ಬಿಹಾರ | 18 ವರ್ಷದ ಯುವಕನಿಗೆ 2 ಲಕ್ಷ ರೂ.ಗೆ ಸಿಕ್ಕಿತು ಐಪಿಎಸ್ ನೌಕರಿ ; ಹೀಗೊಂದು ಮಹಾ ವಂಚನೆ
PC : @theskindoctor13/ X
ಪಾಟ್ನಾ : ಮತ್ತೊಂದು ಉದ್ಯೋಗ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, 18 ವರ್ಷದ ಯುವಕನೊಬ್ಬನಿಗೆ ಐಪಿಎಸ್ ಅಧಿಕಾರಿಯಾಗಿಸುವ ಆಮಿಷ ಒಡ್ಡಿ, 2 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಇದರ ಬೆನ್ನಿಗೇ, ನಕಲಿ ಐಪಿಎಸ್ ಸಮವಸ್ತ್ರ ತೊಟ್ಟು, ಪಿಸ್ತೂಲು ಹಿಡಿದು ತಿರುಗುತ್ತಿದ್ದ ಯುವಕನು ಪೊಲೀಸರ ಅತಿಥಿಯಾಗಿದ್ದಾನೆ.
ಬಂಧಿತ ಯುವಕನನ್ನು ಮಿಥಿಲೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತ ಯಾವುದೇ ಯುಪಿಎಸ್ಸಿ ಪರೀಕ್ಷೆಗೂ ಹಾಜರಾಗಿಲ್ಲ. ಆದರೆ, ವಂಚಕನೊಬ್ಬ ತನ್ನನ್ನು ಐಪಿಎಸ್ ಅಧಿಕಾರಿಯಾಗಿಸುವುದಾಗಿ ಒಡ್ಡಿದ ಆಮಿಷಕ್ಕೆ ಬಲಿಯಾಗಿ 2 ಲಕ್ಷ ರೂ. ಕಳೆದುಕೊಂಡಿದ್ದಾನಲ್ಲದೆ, ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.
ಸದ್ಯ ವೈರಲ್ ಆಗಿರುವ ವಿಡಿಯೊದಲ್ಲಿ, ನಕಲಿ ಐಪಿಎಸ್ ಅಧಿಕಾರಿಯನ್ನು ಬೆಂಗಾವಲು ಪೊಲೀಸರು ಶಿಕಂದರ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿರುವುದನ್ನು ನೋಡಬಹುದಾಗಿದೆ. ಮಿಥಿಲೇಶ್ ಕುಮಾರ್ ತನ್ನ ಪಿಸ್ತೂಲನ್ನು ಒಪ್ಪಿಸುತ್ತಿದ್ದಂತೆಯೆ, ಪೊಲೀಸ್ ಅಧಿಕಾರಿಯೊಬ್ಬರು, “ಬನ್ನಿ ಸರ್, ಐಪಿಎಸ್ ಸರ್. ಶಿಕಂದರ ಪೊಲೀಸ್ ಠಾಣೆಗೆ” ಎಂದು ವ್ಯಂಗ್ಯವಾಗಿ ಹೇಳುತ್ತಿರುವುದನ್ನು ಕಾಣಬಹುದಾಗಿದೆ.
ಈ ವಿಡಿಯೊಗೆ ಒಂದು ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳು ಬಂದಿದ್ದು, ಅಸಂಖ್ಯಾತ ಪ್ರತಿಕ್ರಿಯೆಗಳನ್ನು ಗಳಿಸಿದೆ. ಈ ಪೈಕಿ ಓರ್ವ ಬಳಕೆದಾರರು, “18 ವರ್ಷದ ಯುವಕನೊಬ್ಬ 2 ಲಕ್ಷ ರೂ.ವನ್ನು ಹೊಂದಿಸಲು ಸಾಧ್ಯವಾಗಿದ್ದು ಹೇಗೆ?” ಎಂದು ಪ್ರಶ್ನಿಸಿದ್ದರೆ, “ನೈಜ ಅಪರಾಧಿಗಳನ್ನು ಸೆರೆ ಹಿಡಿಯುವ ಬದಲು ಮುಗ್ಧರನ್ನು ಅಪರಾಧ ಪ್ರಕರಣಗಳಲ್ಲಿ ಸಿಲುಕಿಸಿ, ಇಂಟರ್ ನೆಟ್ ನಲ್ಲಿ ಅಪ್ಲೋಡ್ ಮಾಡುವುದೇ ಭಾರತೀಯ ಪೊಲೀಸರ ಕೆಲಸವಾಗಿದೆ. ನಾಚಿಕೆಯಾಗಬೇಕು ನಿಮಗೆ” ಎಂದು ಮತ್ತೊಬ್ಬ ಬಳಕೆದಾರರು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಇನ್ನೊಬ್ಬ ಬಳಕೆದಾರರು, “ಮುಗ್ಧ ವ್ಯಕ್ತಿಗಳಿಗೆ ವಂಚಿಸುತ್ತಿರುವ ವಂಚಕರನ್ನು ಪತ್ತೆ ಹಚ್ಚಿ, ಅವರನ್ನು ಬಂಧಿಸುವತ್ತ ಪೊಲೀಸರು ಗಮನ ಹರಿಸಬೇಕಿದೆ” ಎಂದು ಸಲಹೆ ನೀಡಿದ್ದಾರೆ.