರಕಾರ ಪತನವಾಯಿತು. ಅವರು ಮೇಲ್ಜಾತಿಗಳಿಂದ ದೊಡ್ಡ ವಿರೋಧ ಎದುರಿಸಿದರು.
ಠಾಕೂರ್ ಅವರ ಪರಂಪರೆಯನ್ನು ಬಿಹಾರದ ಎಲ್ಲಾ ರಾಜಕೀಯ ನಾಯಕರು ಇಂದು ಪ್ರತಿಪಾದಿಸುತ್ತಿದ್ದಾರೆ. ಸಂಖ್ಯಾತ್ಮಕವಾಗಿ ಸಣ್ಣ ಆರ್ಥಿಕವಾಗಿ ಹಿಂದುಳಿದ ಸಮುದಾಯದಿಂದ ಬಂದಿರುವ ಸಿಎಂ ನಿತೀಶ್ ಕುಮಾರ್ ಅವರು ಠಾಕೂರ್ ಅವರೊಂದಿಗೆ ನಿಕಟವಾಗಿ ಗುರುತಿಸಿಕೊಳ್ಳಲು ವಿಶೇಷವಾಗಿ ಪ್ರಯತ್ನಿಸಿದ್ದಾರೆ.