ಬಿಜೆಪಿಯ ಪ್ರಮಾದ: ಇಂಡಿಯಾ ಮೈತ್ರಿಕೂಟದ ಭವಿಷ್ಯದ ಬಗ್ಗೆ ರಾಜನಾಥ್ ಸಿಂಗ್ ಹೇಳಿದ್ದೇನು?
ನೀಮಚ್, ಮಧ್ಯಪ್ರದೇಶ: ಭಾರತೀಯ ಜನತಾ ಪಕ್ಷ 2004ರ ಚುನಾವಣೆಯಲ್ಲಿ 'ಇಂಡಿಯಾ ಶೈನಿಂಗ್' ಎಂಬ ಪದಪುಂಜವನ್ನು ಪೋಣಿಸುವ ಮೂಲಕ ಪ್ರಮಾದ ಎಸಗಿತು ಹಾಗೂ ಚುನಾವಣೆಯಲ್ಲಿ ಸೋಲು ಅನುಭವಿಸಿತು. ಇದೇ ಸ್ಥಿತಿ ಇಂಡಿಯಾ ಮೈತ್ರಿಕೂಟಕ್ಕೆ ಕೂಡ 2024ರ ಚುನಾವಣೆಯಲ್ಲಿ ಆಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
ನೀಮಚ್ ನಲ್ಲಿ ಬಿಜೆಪಿಯ ಜನ ಆಶೀರ್ವಾದ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, "ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮ ಕುರಿತ ಹೇಳಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಮಿತ್ರಪಕ್ಷ ಡಿಎಂಕೆ ಜತೆಗಿನ ಸಂಬಂಧವನ್ನು ಕಡಿದುಕೊಳ್ಳಬೇಕು ಅಥವಾ ರಾಷ್ಟ್ರದ ಜನತೆಯ ಕ್ಷಮೆ ಯಾಚಿಸಬೇಕು" ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, "ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದಿದೆ. ಆದರೆ ರಾಹುಲ್ಯಾನ ಉಡಾವಣೆಯೂ ಆಗುವುದಿಲ್ಲ ಅಥವಾ ಲ್ಯಾಂಡ್ ಆಗುವುದೂ ಇಲ್ಲ" ಎಂದು ಛೇಡಿಸಿದರು.
ಇಂಡಿಯಾ ಮೈತ್ರಿಕೂಟದ ಹೆಸರಿನಲ್ಲಿ 28 ಪಕ್ಷಗಳು ಜತೆ ಸೇರಿದರೆ, ಬಿಜೆಪಿಯ ವರ್ಚಸ್ಸಿನಿಂದಾಗಿ 38 ಪಕ್ಷಗಳು ಎನ್ಡಿಎ ಕೂಟಕ್ಕೆ ಬಂದಿವೆ. ನೀವು ಅಪೇಕ್ಷಿಸುವುದು 'ಇಂಡಿಯಾ' ವನ್ನೋ ಅಥವಾ 'ಭಾರತ'ವನ್ನೋ ಎಂದು ಸಭಿಕರನ್ನು ಪ್ರಶ್ನಿಸಿದರು.
"ಅಟಲ್ ಬಿಹಾರಿ ಪ್ರಧಾನಿಯಾಗಿದ್ದ ಅವಧಿಯಲ್ಲಿ ನಾವು 'ಇಂಡಿಯಾ ಶೈನಿಂಗ್' ಎಂಬ ಘೋಷವಾಕ್ಯದೊಂದಿಗೆ ಚುನಾವಣೆ ಎದುರಿಸಿ ತಪ್ಪು ಮಾಡಿದೆವು. ಸೋಲು ಅನುಭವಿಸಿದೆವು. ನಮ್ಮ ತಪ್ಪಿನ ಅರಿವು ನಮಗಾಗಿದೆ. ಇಂಡಿಯಾ ಕೂಟದ ಸ್ಥಿತಿಯೂ ಅದೇ ಆಗಲಿದೆ. ಅದು 2024ರ ಚುನಾವಣೆಯಲ್ಲಿ ಪತನವಾಗಲಿದೆ ಎಂದು ಭವಿಷ್ಯ ನುಡಿದರು.