ಸ್ಯಾನಿಟರಿ ಪ್ಯಾಡ್ಗಳ ಮೇಲೆ ಹೇರಲಾಗಿರುವ ಜಿಎಸ್ಟಿ ಪ್ರಶ್ನಿಸಿದ ಮಹಿಳೆಗೆ ಬಿಜೆಪಿ ಕಾರ್ಯಕರ್ತರಿಂದ ಹಲ್ಲೆ: ಪ್ರಕರಣ ದಾಖಲು
Photo: thenewsminute.com
ಹೊಸದಿಲ್ಲಿ: ಸ್ಯಾನಿಟರಿ ನ್ಯಾಪ್ಕಿನ್ಗಳಿಗೆ ಕೇಂದ್ರ ಸರ್ಕಾರ ಜಿಎಸ್ಟಿ ಹೇರಿರುವ ಕುರಿತಂತೆ ಪ್ರಶ್ನೆ ಕೇಳಿದ ಮಹಿಳೆಯೊಬ್ಬರನ್ನು ನಿಂದಿಸಿ ಆಕೆಗೆ ಹಲ್ಲೆಗೈದ ಆರೋಪದ ಮೇಲೆ ಪೊಲೀಸರು ತಿರುಪ್ಪುರ್ನಲ್ಲಿ ಐದು ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಮಹಿಳೆ ಮತ್ತು ಬಿಜೆಪಿ ಕಾರ್ಯಕರ್ತರ ನಡುವಿನ ವ್ಯಾಗ್ಯುದ್ಧದ ವೀಡಿಯೋ ವೈರಲ್ ಆಗಿದೆ. ಬಿಜೆಪಿಯ ತಿರುಪ್ಪುರ್ ಲೋಕಸಭಾ ಕ್ಷೇತ್ರದ ಅಭ್ರರ್ಥಿ ಎ ಪಿ ಮುರುಗನಂದಂ ಅವರ ಪ್ರಚಾರಾಭಿಯಾನದ ವೇಳೆ ಈ ಘಟನೆ ನಡೆದಿದೆ.
ರಿಟೇಲ್ ಗಾರ್ಮೆಂಟ್ ಘಟಕ ಹೊಂದಿರುವ ಹಾಗೂ ದ್ರಾವಿಡರ್ ವಿದುತಲೈ ಕಝಗಂ ಜಿಲ್ಲಾ ಸಂಘಟಕಿ ಆಗಿರುವ 37 ವರ್ಷದ ಸಂಗೀತಾ ತಮ್ಮ ದೂರಿನಲ್ಲಿ ತಾವು ಬಿಜೆಪಿ ಕಾರ್ಯಕರ್ತರಿಗೆ ಪ್ರಶ್ನೆ ಕೇಳಿದ್ದಕ್ಕೆ ತಮ್ಮ ಮೇಲೆ ಹಲ್ಲೆಗೈದು ನಿಂದಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆಯನ್ನು ಅವರು ತಮ್ಮ ಮೊಬೈಲ್ ಫೋನ್ನಲ್ಲಿ ಸೆರೆಹಿಡಿಯಲು ಅವರು ಯತ್ನಿಸಿದರೂ ಆರೋಪಿಗಳು ಫೋನ್ ಸೆಳೆದಿದ್ದರು, ಆಕೆಯನ್ನು ತಳ್ಳಾಡಿದ್ದರು ಎಂದು ದೂರಲಾಗಿದೆ.
ದೂರಿನಲ್ಲಿ ಬಿಜೆಪಿಯ ಚಿನ್ನಸಾಮಿ ಮತ್ತು ಇತರ ಪಕ್ಷದ ಕಾರ್ಯಕರ್ತರ ಹೆಸರು ಉಲ್ಲೇಖಿಸಲಾಗಿದೆ.
ಡಿಎಂಕೆ ಸಂಸದ ಕೆ ಸೆಲ್ವರಾಜ್ ಹಾಗೂ ತಿರುಪ್ಪುರ್ ಮೇಯರ್ ಎನ್ ದಿನೇಶ್ ಕುಮಾರ್ ಅವರು ಸಂಗೀತಾಗೆ ಕರೆ ಮಾಡಿ ವಿಚಾರಿಸಿದ್ದರಲ್ಲದೆ ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸರಿಗೂ ಆಗ್ರಹಿಸಿದ್ದರು.