2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಎಐಎಡಿಎಂಕೆ ಮೈತ್ರಿ: ಅಮಿತ್ ಶಾ ಘೋಷಣೆ

Photo Credit: ETB Sivapriyan
ಚೆನ್ನೈ: ಎಐಎಡಿಎಂಕೆ ಮತ್ತು ಬಿಜೆಪಿ ಪಕ್ಷಗಳು 2026 ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಲಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಘೋಷಣೆ ಮಾಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಅಣ್ಣಾಮಲೈ ಅವರನ್ನು ಬದಲಿಸಿ, ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೈನಾರ್ ನಾಗೇಂದ್ರನ್ ಅವರನ್ನು ನೇಮಕ ಮಾಡಿದ ದಿನವೇ ಈ ಘೋಷಣೆ ಮಾಡಲಾಗಿದೆ. ನೈನಾರ್ ನಾಗೇಂದ್ರನ್ ಅವರ ಹೆಸರನ್ನು ಅಣ್ಣಾಮಲೈ ಅವರೇ ಪ್ರಸ್ತಾಪಿಸಿದ್ದರು ಎಂದು ತಿಳಿದು ಬಂದಿದೆ.
1998 ರಿಂದ ಎಐಎಡಿಎಂಕೆ ಯು ಎನ್ ಡಿ ಎ ಯ ಭಾಗವಾಗಿದೆ. ಪ್ರಧಾನಿ ಮೋದಿ ಮತ್ತು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಈ ಹಿಂದೆ ಒಟ್ಟಾಗಿ ಕೆಲಸ ಮಾಡಿದ್ದಾರೆ ಎಂದು ಶಾ ಗಮನಸೆಳೆದರು. ಎನ್ ಡಿ ಎ ಮೈತ್ರಿಕೂಟವು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುತ್ತದೆ ಎಂದು ಪ್ರತಿಪಾದಿಸಿದ ಅವರು, “ನಮ್ಮ ಮೈತ್ರಿಕೂಟ ಹೆಚ್ಚು ಬಲಿಷ್ಠವಾಗಿದೆ. ತಮಿಳುನಾಡಿನಲ್ಲಿ ಎನ್ ಡಿ ಎ ಸರ್ಕಾರ ರಚನೆಯಾಗುತ್ತದೆ ಎಂದು ನನಗೆ ಸಂಪೂರ್ಣ ವಿಶ್ವಾಸವಿದೆ”, ಎಂದು ಹೇಳಿದ್ದಾರೆ.
2014 ರಲ್ಲಿ ಎನ್ ಡಿ ಎ ಮೈತ್ರಿಕೂಟ 37 ಲೋಕಸಭಾ ಸ್ಥಾನಗಳನ್ನು ಗೆದ್ದಿದ್ದನ್ನು ಉಲ್ಲೇಖಿಸಿದ ಶಾ, ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟ 30 ಲೋಕಸಭಾ ಸ್ಥಾನಗಳನ್ನು ಗಳಿಸಿತ್ತು ಎಂದು ಹೇಳಿದರು.
ಅಮಿತ್ ಶಾ ಘೋಷಣೆ ಮಾಡುವ ವೇಳೆ, ಅವರೊಂದಿಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಮತ್ತು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಇದ್ದರು.