ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿ ಸೈಯದ್ ಮುಷ್ತಾಕ್ ಬುಖಾರಿ ನಿಧನ
ಸೈಯದ್ ಮುಷ್ತಾಕ್ ಬುಖಾರಿ (Photo: Facebook)
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೀರ್ ಪಂಜಲ್ ಪ್ರಾಂತ್ಯದ ಸುರಾನ್ ಕೋಟೆ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸೈಯದ್ ಮುಷ್ತಾಕ್ ಬುಖಾರಿ ಇಂದು ನಿಧನರಾಗಿದ್ದಾರೆ. ಅವರಿಗೆ 75 ವರ್ಷ ವಯಸ್ಸಾಗಿತ್ತು.
ಸೈಯದ್ ಮುಷ್ತಾಕ್ ಬುಖಾರಿ ಇಂದು ಬೆಳಗ್ಗೆ 7 ಗಂಟೆ ವೇಳೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಅವರು ತಮ್ಮ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ನ ಹಿರಿಯ ನಾಯಕ ಹಾಗೂ ಎರಡು ಬಾರಿಯ ಶಾಸಕರಾಗಿದ್ದ ಸೈಯದ್ ಮುಷ್ತಾಕ್ ಬುಖಾರಿ, ಪಹರಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ನೀಡುವ ಕುರಿತು ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಫಾರೂಖ್ ಅಬ್ದುಲ್ಲಾರೊಂದಿಗಿನ ಭಿನ್ನಾಭಿಪ್ರಾಯದಿಂದ ನಾಲ್ಕು ದಶಕಗಳ ತಮ್ಮ ನ್ಯಾಷನಲ್ ಕಾನ್ಫರೆನ್ಸ್ ಒಡನಾಟವನ್ನು ಕಡಿದುಕೊಂಡಿದ್ದರು. ನಂತರ, ಕೇಂದ್ರ ಸರಕಾರವು ಪಹರಿ ಸಮುದಾಯಕ್ಕೆ ಪರಿಶಿಷ್ಟ ಪಂಗಡ ಸ್ಥಾನಮಾನ ಮಂಜೂರು ಮಾಡಿದ ನಂತರ ಫೆಬ್ರವರಿ ತಿಂಗಳಲ್ಲಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದರು. ಪಹರಿ ಮುಸ್ಲಿಮರಲ್ಲಿ ಖ್ಯಾತ ನಾಯಕರಾಗಿದ್ದ ಸೈಯದ್ ಮುಷ್ತಾಕ್ ಬುಖಾರಿ ಅವರನ್ನು ಪೀರ್ ಸಾಹಬ್ ಎಂದು ಕರೆಯಲಾಗುತ್ತಿತ್ತು.
ಸೈಯದ್ ಮುಷ್ತಾಕ್ ಬುಖಾರಿ ನಿಧನಕ್ಕೆ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕದ ಅಧ್ಯಕ್ಷ ರವೀಂದರ್ ರೈನಾ ಸಂತಾಪ ವ್ಯಕ್ತಪಡಿಸಿದ್ದಾರೆ.