ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಬಹಿಷ್ಕರಿಸಿದ ಪತ್ರಕರ್ತರಿಂದ ತೀಕ್ಷ್ಣ ಪ್ರತಿಕ್ರಿಯೆ
ಯಾರ್ಯಾರು ಏನು ಹೇಳಿದರು?
ಹೊಸದಿಲ್ಲಿ: ವಿಪಕ್ಷ ಇಂಡಿಯಾ ಮೈತ್ರಿಕೂಟವು ಆಡಳಿತ ಬಿಜೆಪಿ ಪರ ಎಂದು ಗುರುತಿಸಿ 14 ನ್ಯೂಸ್ ಟಿವಿ ನಿರೂಪಕರನ್ನು ಬಹಿಷ್ಕರಿಸಿದ ಕ್ರಮವನ್ನು ಬಿಜೆಪಿ ಕಟುವಾಗಿ ಟೀಕಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆಗೊಳಿಸಿದ ಬಿಜೆಪಿ ರಾಷ್ಟ್ರೀಯ ಮಾಧ್ಯಮ ಘಟಕದ ಮುಖ್ಯಸ್ಥ ಅನಿಲ್ ಬಲೂನಿ, “ಕೆಲ ಪತ್ರಕರ್ತರನ್ನು ಬಹಿಷ್ಕರಿಸಲು ಮತ್ತು ಅವರನ್ನು ಬೆದರಿಸಲು ಘಮಂಡಿಯಾ (ಅಹಂಕಾರಿ) ಮೈತ್ರ ಕೂಟ ನಿರ್ಧರಿಸಿರುವುದು ಖಂಡನಾರ್ಹ. ಇಂತಹ ನಿರ್ಧಾರವನ್ನು ಕೈಗೊಳ್ಳುವ ಮೂಲಕ ಈ ಘಮಂಡಿಯಾ ಮೈತ್ರಿಕೂಟ ತಾನು ತೀರಾ ಸರ್ವಾಧಿಕಾರಿ ಮನೋಭಾವ ಮತ್ತು ಋಣಾತ್ಮಕ ಚಿಂತನೆ ಹೊಂದಿದೆ ಎಂಬುದನ್ನು ತೋರ್ಪಡಿಸಿದೆ,” ಎಂದು ಹೇಳಿದರು.
“ಸತ್ಯವನ್ನು ಹೇಳುವ ಮಾಧ್ಯಮಕ್ಕೆ ವಿಪಕ್ಷಗಳು ನೇರ ಬೆದರಿಕೆಯೊಡ್ಡಿವೆ, ಈ ಮೈತ್ರಿಕೂಟಕ್ಕೆ ಸತ್ಯವನ್ನು ಎದುರಿಸುವ ಧೈರ್ಯವಿಲ್ಲ. ದೇಶದಲ್ಲಿ ಪ್ರಜಾಪ್ರಭುತ್ವವಿದೆ, ಮಾಧ್ಯಮದ ಹಕ್ಕುಗಳನ್ನು ಸೆಳೆಯಲು ಯಾರಿಗೂ ಅನುಮತಿಸಲಾಗುವುದಿಲ್ಲ,” ಎಂದು ಬಿಜೆಪಿ ಹೇಳಿದೆ.
ವಿಪಕ್ಷ ಇಂಡಿಯಾ ಮೈತ್ರಿಕೂಟದಿಂದ ಬಹಿಷ್ಕಾರಕ್ಕೊಳಗಾಗಿರುವ ಆಜ್ ತಕ್‌ನ ಸುಧೀರ್ ಚೌಧರಿ ಪ್ರತಿಕ್ರಿಯಿಸಿ, “ಚರಣ್ ಚುಂಬಕ್ ಆಗಲು ನಿರಾಕರಿಸಿದ ಪತ್ರಕರ್ತರ ಪಟ್ಟಿಯನ್ನು ಇಂಡಿಯಾ ಮೈತ್ರಿಕೂಟ ಬಿಡುಗಡೆಗೊಳಿಸಿದೆ. ಈಗ ಈ ಪತ್ರಕರ್ತರನ್ನು ಬಹಿಷ್ಕರಿಸಿರುವುದರಿಂದ ಭಾರತೀಯ ಮಾಧ್ಯಮ ಇದಕ್ಕೇನು ಉತ್ತರ ನೀಡಲಿದೆ ಎಂದು ನೋಡಬೇಕಿದೆ,” ಎಂದು ಹೇಳಿದ್ದಾರೆ.
ಪಟ್ಟಿಯಲ್ಲಿ ತಮ್ಮ ಹೆಸರು ಮೊದಲು ಇದೆ ಎಂದು ಹೇಳಿದ ಭಾರತ್ ಎಕ್ಸ್‌ಪ್ರೆಸ್‌ನ ಅದಿತಿ ತ್ಯಾಗಿ, “ದೇಶಕ್ಕಾಗಿ ಪ್ರಶ್ನೆ ಕೇಳಿದ್ದಕ್ಕೆ ಹೀಗಾಗಿದೆ., ತ್ಯಾಗಿಗಳು ಭಯಪಡುವುದಿಲ್ಲ, ಜೈ ಹಿಂದ್” ಎಂದು ಟ್ವೀಟ್ ಮಾಡಿದ್ದಾರೆ.
ವಿಪಕ್ಷಗಳಿಂದ ಬಹಿಷ್ಕೃತಗೊಂಡ ಇನ್ನೋರ್ವ ನಿರೂಪಕಿ ‘ಭಾರತ್ 24’ನ ರುಬಿಕಾ ಲಿಯಾಖತ್ ತಮ್ಮ ಪೋಸ್ಟ್‌ನಲ್ಲಿ ಹೀಗೆ ಬರೆದಿದ್ದಾರೆ. “ಇದಕ್ಕೆ ನಿಷೇಧವೆನ್ನಲಾಗುವುದಿಲ್ಲ, ಇದು ಭಯ. ಇದು ಪ್ರಶ್ನೆಗಳಿಂದ ಓಡಿ ಹೋಗುವುದು,” ಎಂದು ಅವರು ಹೇಳಿದ್ದಾರೆ.
ದೂರದರ್ಶನ ಸುದ್ದಿಯ ಅಶೋಕ್ ಶ್ರೀವಾಸ್ತವ ಪ್ರತಿಕ್ರಿಯಿಸಿ “28 ಪಕ್ಷಗಳು 14 ಪತ್ರಕರ್ತರ ಬಗ್ಗೆ ಭಯಪಟ್ಟಿವೆ,” ಎಂದು ವ್ಯಂಗ್ಯವಾಡಿದ್ದಾರೆ.
ಟೈಮ್ಸ್ ನೌ ಸಂಪಾದಕಿ, ನಿರೂಪಕಿ ನವಿಕಾ ಕುಮಾರ್ ಈ ಕುರಿತು ಟ್ವೀಟ್ ಮಾಡಿ “ವಾಕ್ ಸ್ವಾತಂತ್ರ್ಯ ಹೋರಾಟಗಾರರ ನಿಜ ಬಣ್ಣ ಬಯಲಾಗಿದೆ, ಇಂಡಿಯಾ 14 ಟಿವಿ ಆಂಕರ್‌ಗಳನ್ನು ಬಹಿಷ್ಕರಿಸಿದೆ. ಅವರಿಗೆ ಸರದಿ ಇಷ್ಟವಿಲ್ಲ, ಅದಕ್ಕೆ ಶೋ ಬಹಿಷ್ಕರಿಸಿದ್ದಾರೆ, ದೌರ್ಜನ್ಯಕಾರಿ, ಸರ್ವಾಧಿಕಾರಿ ಮನಃಸ್ಥಿತಿ, ಮಾಧ್ಯಮ ಸ್ವಾತಂತ್ರ್ಯ ಈಗ ಮರೆತುಹೋಯಿತೇ?” ಎಂದು ಟ್ವೀಟ್ ಮಾಡಿದ್ದಾರೆ.