ಬಿಜೆಪಿಯಿಂದ ಇಂದು ಒಡಿಶಾ ನೂತನ ಸಿಎಂ ಘೋಷಣೆ ನಿರೀಕ್ಷೆ
PC: PTI
ಹೊಸದಿಲ್ಲಿ: ಒಡಿಶಾ ವಿಧಾನಸಭೆಗೆ ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ ಶಾಸಕರ ಸಭೆ ಮಂಗಳವಾರ ಕೇಂದ್ರ ಸಚಿವರಾದ ರಾಜ್ ನಾಥ್ ಸಿಂಗ್ ಮತ್ತು ಭೂಪೇಂದ್ರ ಸಿಂಗ್ ಯಾದವ್ ಉಪಸ್ಥಿತಿಯಲ್ಲಿ ನಡೆಯಲಿದ್ದು, ರಾಜ್ಯದ ನೂತನ ಮುಖ್ಯಮಂತ್ರಿಯನ್ನು ಈ ಸಭೆಯಲ್ಲಿ ಘೋಷಿಸುವ ನಿರೀಕ್ಷೆ ಇದೆ. 147 ಸದಸ್ಯಬಲದ ವಿಧಾನಸಭೆಯಲ್ಲಿ ಬಿಜೆಪಿ 78 ಸ್ಥಾನಗಳನ್ನು ಗೆದ್ದಿದ್ದು, ರಾಜ್ಯದಲ್ಲಿ ಸರ್ಕಾರ ರಚನೆಗೆ ಸಜ್ಜಾಗಿದೆ.
ಬೃಜ್ ರಾಜ್ ನಗರ ಶಾಸಕ ಸುರೇಶ್ ಪೂಜಾರಿ, ರಾಜ್ಯ ಬಿಜೆಪಿ ಅಧ್ಯಕ್ಷ ಮನಮೋಹನ ಸಮಾಲ್ ಮತ್ತು ಶಾಸಕರಾದ ಮೋಹನ್ ಮಾಝಿ ಹಾಗೂ ಮುಕೇಶ್ ಮಹಲಿಂಗ್ ಅವರು ಸಿಎಂ ಹುದ್ದೆಯ ರೇಸ್ ನ ಮುಂಚೂಣಿಯಲ್ಲಿದ್ದಾರೆ. ಆದರೆ ಸಿಎಂ ಗಾದಿಗೆ ಅಚ್ಚರಿಯ ಆಯ್ಕೆಯನ್ನು ತಳ್ಳಿಹಾಕುವಂತಿಲ್ಲ.
ಮೃದುಸ್ವಭಾವದ, ವಿವಾದಾತೀತ ಮುಖಂಡ ಎನಿಸಿದ ಪೂಜಾರಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ರಾಜ್ಯ ಬಿಜೆಪಿಯ ಮಾಜಿ ಅಧ್ಯಕ್ಷ ಮತ್ತು ಮಾಜಿ ಸಂಸದರೂ ಆಗಿರುವ ಅವರು ತ್ರಿಪುರಾ ಮತ್ತು ಪಶ್ಚಿಮ ಬಂಗಾಳದಲ್ಲಿ ಪಕ್ಷದ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಬುಧವಾರ ನಡೆಯುವ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಅವರ ಕಟೌಟ್ ಗಳು ಎಲ್ಲೆಡೆ ರಾರಾಜಿಸುತ್ತಿವೆ. ಹಲವು ಮಂದಿ ಕೇಂದ್ರ ಸಚಿವರು ಮತ್ತು ಎನ್ ಡಿಎ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು, ನಿರ್ಗಮಿತ ಸಿಎಂ ನವೀನ್ ಪಟ್ನಾಯಕ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಭುವನೇಶ್ವರದ ಜನತಾ ಮೈದಾನದಲ್ಲಿ ನಡೆಯುವ ಸಭೆಯಲ್ಲಿ ಸಾರ್ವಜನಿಕರೂ ಭಾಗವಹಿಸುವಂತೆ ಬಿಜೆಪಿ ಮುಖಂಡರು ಕರೆ ನೀಡಿದ್ದಾರೆ. ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರದ ಆರಂಭದ ಸಂಕೇತವಾಗಿ ಮನೆಗಳಲ್ಲಿ ಅವಳಿ ದೀಪಗಳನ್ನು ಬೆಳಗುವಂತೆ ಕೋರಿದ್ದಾರೆ.
ನಿಯೋಜಿತ ಸಿಎಂ ಪ್ರಮಾಣವಚನಕ್ಕೆ ಮುನ್ನ ಪುರಿ ಜಗನ್ನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿ ಅಧಿಕಾರ ವಹಿಸಿಕೊಂಡ ತಕ್ಷಣವೇ ದೇಗುಲದ ಎಲ್ಲ ನಾಲ್ಕು ದ್ವಾರಗಳನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ ಎಂದು ತಿಳಿದು ಬಂದಿದೆ. ಇದು ಬಿಜೆಪಿಯ ಚುನಾವಣಾ ಆಶ್ವಾಸನೆಯೂ ಆಗಿತ್ತು. ಕೋವಿಡ್ ಸಾಂಕ್ರಾಮಿಕದ ಬಳಿಕ ದೇಗುಲ ಅಧಿಕಾರಿಗಳು ಒಂದನೇ ದ್ವಾರದ ಮೂಲಕ ಪ್ರವೇಶವನ್ನು ನಿರ್ಬಂಧಿಸಿದ್ದರು.