ಹರ್ಯಾಣ ಚುನಾವಣೆ: ಗುರ್ಮೀತ್ ಸಿಂಗ್ ಗೆ 6 ಬಾರಿ ಪೆರೋಲ್ ನೀಡುವಾಗ ಜೈಲರ್ ಆಗಿದ್ದ ಸಾಂಗ್ವಾನ್ ಗೆ ಬಿಜೆಪಿ ಟಿಕೆಟ್
ಸುನಿಲ್ ಸಾಂಗ್ವಾನ್ (Photo: X/@BJP4India/X)
ಹರ್ಯಾಣ: ಹರ್ಯಾಣ ವಿಧಾನಸಭೆ ಚುನಾವಣೆಗೆ 67 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಭಾರತೀಯ ಜನತಾ ಪಕ್ಷವು ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಅತ್ಯಾಚಾರ ಪ್ರಕರಣದ ದೋಷಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಗೆ 6 ಬಾರಿ ಪೆರೋಲ್ ನೀಡುವ ವೇಳೆ ಜೈಲರ್ ಆಗಿದ್ದ ಸುನಿಲ್ ಸಾಂಗ್ವಾನ್ ಗೆ ಬಿಜೆಪಿ ಮಣೆ ಹಾಕಿದೆ.
ಬಿಜೆಪಿ ಟಿಕೆಟ್ ಪಡದುಕೊಂಡಿರುವ ಮಾಜಿ ಜೈಲು ಅಧೀಕ್ಷಕ ಸುನಿಲ್ ಸಾಂಗ್ವಾನ್, ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ಸಿಂಗ್ ಅವರಿಗೆ ಪೆರೋಲ್ ಮಂಜೂರು ಮಾಡಲಾದ ಒಟ್ಟು 10 ಬಾರಿಯಲ್ಲಿ, 6 ಬಾರಿ ಮಂಜೂರು ವೇಳೆ ಅವರು ಹರಿಯಾಣದ ಸುನಾರಿಯಾ ಜೈಲಿನ ಸೂಪರಿಂಟೆಂಡೆಂಟ್ ಆಗಿದ್ದರು ಎಂದು The Print ವರದಿ ಮಾಡಿದೆ.
2017ರಲ್ಲಿ ಸಿರ್ಸಾ ಜಿಲ್ಲೆಯ ಡೇರಾ ಪ್ರಧಾನ ಕಚೇರಿಯಲ್ಲಿ ತನ್ನ ಇಬ್ಬರು ಮಹಿಳಾ ಶಿಷ್ಯೆಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಸಿಂಗ್ ಅವರಿಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇದಲ್ಲದೆ 2021ರಲ್ಲಿ ಅವರ ಮಾಜಿ ಮ್ಯಾನೇಜರ್ ರಂಜಿತ್ ಸಿಂಗ್ ಅವರ ಕೊಲೆ ಪ್ರಕರಣದಲ್ಲಿ ಇತರ ನಾಲ್ವರೊಂದಿಗೆ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು.
ಅ.5ರಂದು ಹರಿಯಾಣದಲ್ಲಿ ಮತದಾನ ನಡೆಯಲಿದೆ. ಅ. 8ರಂದು ಜಮ್ಮು ಮತ್ತು ಕಾಶ್ಮೀರದ ಮತ ಎಣಿಕೆಯ ದಿನವೇ ಹರ್ಯಾಣದಲ್ಲಿ ಕೂಡ ಮತ ಎಣಿಕೆ ನಡೆಯಲಿದೆ.
ಇನ್ನು ಮೊದಲ ಅಭ್ಯರ್ಥಿಗಳ ಪಟ್ಟಿಯಲ್ಲಿ ಟಿಕೆಟ್ ಕೈ ತಪ್ಪಿದ ಬಳಿಕ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಹರ್ಯಾಣದ ಸಚಿವ ರಂಜಿತ್ ಸಿಂಗ್ ಚೌಟಾಲಾ ಮತ್ತು ಶಾಸಕ ಲಕ್ಷ್ಮಣ್ ನಾಪಾ ಈಗಾಗಲೇ ಬಿಜೆಪಿಗೆ ರಾಜೀನಾಮೆ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.