ವಾರಗಳ ಹಿಂದೆ ಕಳವಾಗಿದ್ದ ಜೆ.ಪಿ.ನಡ್ಡಾ ಪತ್ನಿಯ ಕಾರು ವಾರಣಾಸಿಯಲ್ಲಿ ಪತ್ತೆ
Photo credit: aajtak.in
ಹೊಸದಿಲ್ಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರ ಪತ್ನಿ ಮಲ್ಲಿಕಾರ ಕಳವಾದ ಕಾರಿಗಾಗಿ ನಡೆದ ಪೊಲೀಸರ ಶೋಧ ಕಾರ್ಯವು ಉತ್ತರ ಪ್ರದೇಶದ ಮೂರು ನಗರಗಳಾದ ಲಖೀಂಪುರ್ ಖೇರಿಯಿಂದ ಸೀತಾಪುರ್ ಹಾಗೂ ಕೊನೆಗೆ ವಾರಣಾಸಿಯನ್ನು ತಲುಪಿದೆ. ಅಷ್ಟು ಹೊತ್ತಿಗೆ ಮಲ್ಲಿಕಾರ ಬಿಳಿ ಬಣ್ಣದ ಫಾರ್ಚುನರ್ ಕಾರು ಹಲವಾರು ಜನರ ಕೈಬದಲಾಯಿಸಿದ್ದು, ಉತ್ತರ ಪ್ರದೇಶ, ದಿಲ್ಲಿ ಹಾಗೂ ಫರೀದಾಬಾದ್ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ವಾರಣಾಸಿಯಲ್ಲಿ ಪತ್ತೆಯಾಗಿದೆ.
ಈ ಕುರಿತು ಮಾರ್ಚ್ 19ರಂದು ಗೋವಿಂದ್ ಪುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ನಡ್ಡಾರ ಚಾಲಕ ಜೋಗಿಂದರ್ ಸಿಂಗ್, ನಾನು ಊಟಕ್ಕೆ ಹೊರಡುವ ಮುನ್ನ ಗಿರಿನಗರದ ಸೇವಾ ಕೇಂದ್ರವೊಂದರಲ್ಲಿ ರಿಪೇರಿಗಾಗಿ ಬಿಟ್ಟಿದ್ದ ಕಾರು ಕಳವಾಗಿದೆ ಎಂದು ಆರೋಪಿಸಿದ್ದರು.
ಮೊದಲಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೊಲೀಸರಿಗೆ ಸುಳಿವೊಂದು ದೊರೆತಿದ್ದು, ಹಿಮಾಚಲ ಪ್ರದೇಶ ನೋಂದಣಿ ಸಂಖ್ಯೆಯ ಫಲಕವನ್ನು ಹೊಂದಿದ್ದ ಆ ಕಾರು ಗುರ್ಗಾಂವ್ ನತ್ತ ತೆರಳಿರುವುದು ತಿಳಿದು ಬಂದಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಶಾನ್ಯ ಜಿಲ್ಲೆಯ ವಾಹನ ಕಳವು ನಿಗ್ರಹ ದಳದ ವಿಶೇಷ ತಂಡವೊಂದನ್ನು ತನಿಖೆಗಾಗಿ ರಚಿಸಿದ್ದು, ತನಿಖೆಯ ಸಂದರ್ಭದಲ್ಲಿ ಹಲವಾರು ಸಿಸಿಟಿವಿ ಕ್ಯಾಮೆರಾಗಳನ್ನು ವಿಶ್ಲೇಷಿಸಲಾಗಿದೆ. ಅದರ ಜಾಡನ್ನು ಆಧರಿಸಿ ತಂಡವು ಹರ್ಯಾಣದ ಫರೀದಾಬಾದ್ ನಲ್ಲಿರುವ ಬುಡ್ಕಲ್ ಗೆ ತೆರಳಿದೆ. ಅಲ್ಲಿ ಈ ಪ್ರಕರಣದಲ್ಲಿ ವಾಹನ ಕಳ್ಳತನ ಪ್ರಕರಣದ ಆರೋಪಿಗಳಾದ ಶಾಹಿದ್ ಹಾಗೂ ಶಿವಾಂಶ್ ತ್ರಿಪಾಠಿ ಹಾಗೂ ಅವರ ಗುಂಪು ಭಾಗಿಯಾಗಿರುವ ಸಾಧ್ಯತೆ ಇದೆ ಎಂಬ ಸುಳಿವು ದೊರೆತಿದೆ.
ಗೌಪ್ಯ ಮಾಹಿತಿದಾರ ನೀಡಿದ ಸುಳಿವನ್ನು ಆಧರಿಸಿ ಮಾರ್ಚ್ 22ರಂದು ಪೊಲೀಸ್ ತಂಡಕ್ಕೆ ಪ್ರಕರಣದಲ್ಲಿ ಪ್ರಪ್ರಥಮ ಮಹತ್ವದ ತಿರುವು ದೊರೆತಿದ್ದು, ಪಟಿಯಾಲ ಹೌಸ್ ಕೋರ್ಟ್ ಪ್ರದೇಶದಲ್ಲಿ ತ್ರಿಪಾಠಿಯನ್ನು ಬಂಧಿಸಿದೆ.
ಈ ಕುರಿತು ಮಾಹಿತಿ ನೀಡಿದ ಈಶಾನ್ಯ ಉಪ ಪೊಲೀಸ್ ಆಯುಕ್ತ ರಾಜೇಶ್ ಡಿಯೊ, “ಗಿರಿನಗರದಿಂದ ಫಾರ್ಚುನರ್ ಕಾರಿನ ಕಳವನ್ನು ನಾನು ನನ್ನ ಸಹಚರರಾದ ಬುಡ್ಕಲ್ ನಿವಾಸಿ ಶಾಹಿದ್, ಆತನ ಅಳಿಯ, ಚಂದನ್ ಹೋಲ ನಿವಾಸಿ ಫಾರೂಖ್ ಹಾಗೂ ಶಾಹ್ ಕುಲ್ ಎಂಬ ವ್ಯಕ್ತಿ ಸೇರಿಕೊಂಡು ಮಾಡಿದೆವು ಎಂದು ತ್ರಿಪಾಠಿ ವಿಚಾರಣೆಯ ಸಂದರ್ಭದಲ್ಲಿ ಬಹಿರಂಗಗೊಳಿಸಿದ್ದಾನೆ. ಅವರು ನೀಡಿದ ಸುಳಿವನ್ನು ಆಧರಿಸಿ ಅಪರಾಧ ಕೃತ್ಯ ಎಸಗುವ ಸಂದರ್ಭದಲ್ಲಿ ಅವರು ಬಳಸಿದ್ದ ಕ್ರೆಟಾ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ. ಈ ಕಾರೂ ಕೂಡಾ ಎಕ್ಸ್ ಪ್ರೆಸ್ ವೇ ಗೌತಮ್ ಬುದ್ಧ್ ನಗರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದ ಕಳವಾದ ಕಾರಿರುವಂತಿದೆ” ಎಂದು ಹೇಳಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಆರೋಪಿಗಳು ಕಾರನ್ನು ಕಳವು ಮಾಡಿದ ನಂತರ, ಅದನ್ನು ಫರೀದಾಬಾದ್ ನಲ್ಲಿರುವ ಫಾರೂಖ್ ನ ಫಾರ್ಮ್ ಹೌಸ್ ಗೆ ಸ್ಥಳಾಂತರಿಸಲಾಯಿತು ಎಂದು ಬಾಯಿ ಬಿಟ್ಟರು ಎಂದು ಪೊಲೀಸರು ಹೇಳಿದ್ದಾರೆ.
