ಚುನಾವಣಾ ಫಲಿತಾಂಶದ ಭಯದಿಂದ ಬಿಜೆಪಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆ ಮುಂದಿಡುತ್ತಿದೆ: ಯೋಗೇಂದ್ರ ಯಾದವ್
ಯೋಗೇಂದ್ರ ಯಾದವ್ Photo: X// _YogendraYadav
ಹೊಸದಿಲ್ಲಿ: ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಫಲಿತಾಂಶದ ಭೀತಿಯಿಂದ ಬಿಜೆಪಿ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಮುಂದಿಡುತ್ತಿದೆ ಎಂದು ಸ್ವರಾಜ್ ಇಂಡಿಯಾದ ನಾಯಕ ಯೋಗೇಂದ್ರ ಯಾದವ್ ಅವರು ಪ್ರತಿಪಾದಿಸಿದ್ದಾರೆ.
ಮಹಾರಾಷ್ಟ್ರದ ಥಾಣೆ ನಗರದಲ್ಲಿ ಶನಿವಾರ ರಾತ್ರಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗೇಂದ್ರ ಯಾದವ್, ಬಿಜೆಪಿಯವರ ಒಂದೇ ಎಂಬುದು ‘‘ಒಂದು ರಾಷ್ಟ್ರ, ಒಂದು ಚುನಾವಣೆ, ಒಂದು ಪಕ್ಷ ಹಾಗೂ ಒಂದೇ ನಾಯಕ’’ನನ್ನು ಪ್ರಚಾರ ಮಾಡುವ ಪರಿಕಲ್ಪನೆಯೇ ಹೊರತು ಬೇರೇನೂ ಅಲ್ಲ ಎಂದರು.
ದೇಶ 2024ರಲ್ಲಿ ಹಲವು ಸವಾಲುಗಳನ್ನು ಎದುರಿಸಲಿದೆ. ಜನರು ಇದನ್ನು ಒಟ್ಟಾರೆಯಾಗಿ ಪರಿಗಣಿಸದೇ ಇದ್ದರೆ, ಅವರಿಗೆ ಇದನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಾಧ್ಯವಿಲ್ಲ. ‘ಇಂಡಿಯಾ’ ಮೈತ್ರಿಕೂಟದ ಸಾಮರ್ಥ್ಯ ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದೆ. ಇದರಿಂದ ಬಿಜೆಪಿ ಚಿಂತತವಾಗಿದೆ ಎಂದು ಅವರು ಹೇಳಿದರು.
“ಒಂದು ರಾಷ್ಟ್ರ ಒಂದು ಚುನಾವಣೆ’’ ಚುನಾವಣೆ ಸುಧಾರಣೆಯ ವಿಚಾರವಾಗಿ ಯಾವುದೇ ಸಂಬಂಧ ಹೊಂದಿಲ್ಲ. ಮೂಲ ಪರಿಕಲ್ಪನೆಗಿಂತಲೂ ಇದು ವಿಭಿನ್ನವಾಗಿದೆ. 2024ರ ಲೋಕಸಭಾ ಚುನಾವಣೆ ದೇಶದ ಮುಂದಿನ 50 ವರ್ಷಗಳ ದಿಕ್ಕನ್ನು ನಿರ್ಧರಿಸಲಿದೆ. ಆದುದರಿಂದ ಮುಂದಿನ ವರ್ಷ ನಡೆಯಲಿರುವ ಚುನಾವಣೆ ದೇಶದ ಜನರಿಗೆ ಅತ್ಯಂತ ಮಹತ್ವದ್ದಾಗಿದೆ ಎಂದರು.
ಬಿಜೆಪಿ ಜಾತಿ ಗಣತಿಯನ್ನು ಬಯಸುವುದಿಲ್ಲ. ಏಕೆಂದರೆ, ಅದರ ಫಲಿತಾಂಶವು ವಿವಿಧ ಜಾತಿಗಳ ನಿಜವಾದ ಆರ್ಥಿಕ ಹಾಗೂ ಶೈಕ್ಷಣಿಕ ಮಟ್ಟವನ್ನು ಬಹಿರಂಗಪಡಿಸಬಹುದು ಎಂಬ ಭೀತಿ ಅವರಿಗಿದೆ. ಅನಂತರ ಅದನ್ನು ಪರಿಹರಿಸಲು ಕಷ್ಟವಾಗಬಹುದು ಎಂಬುದು ಅದಕ್ಕೆ ತಿಳಿದಿದೆ. ಜಾತಿ ಗಣತಿ ದೇಶದ ಸಾಮಾಜಿಕ ವ್ಯವಸ್ಥೆಯ ಎಕ್ಸ್ ರೇ ಎಂದು ಯೋಗೇಂದ್ರ ಯಾದವ್ ಅವರು ತಿಳಿಸಿದರು.
ಮುಂದಿನ ತಿಂಗಳು ಮಿರೆರಾಂ, ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸ್ಗಢ ಹಾಗೂ ತೆಲಂಗಾಣ-ಈ ಐದು ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯಲಿದೆ.