ಬಿಷ್ಣೋಯ್ ಗ್ಯಾಂಗ್ ಭಾರತೀಯ ಸರ್ಕಾರಿ ಏಜೆಂಟರೊಂದಿಗೆ ಸಂಪರ್ಕ ಹೊಂದಿದೆ: ಕೆನಡಾ ಪೊಲೀಸ್
ಲಾರೆನ್ಸ್ ಬಿಷ್ಣೋಯ್ (Photo: X)
ಹೊಸದಿಲ್ಲಿ : ಕೆನಡಾದ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಸೋಮವಾರ ಭಾರತ ಸರ್ಕಾರದ ಏಜೆಂಟರು ಅಪರಾಧಿಗಳನ್ನು ಬಳಸುತ್ತಾರೆ ಎಂದು ನಿರ್ದಿಷ್ಟವಾಗಿ ಬಿಷ್ಣೋಯ್ ಗ್ಯಾಂಗ್ ಅನ್ನು ಉಲ್ಲೇಖಿಸಿ ಹೇಳಿದೆ.
"ದಕ್ಷಿಣ ಏಷ್ಯಾದ ಖಾಲಿಸ್ತಾನಿಗಳನ್ನು ಗುರಿಯಾಗಿಸಲು ಕ್ರಿಮಿನಲ್ ಗಳನ್ನು ಗುಪ್ತಚರ ವಿಭಾಗದ ಅಧಿಕಾರಿಗಳು ಬಳಸುತ್ತಾರೆ" ಎಂದು ಕೆನಡಾ ಪೊಲೀಸರು ಆರೋಪಿಸಿದ್ದಾರೆ.
ಕೆನಡಾದ ಪ್ರಜೆ ಮತ್ತು ಖಾಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ನಿಜ್ಜಾರ್ ಹತ್ಯೆಯಲ್ಲಿ ದಿಲ್ಲಿಯ ಏಜೆಂಟ್ಗಳು ಭಾಗಿಯಾಗಿದ್ದಾರೆ ಎಂದು ಕಳೆದ ವರ್ಷ ಕೆನಡಾ ಆರೋಪಿಸಿದಾಗಿನಿಂದ ಉಲ್ಬಣಗೊಳ್ಳುತ್ತಿರುವ ರಾಜತಾಂತ್ರಿಕ ಸಮಸ್ಯೆಯ ನಡುವೆ ಆರ್ಸಿಎಂಪಿ ಕಮಿಷನರ್ ಮೈಕ್ ಡುಹೆನೆ ಮತ್ತು ಸಹಾಯಕ ಕಮಿಷನರ್ ಬ್ರಿಗಿಟ್ಟೆ ಗೌವಿನ್ ಅವರು ಈ ಆರೋಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಹಾಯಕ ಕಮಿಷನರ್ ಗೌವಿನ್, "ಭಾರತ ಸರ್ಕಾರ ದಕ್ಷಿಣ ಏಷ್ಯಾದ ಸಮುದಾಯವನ್ನು ಗುರಿಯಾಗಿಸಿಕೊಂಡಿದೆ. ನಿರ್ದಿಷ್ಟವಾಗಿ ಕೆನಡಾದಲ್ಲಿ ಖಾಲಿಸ್ತಾನಿಗಳೇ ಅವರ ಗುರಿ. ಅವರು ಸಂಘಟಿತರಾಗಿ ಈ ಅಪರಾಧಗಳಲ್ಲಿ ಭಾಗಿಯಾಗುತ್ತಾರೆ," ಎಂದರು.
ಭಾರತದ ಏಜೆಂಟರು ಕ್ರಿಮಿನಲ್ ಗಳೊಂದಿಗೆ, ವಿಶೇಷವಾಗಿ ಬಿಷ್ಣೋಯ್ ಗ್ಯಾಂಗ್ ನೊಂದಿಗೆ ಸಂಪರ್ಕ ಹೊಂದಿರುವುದು ಜಗಜ್ಜಾಹೀರಾಗಿದೆ ಎಂದು ಅವರು ನೇರ ಆರೋಪ ಮಾಡಿದ್ದಾರೆ.
"ಭಾರತ ಸರ್ಕಾರದ ಏಜೆಂಟರ" ಮೇಲೆ "ನರಹತ್ಯೆ, ಸುಲಿಗೆ, ಬೆದರಿಕೆ ಮತ್ತು ಬಲವಂತದ" ಆರೋಪವಿದೆಯೇ ಎಂದು ನಿರ್ದಿಷ್ಟವಾಗಿ ಕೇಳಿದಾಗ, ಅವರು ಇದೆ ಎಂದು ಪ್ರತಿಕ್ರಿಯಿಸಿದ್ದಾರೆ.