ಕಳಮಶ್ಶೇರಿ ಘಟನೆಗೆ ಇಲ್ಲದ ಮುಸ್ಲಿಂ ನಂಟು ಸೃಷ್ಟಿಸಿದ ಬಿಜೆಪಿ ಮುಖಂಡ ಭಾಸ್ಕರ್ ರಾವ್
ಮಾಜಿ ಐಪಿಎಸ್ ಅಧಿಕಾರಿ ವಿರುದ್ಧ ಜನರ ಆಕ್ರೋಶ, ಸುಮ್ಮನಿರಿ ಎಂದು ಪ್ರತಿಕ್ರಿಯೆ
ಬೆಂಗಳೂರು : ಕೇರಳದ ಕೊಚ್ಚಿಯ ಕಳಮಶ್ಶೇರಿ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಸರಣಿ ಸ್ಪೋಟದಲ್ಲಿ ಓರ್ವ ಮಹಿಳೆ ಮೃತಪಟ್ಟು, ಕನಿಷ್ಠ 40 ಮಂದಿ ಗಾಯಗೊಂಡಿದ್ದಾರೆ. ಈ ಸ್ಪೋಟಕ್ಕೆ ನಾನೇ ಕಾರಣ ಎಂದು ಡೊಮಿನಿಕ್ ಮಾರ್ಟಿನ್ ಎಂಬಾತ ಫೇಸ್ ಬುಕ್ ಲೈವ್ ನಲ್ಲಿ ವೀಡಿಯೊ ಮೂಲಕ ಹೇಳಿದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.
ಈ ಘಟನೆಯ ಕುರಿತು ನಿವೃತ್ತ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ್ ರಾವ್ x ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ವಿವಾದಕ್ಕೆ ಕಾರಣವಾಗಿದೆ.
ಭಾಸ್ಕರ್ ರಾವ್, "ದೇಶದಲ್ಲಿ ಬಾಂಬ್ ಸ್ಫೋಟಗಳಿಗೆ ದೀರ್ಘ ವಿರಾಮವಿತ್ತು. ಕಾಂಗ್ರೆಸ್ ಮತ್ತು ಸಿಪಿಎಂನಿಂದ ದಶಕಗಳ ಕಾಲದ ಒಲೈಕೆಯ ಮತಬ್ಯಾಂಕ್ ರಾಜಕಾರಣವು ಮುಸ್ಲಿಮರನ್ನು ಅವಿದ್ಯಾವಂತರನ್ನಾಗಿ, ಹಿಂದುಳಿದವರನ್ನಾಗಿ ಮತ್ತು ಅಪರಾಧಿಗಳನ್ನಾಗಿ ಮಾಡಿದೆ... ಪರಿಣಾಮವಾಗಿ ಭಯೋತ್ಪಾದನೆಯನ್ನು ನಾವು ಮನೆಬಾಗಿಲಿಗೆ ಆಹ್ವಾನಿಸಿದ್ದೇವೆ. ಈ ಜನರು ಮುಖ್ಯವಾಹಿನಿಗೆ ಬರಲು ಯಾವಾಗ ಯೋಚಿಸುತ್ತಾರೆ....?" ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
ಈ ಪೋಸ್ಟ್ ನಲ್ಲಿ ಬೆಂಗಳೂರಿನ ನಿವೃತ್ತ ಪೊಲೀಸ್ ಕಮಿಶನರ್ ಆಗಿದ್ದ ಭಾಸ್ಕರ್ ರಾವ್, ಕಲಮಶ್ಶೇರಿ ಸ್ಪೋಟಕ್ಕೆ ಮುಸ್ಲಿಮರೇ ಕಾರಣ ಎಂದು ಪರೋಕ್ಷವಾಗಿ ಬಿಂಬಿಸಲು ಹೊರಟಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಕೇರಳದ ಕಲಮಶ್ಶೇರಿಯಲ್ಲಿ ಸ್ಪೋಟ ನಡೆದದ್ದು ಬೆಳಿಗ್ಗೆ 9 ಗಂಟೆ ಸುಮಾರಿಗೆ. ರಾಷ್ಟ್ರೀಯ ಮಾಧ್ಯಮಗಳಲ್ಲಿ 11.20 ರ ವೇಳೆಗೆ ಅದು ಸುದ್ದಿಯಾಯಿತು. ಆ ಬಳಿಕ ದಾಳಿಯ ಹಿಂದಿನ ಕೈಗಳ ಬಗ್ಗೆ ಎಲ್ಲೆಡೆ ಊಹಾಪೋಹಗಳೇ ಹರಿದಾಡಿದವು. ಕೇರಳ ಪೊಲೀಸರು ಸುಳ್ಳು ಸುದ್ದಿ ಹರಡಿದವರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬ ಎಚ್ಚರಿಕೆಯ ಸಂದೇಶವನ್ನೂ ನೀಡಿದರು. ಸಂಜೆ 4.20 ರ ವೇಳೆಗೆ ಎಡಿಜಿಪಿ ಎಂ.ಆರ್.ಅಜಿತ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಆರೋಪಿ ಡೊಮಿನಿಕ್ ಮಾರ್ಟಿನ್ ಶರಣಾಗಿದ್ದಾನೆ ಎಂದು ಧೃಡಪಡಿಸಿದರು. ಶರಣಾಗುವ ಮುಂಚೆ ಆರೋಪಿ 6 ತಿಂಗಳ ಹಿಂದೆ ತೆರೆದಿದ್ದ ಫೇಸ್ ಬುಕ್ ಖಾತೆಯಲ್ಲಿ ಲೈವ್ ಗೆ ಬಂದು ಕೃತ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೂ ವೈರಲಾಯಿತು.
ಭಾಸ್ಕರ್ ರಾವ್ ಅವರು ಸ್ಪೋಟದ ಕುರಿತು ತಮ್ಮ ಪೋಸ್ಟ್ ಹಂಚಿಕೊಂಡಿದ್ದು ಮಧ್ಯಾಹ್ನ 2.21ಕ್ಕೆ. ಆ ಹೊತ್ತಿಗೆ ಆರೋಪಿ ಯಾರೆಂಬ ಸುಳಿವು ಯಾರಿಗೂ ಸಿಕ್ಕಿರಲಿಲ್ಲ. ಆರೋಪಿ ಶರಣಾಗಿದ್ದು, ಪೊಲೀಸರು ಧೃಡಪಡಿಸಿದ್ದು ಸಂಜೆ 4.20ಕ್ಕೆ.
ಅದಕ್ಕೆ ಮೊದಲೇ ಮುಸ್ಲಿಮರೇ ಸ್ಫೋಟ ನಡೆಸಿದ್ದು ಎಂಬರ್ಥ ಬರುವಂತೆ ಪೋಸ್ಟ್ ಹಾಕಿದ್ದರು ಭಾಸ್ಕರ್ ರಾವ್. ನಿಜವಾದ ಆರೋಪಿ ಯಾರೆಂಬುದು ಬಹಿರಂಗವಾದ ಮೇಲೂ ಭಾಸ್ಕರ್ ರಾವ್ ಅವರು ತಮ್ಮ ಅಪಪ್ರಚಾರದ ಪೋಸ್ಟನ್ನು ಅಳಿಸಿ ಹಾಕಲಿಲ್ಲ ಅಥವಾ ತಮ್ಮ ಹೇಳಿಕೆಯ ಕುರಿತು ಸ್ಪಷ್ಟೀಕರಣ ನೀಡಲಿಲ್ಲ.
ಭಾಸ್ಕರ್ ರಾವ್ ಅವರ ಪೋಸ್ಟಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ತ್ರಿಶೂಲ್ ಎಂಬವರು, ಘಟನೆಯ ಹಿಂದಿರುವವರ ಬಗ್ಗೆ ನಿಮಗೆ ಈಗಾಗಲೇ ಸಾಕಷ್ಟು ತಿಳಿದಿದೆ ಎಂದು ಕಮೆಂಟ್ ಮಾಡಿದ್ದಾರೆ.
