ಸಂಬಿತ್ ಪಾತ್ರ ಮತ್ತೆ ಎಡವಟ್ಟು; ಚುನಾವಣಾ ಆಯೋಗಕ್ಕೆ ಬಿಜೆಡಿ ದೂರು
Photo:PTI
ಭುವನೇಶ್ವರ: "ಸಡಿಲ ಮಾತಿಗೆ ಪ್ರಾಯಶ್ಚಿತ್ತಾರ್ಥವಾಗಿ" ಮೂರು ದಿನಗಳ ಉಪವಾಸ ಮತ್ತು ಕ್ಷಮೆಯಾಚನೆ ಮಾಡಿದರೂ ಬಿಜೆಪಿಯ ಪುರಿ ಅಭ್ಯರ್ಥಿ ಸಂಬಿತ್ ಪಾತ್ರ ಅವರಿಗೆ ತೊಂದರೆ ತಪ್ಪಿಲ್ಲ. ಬಿಜೆಪಿಯ ಕಮಲದ ಜತೆಗೆ ಪುರಿ ಜಗನ್ನಾಥನ ಫೋಟೊ ಇರುವ ಜಾಹೀರಾತನ್ನು ಪತ್ರಿಕೆಯಲ್ಲಿ ಪ್ರಕಟಿಸಿರುವ ಸಂಬಿತ್ ಪಾತ್ರ ವಿರುದ್ಧ ಬಿಜು ಜನತಾದಳ ಚುನಾವಣಾ ಆಯೋಗಕ್ಕೆ ಬುಧವಾರ ದೂರು ನೀಡಿದೆ.
ಪುರಿ ಜಗನ್ನಾಥ ಮೋದಿಯ ಭಕ್ತ ಎಂದು ಸೋಮವಾರ ಹೇಳಿಕೆ ನೀಡುವ ಮೂಲಕ ಸಂಬಿತ್ ಪಾತ್ರ ವಿವಾದಕ್ಕೆ ಸಿಲುಕಿಕೊಂಡಿದ್ದರು. ಆದರೆ ಆ ಬಳಿಕ ʼಬಾಯ್ತಪ್ಪಿನಿಂದʼ ಇಂಥ ಹೇಳಿಕೆ ನೀಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದರು.
ಸಂಬಿತ್ ಪಾತ್ರ ನೀಡಿರುವ ಪೂರ್ಣ ಪುಟದ ಜಾಹೀರಾತು, ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದೆ ಎಂದು ಬಿಜೆಡಿ ರಾಜ್ಯಸಭಾ ಸದಸ್ಯ ಸುಲಾಟಾ ದೇವ್ ಹೇಳಿದ್ದಾರೆ. "ಅವರು ದೇಗುಲ ಮತ್ತು ಧರ್ಮವನ್ನು ರಾಜಕೀಯಕ್ಕೆ ಎಳೆದು ತಂದಿದ್ದಾರೆ" ಎಂದು ಆಕ್ಷೇಪಿಸಿದ್ದಾರೆ.
ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಈ ಕುರಿತು ದೂರಿನ ಪ್ರತಿಯನ್ನು ಇ-ಮೇಲ್ ಮಾಡಿರುವ ಬಿಜೆಡಿ, ಪಾತ್ರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಅವರ ಜಾಹೀರಾತು ಹಾಗೂ ಮೋದಿಯ ಪುರಿ ರೋಡ್ ಶೋ ವೆಚ್ಚ ಸೇರಿದಂತೆ ಅವರ ಚುನಾವಣಾ ವೆಚ್ಚದ ಸಮಗ್ರ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.