ಮಹಾಯುತಿ ಮೈತ್ರಿಕೂಟದಲ್ಲಿ ಮಹಾ ಸಂಘರ್ಷ: ಬಿಜೆಪಿ, ಎನ್ ಸಿಪಿ ವಿರುದ್ಧ ಶಿಂಧೆ ಬಣ ಗರಂ
ಮುಂಬೈ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ನೀರಸ ಪ್ರದರ್ಶನದ ಬಳಿಕ ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿನ ಒಳಜಗಳ ಇದೀಗ ಮತ್ತಷ್ಟು ತೀವ್ರಗೊಂಡಿದೆ.
ಲೋಕಸಭಾ ಚುನಾವಣೆಯಲ್ಲಿ ನೀರಸ ಪ್ರದರ್ಶನಕ್ಕೆ ಬಿಜೆಪಿ ಹಾಗೂ ಅಜಿತ್ ಪವಾರ್ ನೇತೃತ್ವದ ಎನ್ ಸಿಪಿ ನೇರ ಕಾರಣ ಎಂದು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಮುಖಂಡ ರಾಮದಾಸ್ ಕದಂ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಸ್ಥಾನ ಹಂಚಿಕೆಯಲ್ಲಿ ಮತ್ತು ಅಭ್ಯರ್ಥಿ ಆಯ್ಕೆಯಲ್ಲಿ ಬಿಜೆಪಿ ಮಧ್ಯಪ್ರವೇಶಿಸಿರುವುದು ಖಂಡನೀಯ ಎಂದು ಹೇಳಿರುವ ಅವರು, ಇದರಿಂದಾಗಿ ಶಿಂಧೆ ಬಣ ಪ್ರಮುಖ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು ಎಂದಿದ್ದಾರೆ.
"ಬಿಜೆಪಿ ಹಸ್ತಕ್ಷೇಪದಿಂದಾಗಿ ನಾವು ನಾಸಿಕ್, ಹಿಂಗೋಲಿ ಮತ್ತು ವಾಶಿಂ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಬೇಕಾಯಿತು. ಇಲ್ಲದಿದ್ದರೆ ಹೇಮಂತ್ ಗೋಡ್ಸೆ, ಹೇಮಂತ್ ಪಾಟೀಲ್ ಮತ್ತು ಭಾವನಾ ಗಾವ್ಳಿ ಸಂಸದರಾಗಿ ಪುನರಾಯ್ಕೆಯಾಗುತ್ತಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಾದರೂ ಬಿಜೆಪಿ ಈ ಪ್ರಮಾದ ಮಾಡದಿರಲಿ" ಎಂದು ಅವರು ಮಿತ್ರಪಕ್ಷದ ವಿರುದ್ಧ ಚಾಟಿ ಬೀಸಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ನ್ಯಾಯಬದ್ಧ ಪಾಲು ಪಡೆಯುವಂತೆ ಒತ್ತಡ ತರಲು ಮುಖ್ಯಮಂತ್ರಿ ಏಕನಾಥ್ ಶಿಂಧೆಯವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಚರ್ಚಿಸಬೇಕು ಎಂದೂ ಕದಂ ಆಗ್ರಹಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ನಮಗೆ ಕನಿಷ್ಠ 100 ಸ್ಥಾನಗಳನ್ನು ನೀಡಬೇಕು. ಈ ಪೈಕಿ ಖಚಿತವಾಗಿಯೂ 90ರಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಎನ್ ಸಿಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಎನ್ ಸಿಪಿ ನಾಯಕ ಮಹಾಯುತಿ ಕೂಟವನ್ನು ಸೇರಿದ್ದು, ಚುನಾವಣಾ ಫಲಿತಾಂಶದ ಮೇಲೆ ಋಣಾತ್ಮಕ ಪರಿಣಾಮ ಬೀರಿತು ಎಂದು ಟೀಕಿಸಿದ್ದಾರೆ. ಕದಂ ಹೇಳಿಕೆಯನ್ನು ಎನ್ ಸಿಪಿ ವಕ್ತಾರ ಅಮೋಲ್ ಮಿಟ್ಕರಿ ಖಂಡಿಸಿದ್ದಾರೆ.