22 ಸಾವಿರ ಮತದಾರರ ಹೆಸರು ಅಳಿಸಲು ದೊಡ್ಡ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸುತ್ತಿರುವ ಬಿಜೆಪಿ: ಆಪ್ ಆರೋಪ
ಅರವಿಂದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ | PTI
ಹೊಸದಿಲ್ಲಿ: ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ 7 ಕ್ಷೇತ್ರಗಳ ಮತದಾರರ ಪಟ್ಟಿಯಿಂದ ಮತದರಾರ ಹೆಸರನ್ನು ತೆಗೆಯುವಂತೆ ಬಿಜೆಪಿ ದೊಡ್ಡ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಹಾಗೂ ದಿಲ್ಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಬುಧವಾರ ಆರೋಪಿಸಿದ್ದಾರೆ.
ರಾಜ್ಯ ಸಭಾ ಸದಸ್ಯ ರಾಘವ ಚಡ್ಡಾ ಅವರೊಂದಿಗೆ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿಸೋಡಿಯಾ, ಅರವಿಂದ ಕ್ರೇಜಿವಾಲ್ ಅವರನ್ನು ತಡೆಯಲು ಹಾಗೂ ಚುನಾವಣೆಯಲ್ಲಿ ಅವರನ್ನು ಸೋಲಿಸಲು ಸಾಧ್ಯವಾಗದೇ ಇರುವಾಗ, ಬಿಜೆಪಿ ಅಡ್ಡ ದಾರಿಯಲ್ಲಿ ಜಯ ಗಳಿಸಲು ಪ್ರಯತ್ನಿಸುತ್ತಿದೆ ಎಂದರು.
ಮತದಾರರ ಪಟ್ಟಿಯಿಂದ 22 ಸಾವಿರ ಹೆಸರುಗಳನ್ನು ಅಳಿಸುವಂತೆ ಬಿಜೆಪಿಯ ಸದಸ್ಯರು ಹಾಗೂ ಬೆಂಬಲಿಗರು ಸಾಮೂಹಿಕವಾಗಿ ದೊಡ್ಡ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
‘‘ಮತದಾರರ ಪಟ್ಟಿಯಿಂದ 22 ಸಾವಿರ ಹೆಸರುಗಳನ್ನು ತೆಗೆದು ಹಾಕುತ್ತಿರುವುದು ಕಳವಳಕಾರಿ ವಿಚಾರವಾಗಿದೆ. ಇದರ ಹಿಂದೆ ಬಿಜೆಪಿಯ ಕೈವಾಡ ಇದೆ. ಚುನಾವಣಾ ಆಯೋಗ ಈ ಅರ್ಜಿಗಳನ್ನು ಪರಿಗಣಿಸುತ್ತಿರುವುದು ಇನ್ನೂ ಅಪಾಯಕಾರಿಯಾಗಿದೆ. ಈ ಕ್ಷೇತ್ರಗಳಲ್ಲಿ ನಾವು ಸೋಲುತ್ತೇವೆ ಹಾಗೂ ಅಲ್ಲಿ ಸಾಕಷ್ಟು ಬೆಂಬಲಿಗರಿಲ್ಲ ಎಂದು ಬಿಜೆಪಿ ಭಾವಿಸಿರಬಹುದು. ಆದುದರಿಂದ ಅದು ಮತದಾರರ ಹೆಸರನ್ನು ಅಳಿಸುವ ತಂತ್ರದಲ್ಲಿ ತೊಡಗಿದೆ’’ ಎಂದು ಅವರು ಹೇಳಿದ್ದಾರೆ.
ಏಳು ಕ್ಷೇತ್ರಗಳ ಹೆಸರುಗಳನ್ನು ಪಟ್ಟಿ ಮಾಡಿದ ಹಾಗೂ ಸ್ವೀಕರಿಸಲಾದ ನಕಲಿ ಅರ್ಜಿಗಳ ವಿವರಗಳನ್ನು ನೀಡಿದ ರಾಘವ ಚಡ್ಡಾ, ‘‘ಬಿಜೆಪಿಗೆ ಸಂಬಂಧಿಸಿದ ಜನರು ಮತದಾರರ ಹೆಸರು ಅಳಿಸುವಂತೆ ಅತ್ಯಧಿಕ ಸಂಖ್ಯೆಯಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂಬುದನ್ನು ನಾವು ಕಂಡು ಕೊಂಡಿದ್ದೇವೆ’’ ಎಂದಿದ್ದಾರೆ.
‘‘ಚುನಾವಣೆಗೆ ಕೇವಲ ಎರಡು ತಿಂಗಳು ಇರುವಾಗ ಈ ಹೆಸರುಗಳನ್ನು ಅಳಿಸುವ ಅಗತ್ಯ ಏನಿದೆ ? ಎಂಬ ಪ್ರಶ್ನೆ ಉದ್ಭವಿಸಿದೆ. ದೊಡ್ಡ ಸಂಖ್ಯೆಯಲ್ಲಿ ಮತದಾರರ ಹೆಸರನ್ನು ಅಳಿಸುವ ಹಿಂದೆ ಯಾರಿದ್ದಾರೆ? ಹೆಸರು ಅಳಿಸಲು ಒಬ್ಬ ವ್ಯಕ್ತಿ ಒಂದು ದಿನದಲ್ಲಿ 10ಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸುವಂತಿಲ್ಲ ಎಂಬ ನಿಯಮವಿದೆ’’ ಎಂದು ಅವರು ತಿಳಿಸಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ಆಮ್ ಆದ್ಮಿ ಪಕ್ಷದ ನಿಯೋಗ ಮುಖ್ಯ ಚುನಾವಣಾ ಆಯುಕ್ತರನ್ನು ಭೇಟಿಯಾಗಲಿದೆ ಹಾಗೂ ಮನವಿ ಸಲ್ಲಿಸಲಿದೆ ಎಂದು ಚಡ್ಡಾ ಅವರು ತಿಳಿಸಿದ್ದಾರೆ.