ಮಹಾತ್ಮಗಾಂಧಿ ಪುಣ್ಯತಿಥಿಯಲ್ಲಿ ಚಪ್ಪಾಳೆ ತಟ್ಟಿದ ಬಿಹಾರ ಸಿಎಂ ನಿತೀಶ್ ಕುಮಾರ್

PC: sreengrab/ x.com/patna_press
ಪಾಟ್ನಾ: ಬಿಹಾರ ರಾಜಧಾನಿಯಲ್ಲಿ ಗುರುವಾರ ಆಯೋಜಿಸಿದ್ದ ಮಹಾತ್ಮಗಾಂಧಿ ಪುಣ್ಯತಿಥಿ ಸಮಾರಂಭದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಚಪ್ಪಾಳೆ ತಟ್ಟಲು ಆರಂಭಿಸಿದ್ದು, ಇತರ ಮುಖಂಡರ ಮತ್ತು ಸರ್ಕಾರಿ ಅಧಿಕಾರಿಗಳ ಮುಜುಗರಕ್ಕೆ ಕಾರಣವಾಯಿತು.
ರಾಜ್ಯ ರಾಜಧಾನಿಯ ಗಾಂಧಿಮೈದಾನದಲ್ಲಿ ನಡೆದ ಮಹಾತ್ಮಗಾಂಧೀಜಿಯವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆಯಲ್ಲಿ ನಿತೀಶ್ ಚಪ್ಪಾಳೆ ತಟ್ಟುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇವರ ಜತೆ ವಿಧಾನಸಭೆ ಸ್ಪೀಕರ್ ನಂದಕಿಶೋರ್ ಯಾದವ್ ಹಾಗೂ ಸಚಿವ ವಿಜಯ್ ಕುಮಾರ್ ಮಿಶ್ರ ಕೂಡಾ ಹಾಜರಿದ್ದರು. ಮಹಾತ್ಮಾಗಾಂಧಿ ಪುಣ್ಯತಿಥಿ ಅಂಗವಾಗಿ ಅಪಾರ ಪ್ರೇಕ್ಷಕರ ಸಮ್ಮುಖದಲ್ಲಿ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಮುಖಂಡರು ಸರದಿಯಲ್ಲಿ ನಿಂತಿದ್ದಾಗ ಈ ಘಟನೆ ನಡೆದಿದೆ.
ಗಾಂಧೀಜಿಯವರ ಗೌರವಾರ್ಥವಾಗಿ ಪೊಲೀಸ್ ಸಿಬ್ಬಂದಿ ಸೈರನ್ ಮೊಳಗಿ ತಮ್ಮ ಶಸ್ತ್ರಾಸ್ತ್ರಗಳನ್ನು ಇಳಿಸಿದಾಗ ನಿತೀಶ್ ಚಪ್ಪಾಳೆ ತಟ್ಟಲು ಆರಂಭಿಸಿದರು. ಇದರಿಂದ ಸಂಪುಟ ಸಹೋದ್ಯೋಗಿ ಸಿನ್ಹಾ ಗೂ ಸ್ಪೀಕರ್ ಯಾದವ್ ಮುಜುಗರಕ್ಕೀಡಾದರು. ಇದನ್ನು ತಕ್ಷಣವೇ ಗಮನಿಸಿದ ಯಾದವ್ ಚಪ್ಪಾಳೆ ನಿಲ್ಲಿಸುವಂತೆ ಮುಖ್ಯಮಂತ್ರಿಗಳತ್ತ ಸನ್ನೆ ಮಾಡಿದರು. ಪ್ರಮಾದದ ಅರಿವಾದ ನಿತೀಶ್ ಚಪ್ಪಾಳೆ ನಿಲ್ಲಿಸಿದರು. ಆದರೆ ಆ ವೇಳೆಗಾಗಲೇ ಈ ಅನಿರೀಕ್ಷಿತ ಘಟನೆಯ ಬಗೆಗಿನ ಚಿತ್ರ ಹಾಗೂ ವಿಡಿಯೊಗಳನ್ನು ಸೆರೆಹಿಡಿಯಲಾಗಿತ್ತು.
ನಿತೀಶ್ ಇಂಥ ಅಪಹಾಸ್ಯಕ್ಕೆ ಈಡಾಗುತ್ತಿರುವುದು ಇದೇ ಮೊದಲಲ್ಲ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಎನ್ ಡಿಎ 4000 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿಕೆ ನೀಡಿದ್ದರು. ಜತೆಗೆ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕೈ ಎಳೆದಿದ್ದರು.