“ಉತ್ತರ ಪ್ರದೇಶದ ಮೊರಾದಾಬಾದ್, ಸೀತಾಪುರ್, ಹಥ್ರಾಸ್, ಮೈನ್ ಪುರಿ ಇತ್ಯಾದಿಗಳಂಥ ವಿವಿಧ ನಗರಗಳಿಂದ ಕದ್ದ ಐಷಾರಾಮಿ ಕಾರುಗಳನ್ನು ಮಾರಾಟ ಮಾಡುವ ವ್ಯವಹಾರ ಮಾಡುತ್ತಿರುವ ಲಖೀಂಪುರ್ ಕೇರಿಯ ಸಲೀಮ್ ಎಂದು ಗುರುತಿಸಲಾಗಿರುವ ವ್ಯಕ್ತಿಗೆ ನಾನು ಹಾಗೂ ಶಾಹಿದ್ ಒಟ್ಟುಗೂಡಿ ಕಳವು ಮಾಡಿದ್ದ ಫಾರ್ಚುನರ್ ಕಾರನ್ನು ಮಾರಾಟ ಮಾಡಿದ್ದೆವು ಎಂದು ಬಹಿರಂಗ ಪಡಿಸಿದ್ದಾರೆ” ಎಂದೂ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತ್ರಿಪಾಠಿ ನೀಡಿದ ಸುಳಿವನ್ನು ಆಧರಿಸಿ ಲಖೀಂಪುರ್ ಕೇರಿಯ ಮೇಲೆ ದಾಳಿ ನಡೆಸಿ, ಸಹ ಆರೋಪಿ ಸಲೀಮ್ ನನ್ನು ಪೊಲೀಸರು ವಶಕ್ಕೆ ಪಡೆದರು. ವಿಚಾರಣೆಯ ಸಂದರ್ಭದಲ್ಲಿ ಸೀತಾಪುರ್ ನಿವಾಸಿಯಾದ ಮುಹಮ್ಮದ್ ರಾಯೀಸ್ ಅಲಿಯಾಸ್ ಪಪ್ಪು ಎಂಬ ವ್ಯಕ್ತಿಗೆ ಫಾರ್ಚುನರ್ ಕಾರನ್ನು ಮಾರಾಟ ಮಾಡಿದ್ದೇನೆ ಎಂದು ಸಲೀಮ್ ತಪ್ಪೊಪ್ಪಿಕೊಂಡ. ನಂತರ ಆತನನ್ನೂ ಪೊಲೀಸರು ಬಂಧಿಸಿದರು.
ಇಷ್ಟಕ್ಕೆ ಪೊಲೀಸ್ ತಂಡದ ಶೋಧವು ಅಂತ್ಯಗೊಳ್ಳಲಿಲ್ಲ. ರಾಯೀಸ್ ಕೂಡಾ ಆ ಕಾರನ್ನು ಅಮ್ರೋಹಾದ ಫುರ್ಕನ್ ಎಂಬ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ ಎಂಬ ಸಂಗತಿ ಪೊಲೀಸ್ ಸಿಬ್ಬಂದಿಗಳಿಗೆ ತಿಳಿದು ಬಂದಿತು.
ವಾರಣಾಸಿಯಲ್ಲಿನ ಬೆನಿಯ ಬಾಗ್ ನಲ್ಲಿ ಆ ಕಾರನ್ನು ಪಾರ್ಕಿಂಗ್ ಮಾಡಲಾಗಿದೆ ಎಂದು ರಾಯೀಸ್ ಪೊಲೀಸರಿಗೆ ಮಾಹಿತಿ ನೀಡಿದ. ಕೊನೆಯದಾಗಿ ಎಪ್ರಿಲ್ 4ರಂದು ಆ ಕಾರನ್ನು ಅಲ್ಲಿಂದ ವಶಪಡಿಸಿಕೊಳ್ಳಲಾಯಿತು. ಒಟ್ಟಾರೆಯಾಗಿ ಈ ಪ್ರಕರಣದಲ್ಲಿ ಐದು ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.