ಭೋಪಾಲ್ | ಬಿಯರ್ ಕುಡಿಯುವಂತೆ ಶಿಕ್ಷಕ ಬಲವಂತಪಡಿಸಿದರೆಂದು ಆರೋಪಿಸಿ ವಿದ್ಯಾರ್ಥಿ ಆತ್ಮಹತ್ಯೆ
ಶಿಕ್ಷಣ ವ್ಯವಸ್ಥೆ ಸುಧಾರಿಸುವಂತೆ ಸರಕಾರ, ಪೊಲೀಸರಿಗೆ ವಿಡಿಯೋ ಮೂಲಕ ಮನವಿ

ಸಾಂದರ್ಭಿಕ ಚಿತ್ರ
ಭೋಪಾಲ್: ಶಿಕ್ಷಕರೊಬ್ಬರು ನನಗೆ ಕಿರುಕುಳ ನೀಡಿ, ಬಿಯರ್ ಕುಡಿಯುವಂತೆ ಬಲವಂತಪಡಿಸಿದರೆಂದು ಆರೋಪಿಸಿ ವಿಡಿಯೊ ಮಾಡಿರುವ 12 ತರಗತಿಯ ವಿದ್ಯಾರ್ಥಿಯೊಬ್ಬ, ನಂತರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ನಡೆದಿದೆ.
ಆ ವಿಡಿಯೊದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಂತೆ ಸರಕಾರ ಹಾಗೂ ಪೊಲೀಸರಿಗೆ ಮನವಿ ಮಾಡಿರುವ ಆ ವಿದ್ಯಾರ್ಥಿ, “ನನ್ನಂತೆ ಇನ್ನೂ ಹಲವರು ಬಲಿಯಾಗಲಿದ್ದಾರೆ” ಎಂದು ಎಚ್ಚರಿಸಿದ್ದಾನೆ.
ಬುಧವಾರ ಸಂಜೆ ಭೋಪಾಲ್ ನಿಂದ ಸುಮಾರು 280 ಕಿಮೀ ದೂರವಿರುವ ಕೊಲಾರಸ್ ರೈಲ್ವೆ ನಿಲ್ದಾಣದ ಹಳಿಗಳ ಬಳಿಗೆ ತೆರಳಿರುವ ಬಂಟಿ ಧಾಕಡ್, ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಲೋಕೋಪೈಲಟ್ ಎಮರ್ಜೆನ್ಸಿ ಬ್ರೇಕ್ ಹಾಕಿದ್ದರೂ, ಆತನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ರೈಲಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ರೈಲ್ವೆ ನಿಲ್ದಾಣದಿಂದ 170 ಕಿಮೀ ದೂರವಿರುವ ಗ್ವಾಲಿಯರ್ ನ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ.
ತನಿಖೆಯ ಸಂದರ್ಭದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಬಂಟಿ ಚಿತ್ರೀಕರಿಸಿರುವ ವಿಡಿಯೊ ಪತ್ತೆಯಾಗಿದೆ. ಆ ವಿಡಿಯೊದಲ್ಲಿ, ಶಿಕ್ಷಕರೊಬ್ಬರು ಮದ್ಯ ಸೇವನೆ ಮಾಡುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿದ್ದು, ನನಗೆ ಬಿಯರ್ ಕುಡಿಯುವಂತೆ ಬಲವಂತಪಡಿಸಿದ್ದರು ಎಂದು ಆತ ದೂರಿದ್ದಾನೆ. ಅಲ್ಲದೆ, ಅವರು ತಮ್ಮ ನಿವಾಸದಲ್ಲಿ ಟ್ಯೂಸನ್ ತೆಗೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಒತ್ತಡ ಹೇರುತ್ತಿದ್ದರು. ಇದಕ್ಕೆ ನಿರಾಕರಿಸಿದರೆ ಕಳಪೆ ದರ್ಜೆಯನ್ನು ನೀಡಲಾಗುವುದು ಎಂದು ಬೆದರಿಸುತ್ತಿದ್ದರು ಎಂದೂ ವಿದ್ಯಾರ್ಥಿ ಆಪಾದಿಸಿದ್ದಾನೆ.
ಕೊಲಾರಸ್ ಪೊಲೀಸರು ಹಾಗೂ ಗ್ವಾಲಿಯರ್ ರೈಲ್ವೆ ಪೊಲೀಸರು ಈ ಕುರಿತು ತನಿಖೆ ಕೈಗೊಂಡಿದ್ದು, ಬಂಟಿಯ ಹೇಳಿಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ಪ್ರಯತ್ನಿಸಿದರಾದರೂ, ಆತ ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಹೀಗಾಗಿ, ವಿಡಿಯೊ ಸುತ್ತ ಅವರು ತನಿಖೆಯನ್ನು ಕೇಂದ್ರೀಕರಿಸಿದ್ದಾರೆ.