ವೋಟ್ ಬ್ಯಾಂಕ್ ರಾಜಕಾರಣದ ಹೆಸರಿನಲ್ಲಿ ರಾಷ್ಟ್ರೀಯ ಭದ್ರತೆ ಕಡೆಗಣಿಸ ಲ್ಪಟ್ಟರೆ ಮತ್ತು ತುಷ್ಟೀಕರಣದ ಹೆಸರಿನಲ್ಲಿ ಸಾಮಾಜಿಕ ಭದ್ರತೆಗೆ ಧಕ್ಕೆಯಾದರೆ ಭಾರತ ಯೆಮೆನ್ ಆಗಿ ಬದಲಾಗುತ್ತದೆ ಎಂದು ಡಾ ಮೇಘನಾಥ್ ಎನ್ನುವವರು ಪ್ರತಿಕ್ರಿಯಿಸಿದ್ದಾರೆ.
ಒಬ್ಬ IPS ಆಗಿ, ಕೇರಳದ ಜನಸಂಖ್ಯೆ, ಸಾಮಾಜಿಕ ರಚನೆ ಮತ್ತು ಶಿಕ್ಷಣ ವ್ಯವಸ್ಥೆಗಳ ಬಗ್ಗೆ ನಿಮಗೆ ಏನೂ ತಿಳಿದಿಲ್ಲ ಎಂದು ಪ್ರದೀಪ್ ಕುಮಾರ್ ಕಮೆಂಟ್ ಮಾಡಿದ್ದಾರೆ.
ಸಂಜಯ್ ವಿಜಯ ರಾಘವ ಎನ್ನುವವರು ಸರ್, ನೀವು ಮಾಜಿ ಪೊಲೀಸ್ ಅಧಿಕಾರಿ. ಈ ಪೋಸ್ಟಿನಿಂದ ತುಂಬಾ ನಿರಾಶೆಯಾಗಿದೆ. ತನಿಖೆಯ ಫಲಿತಾಂಶಗಳು ಹೊರಬರುವವರೆಗೆ ನೀವು ಕಾಯಲಿಲ್ಲ ಎಂದು ಬರೆದಿದ್ದಾರೆ.
ರೋಸಿನಂಟೆ ಎನ್ನುವ ಬಳಕೆದಾರರು, ಮಣಿಪುರ ಇದೆ ಎಂದು ನಿಮಗೆ ತಿಳಿದಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಅಲ್ಕೆಮಿಸ್ಟ್ ಎಂಬವರು ಸದ್ಯಕ್ಕೆ ಅಪರಾಧಿಯನ್ನು ಪೆಂಟೆಕೋಸ್ಟಲ್ ನಂಬಿಕೆಯ ವಿರೋಧಿ ಎಂದು ಗುರುತಿಸಲಾಗಿದೆ. ದಯವಿಟ್ಟು ಈ ಹಂತದಲ್ಲಿ ಮಸಾಲಾ ಸೇರಿಸಬೇಡಿ. ಎಲ್ಲಾ ರಾಜಕೀಯ ಪಕ್ಷಗಳು ಮತ್ತು ನಿಮ್ಮ ಸ್ವಂತ ಪಕ್ಷದ ಬಣ್ಣಗಳು ಕೂಡ ತುಷ್ಟೀಕರಣವನ್ನು ಅಭ್ಯಾಸ ಮಾಡುತ್ತವೆ. ಮತಾಂಧ ಭಯೋತ್ಪಾದಕರಿಗೆ ಧರ್ಮವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂಜಲಿ ಎನ್ನುವ ಬಳಕೆದಾರರು, ದಯವಿಟ್ಟು ಸುಮ್ಮನಿರಿ ಸರ್, ನಿಮ್ಮಂತಹ ಬೇಜವಾಬ್ದಾರಿ ಜನರು ಧರ್ಮ, ರಾಜಕೀಯ, ಜನಾಂಗ ಮತ್ತು ನಿಮಗೆ ಮನವರಿಕೆಯಾಗುವ ಎಲ್ಲದರ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಚುನಾವಣೆಯಲ್ಲಿ 10,000 ಮತಗಳನ್ನು ಗಳಿಸಲು ಸಾಧ್ಯವಾಗದ ಜನರು ಸಾರ್ವಜನಿಕ ಜೀವನವನ್ನು ತ್ಯಜಿಸುವ ಬಗ್ಗೆ ಯೋಚಿಸಬೇಕು ಎಂದು ಭಾಸ್ಕರ್ ರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.