ಭೋಪಾಲ್ | ಪತ್ನಿಯನ್ನು ಕೊಂದ ಸಿಆರ್ಪಿಎಫ್ ಯೋಧ ಸ್ವಯಂ ಗುಂಡಿಕ್ಕಿಕೊಂಡು ಆತ್ಮಹತ್ಯೆ

ಸಾಂದರ್ಭಿಕ ಚಿತ್ರ | PC : PTI
ಭೋಪಾಲ್ : ಕೇಂದ್ರೀಯ ಮೀಸಲು ಪೋಲಿಸ್ ಪಡೆ (ಸಿಆರ್ಪಿಎಫ್)ಯ ಯೋಧನೋರ್ವ ಇಲ್ಲಿಯ ಮಿಸ್ರೋದ್ ಪ್ರದೇಶದಲ್ಲಿಯ ತನ್ನ ಬಾಡಿಗೆ ಫ್ಲ್ಯಾಟ್ನಲ್ಲಿ ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಲಿಸರು ಗುರುವಾರ ತಿಳಿಸಿದ್ದಾರೆ.
ಗ್ರೀನ್ ಪಾರ್ಕ್ ಕಾಲನಿಯಲ್ಲಿ ಗುರುವಾರ ನಸುಕಿನಲ್ಲಿ ಈ ಘಟನೆ ನಡೆದಿದೆ.
ಸಿಆರ್ಪಿಎಫ್ ಯೋಧ ರವಿಕಾಂತ ವರ್ಮಾ(35) ನಸುಕಿನ 1:30ರ ಸುಮಾರಿಗೆ ಪೋಲಿಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ತನ್ನ ಪತ್ನಿ ರೇಣು ವರ್ಮಾ(32)ಳನ್ನು ಗುಂಡು ಹಾರಿಸಿ ಕೊಂದಿದ್ದಾಗಿ ಮಾಹಿತಿ ನೀಡಿದ್ದ. ತಕ್ಷಣ ಮಿಸ್ರೋದ್ ಪೋಲಿಸ್ ಠಾಣೆಯ ತಂಡವು ಸ್ಥಳಕ್ಕೆ ಧಾವಿಸಿದ್ದು,ವರ್ಮಾ ಮತ್ತು ಆತನ ಪತ್ನಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಕಂಡು ಬಂದಿತ್ತು ಎಂದು ಅಧಿಕಾರಿಗಳು ತಿಳಿಸಿದರು.
ದಂಪತಿ ತಮ್ಮ ಆರು ವರ್ಷದ ಪುತ್ರ ಮತ್ತು ಎರಡೂವರೆ ವರ್ಷದ ಪುತ್ರಿ ಜೊತೆ ವಾಸವಾಗಿದ್ದರು.
ಪೋಲಿಸರು ಸ್ಥಳವನ್ನು ತಲುಪಿದಾಗ ಪತಿ-ಪತ್ನಿ ಶವಗಳು ಒಂದು ಕೋಣೆಯಲ್ಲಿ ಬಿದ್ದುಕೊಂಡಿದ್ದರೆ ಮಕ್ಕಳಿಬ್ಬರೂ ಇನ್ನೊಂದು ಕೋಣೆಯಲ್ಲಿ ಅಳುತ್ತಿದ್ದರು. ಮೃತದೇಹಗಳ ಬಳಿ ಸರ್ವಿಸ್ ರಿವಾಲ್ವರ್ ಪತ್ತೆಯಾಗಿದೆ.
ಪತಿ-ಪತ್ನಿ ಆಗಾಗ್ಗೆ ಜಗಳವಾಡುತ್ತಿದ್ದರು ಎಂದು ನೆರೆಕರೆಯವರು ಪೋಲಿಸರಿಗೆ ತಿಳಿಸಿದ್ದಾರೆ. ಆದರೆ ಈ ಮಾರಣಾಂತಿಕ ಘಟನೆಗೆ ಕಾರಣವೇನು ಎನ್ನುವುದು ಸ್ಪಷ್ಟವಾಗಿಲ್ಲ.
ಬಂಗ್ರಾಸಿಯಾ ಪ್ರದೇಶದಲ್ಲಿ ಸಿಆರ್ಪಿಎಫ್ ಶಿಬಿರವಿದ್ದರೆ ವರ್ಮಾ ತನ್ನ ಕುಟುಂಬದೊಂದಿಗೆ ಗ್ರಿನ್ ಪಾರ್ಕ್ ಕಾಲನಿಯಲ್ಲಿ ವಾಸವಿದ್ದ.
ಪೋಲಿಸರು ತನಿಖೆ ನಡೆಸುತ್ತಿದ್ದು, ಸಿಆರ್ಪಿಎಫ್ ಶಿಬಿರದಿಂದ ಸಹಕಾರವನ್ನು ಕೋರಲಾಗುವುದು ಎಂದು ಪೋಲಿಸ್ ಆಯುಕ್ತ ಹರಿನಾರಾಯಣಾಚಾರಿ ಮಿಶ್ರಾ ತಿಳಿಸಿದರು.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.