ಬಾಬಾ ಸಿದ್ದೀಕ್ ಅಥವಾ ಅವರ ಮಗ ಸಾಯಬೇಕೆಂದು ಬಿಷ್ಣೋಯಿ ಗ್ಯಾಂಗ್ ಬಯಸಿತ್ತು : ಮುಂಬೈ ಪೊಲೀಸರಿಗೆ ಶೂಟರ್ ಮಾಹಿತಿ
ಬಾಬಾ ಸಿದ್ದೀಕ್, ಝೀಶನ್ | PTI
ಮುಂಬೈ : ಒಂದೋ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ)ದ ನಾಯಕ ಬಾಬಾ ಸಿದ್ದೀಕ್ ಅಥವಾ ಅವರ ಮಗ ಝೀಶನ್ ಸಾಯಬೇಕೆಂದು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಬಯಸಿತ್ತು ಎಂದು ಬಾಬಾ ಸಿದ್ದೀಕ್ ಕೊಲೆ ಪ್ರಕರಣದ ಮುಖ್ಯ ಶೂಟರ್ ಶಿವಕುಮಾರ್ ಗೌತಮ್ ಮುಂಬೈ ಪೊಲೀಸರಿಗೆ ಹೇಳಿದ್ದಾನೆ ಎಂದು ‘ನ್ಯೂಸ್ 18’ ವರದಿ ಮಾಡಿದೆ.
ತಂದೆ ಮತ್ತು ಮಗನ ಪೈಕಿ ಯಾರು ಮೊದಲು ಸಿಗುತ್ತಾರೋ ಅವರನ್ನು ಕೊಲ್ಲುವ ಕೆಲಸವನ್ನು ಬಿಷ್ಣೋಯಿ ಗ್ಯಾಂಗ್ ನನಗೆ ವಹಿಸಿತ್ತು ಎಂಬುದಾಗಿ ಗೌತಮ್ ಪೊಲೀಸರಿಗೆ ಹೇಳಿದ್ದಾನೆ ಎನ್ನಲಾಗಿದೆ.
ಎನ್ಸಿಪಿ ನಾಯಕನನ್ನು ಕೊಲ್ಲುವ ಮೊದಲು ಮುಂಬೈಯಲ್ಲಿನ ಅವರ ಚಟುವಟಿಕೆಗಳು ಮತ್ತು ಓಡಾಟಗಳ ಬಗ್ಗೆ ತಾನು ಇತರ ಇಬ್ಬರು ಆರೋಪಿಗಳೊಂದಿಗೆ ವ್ಯಾಪಕ ಮಾಹಿತಿ ಸಂಗ್ರಹಿಸಿದ್ದೆ ಎನ್ನುವುದನ್ನೂ ಗೌತಮ್ ಬಹಿರಂಗಪಡಿಸಿದ್ದಾನೆ.
ಬಿಷ್ಣೋಯಿ ಗ್ಯಾಂಗ್ಗೆ ಸೇರಿದವರು ಎನ್ನಲಾದವರು ಅಕ್ಟೋಬರ್ 12ರಂದು ಸಿದ್ಕೀಕ್ರನ್ನು ಗುಂಡು ಹಾರಿಸಿ ಕೊಂದಿದ್ದರು. ನಗರದಲ್ಲಿ ನೆಲೆಸಿದ್ದ ಹಬ್ಬದ ವಾತಾವರಣದ ಹಿನ್ನೆಲೆಯಲ್ಲಿ ಭದ್ರತಾ ಲೋಪದ ಪ್ರಯೋಜನವನ್ನು ಪಡೆದ ದುಷ್ಕರ್ಮಿಗಳು ತಮ್ಮ ಯೋಜನೆಯನ್ನು ಕಾರ್ಯಗತಗೊಳಿಸಿದ್ದರು.
ಸಿದ್ದೀಕ್ ರತ್ತ ಗುಂಡು ಹಾರಿಸಿದ ಬಳಿಕ, ಗೌತಮ್ ತನ್ನ ಸ್ವರೂಪವನ್ನು ಬದಲಿಸಿಕೊಂಡು ಗುಂಪಿನೊಂದಿಗೆ ಬೆರೆತಿದ್ದನು. ಕೃತ್ಯದ ಬಳಿಕ, ಸ್ಥಳದಲ್ಲಿ ಗೊಂದಲದ ಪರಿಸ್ಥಿತಿ ಏರ್ಪಡುತ್ತಿರುವುದನ್ನು ತುಂಬ ಹೊತ್ತು ಅಲ್ಲೇ ಇದ್ದು ನೋಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯ ಬಳಿಕ, ಗೌತಮ್ ಆಟೊ ರಿಕ್ಷಾವೊಂದರಲ್ಲಿ ಕುರ್ಲಾ ರೈಲು ನಿಲ್ದಾಣ ತಲುಪಿದನು. ಅಲ್ಲಿಂದ ಸ್ಥಳೀಯ ರೈಲೊಂದರಲ್ಲಿ ಥಾಣೆಗೆ ಹೋದನು. ಬಳಿಕ, ಅವನು ಪುಣೆ ನಗರಕ್ಕೆ ಹೋಗುವ ರೈಲೊಂದನ್ನು ಏರಿದನು. ದಾರಿ ಮಧ್ಯೆ, ತನ್ನ ಚಲನವಲನಗಳ ಮೇಲೆ ಯಾರೂ ನಿಗಾ ಇಡಬಾರದು ಎನ್ನುವ ಕಾರಣಕ್ಕಾಗಿ ತನ್ನ ಮೊಬೈಲ್ ಫೋನನ್ನು ಬಿಸಾಡಿದನು ಎನ್ನಲಾಗಿದೆ.
ಸಿದ್ದೀಕ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವವರ ಸಂಖ್ಯೆ ಈಗ 23ಕ್ಕೇರಿದೆ.